ಸಂಘಪರಿವಾರದ ಡಬಲ್‌ ಎಂಜಿನ್‌ ಸರ್ಕಾರವನ್ನು ಕಿತ್ತೊಗೆಯೋಣ : ದೇವನೂರ ಮಹಾದೇವ

Date:

* ʼಎದ್ದೇಳು ಕರ್ನಾಟಕʼ ನಾಗರಿಕ ಅಭಿಯಾನದ ವತಿಯಿಂದ ಪತ್ರಿಕಾಗೋಷ್ಠಿ
* ಮುಂಬರುವ ಚುನಾವಣೆಯಲ್ಲಿ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು: ದೇವನೂರ ಮಹಾದೇವ

ಒಂದು ಎಂಜಿನ್‌ನಲ್ಲಿ ದ್ವೇಷ ತುಂಬಿಕೊಂಡಿದೆ. ಇನ್ನೊಂದು ಎಂಜಿನ್‌ ನುಂಗುವುದನ್ನು ಮಾಡುತ್ತಿದೆ. ಎಂಜಿನ್‌ ಜೋರಾಗಿ ಸದ್ದು ಮಾಡುತ್ತಿವೆ. ಅದು ಚಲಿಸುತ್ತಲೇ ಇಲ್ಲ. ಹಾಗಾಗಿ ಈ ಡಬಲ್‌ ಎಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಎದ್ದೇಳು ಕರ್ನಾಟಕ ನಾಗರಿಕ ಅಭಿಯಾನ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದು ಮತದಾರರು ಹೆಚ್ಚು ಜಾಗೃತರಾಗಿದ್ದಾರೆ ಎಂದು ಅನ್ನಿಸುತ್ತಿದೆ. ಹಿಂದಿನ ಯಾವ ಚುನಾವಣೆಯಲ್ಲೂ ನಾನು ಇಷ್ಟೊಂದು ಜಾಗೃತ ಪ್ರಜ್ಞೆಯನ್ನು ಕಂಡಿಲ್ಲ. ಮತಯಾಚಿಸಿ ಬಂದ ಅಭ್ಯರ್ಥಿಗಳಿಗೆ ಮತದಾರರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ” ಎಂದರು.

ʼಡಬಲ್‌ ಎಂಜಿನ್‌ ಸರ್ಕಾರʼ ಎಂಬ ಮಾತನ್ನು ಬಿಜೆಪಿಯ ಚಿಕ್ಕವರಿಂದ ದೊಡ್ಡನಾಯಕರವರೆಗೂ ಹೇಳಿ ಹೇಳಿ ಈಗ ಕರ್ನಾಟಕದ ಜನತೆಯ ಕಿವಿ ತೂತಾಗಿಬಿಟ್ಟಿರಬಹುದು. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಡಬಲ್‌ ಎಂಜಿನ್‌ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿಯೇ? ಇಂತಹ ಮಾತುಗಳನ್ನು ಪ್ರಜಾಪ್ರಭುತ್ವ, ಜನತಂತ್ರ ವ್ಯವಸ್ಥೆಯಲ್ಲಿ ಹೇಳುವುದು ಸರಿಯೆ? ಈ ಡಬಲ್‌ ಎಂಜಿನ್‌ ಸರ್ಕಾರ ಇದ್ದಲ್ಲಿ ಹೆಚ್ಚು ಅಭಿವೃದ್ಧಿ ಎನ್ನುವುದು ಒಕ್ಕೂಟ ವ್ಯವಸ್ಥೆಯ ಬುಡ ಅಲ್ಲಾಡಿಸಿದಂತಾಗುವುದಿಲ್ಲವೇ? ಹೀಗೆಲ್ಲಾ ನಾನು ತಲೆ ಕೆಡಿಸಿಕೊಂಡಿದ್ದೆ. ಆದರೆ ಮೊನ್ನೆ ತಾನೇ, ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಟಿವಿ ಚಾನೆಲ್‌ಗೆ ನಮ್ಮ ಹಳ್ಳಿಗಾಡಿನ ವ್ಯಕ್ತಿಯೊಬ್ಬ ಕೇಳುತ್ತಾನೆ –ʼಡಬಲ್‌ ಎಂಜಿನ್‌ ಸರ್ಕಾರ ಅಂತಾರೆ! ಕಾಂಗ್ರೆಸ್‌ ಸರ್ಕಾರ ಇದ್ದಾಗ 10 ಕೆ.ಜಿ ಅಕ್ಕಿ ಕೊಡ್ತಾ ಇತ್ತು. ಬಿಜೆಪಿಯ ಈ ಡಬಲ್‌ ಎಂಜಿನ್‌ ಸರ್ಕಾರ 20 ಕೆ.ಜಿ ಕೊಡಬೇಕಿತ್ತು ತಾನೇ?ʼ. ಈ ಅನುಭವದ ಮಾತು, ಇಂದಿನ ಭ್ರಮಾತ್ಮಕ ಅಭಿವೃದ್ಧಿಗೆ ಮುಖಾಮುಖಿಯಾಗಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದೇ ರೀತಿ ಇನ್ನೊಂದು. ಇದೂ ಕೂಡ ಹಳ್ಳಿಗಾಡಿನ ಮಹಿಳೆಯ ಮಾತು– ʼಈ ಗ್ಯಾಸ್‌ ಬರೋಕು ಮೊದಲು ನಾವು ಅಷ್ಟೋ ಇಷ್ಟು ಸೌದೆ ತಂದು ಅಡಿಗೆ ಮಾಡ್ಕೊತ್ತಿದ್ದೊ, ಆಗ ಹೊಗೆಗೆ ಕಣ್ಣಲ್ಲಿ ನೀರು ಬರುತ್ತಿತ್ತು. ಈಗ ಗ್ಯಾಸ್‌ ಬೆಲೆ ಏರಿಕೆಯಾಗಿ ಕಣ್ಣಲ್ಲಿ ರಕ್ತ ಬರ್ತಾ ಇದೆʼ –ಇಂತಹ ಕರುಳ ನುಡಿಗಳು ಕರ್ನಾಟಕದ ಉದ್ದಗಲಕ್ಕೂ ಆಕ್ರಂದನ ಮಾಡುತ್ತಿವೆ. ಈ ಡಬಲ್‌ ಎಂಜಿನ್‌ ಸರ್ಕಾರ ಮಾಡಿದ್ದೇನು? ಬೆಲೆ ಏರಿಕೆ ಅಭಿವೃದ್ಧಿ, ನಿರುದ್ಯೋಗದ ಏರಿಕೆ ಅಭಿವೃದ್ಧಿ, ಬಡತನದ ಏರಿಕೆ ಅಭಿವೃದ್ಧಿ, ಬಡವ ಬಲ್ಲಿದರ ನಡುವೆ ಅಂತರ ಏರಿಕೆ ಅಭಿವೃದ್ಧಿ –ಹೀಗೆ ಸಾಗುತ್ತಿದೆ, ಈ ಸಂಘಪರಿವಾರದ ಬಿಜೆಪಿ ಸರ್ಕಾರದ ದುರಂತ ಕಥೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಯಿ ಬಿಟ್ಟರೆ ʼಕಾಂಗ್ರೆಸ್‌ ಏನು ಮಾಡ್ತುʼ ಅಂತ ಲೇವಡಿ ಮಾಡುವ ಈ ಬಿಜೆಪಿ ಸರ್ಕಾರ, ಈ ಹಿಂದೆ ಕಾಂಗ್ರೆಸ್‌ ಮಾಡಿದ್ದ ಸಾರ್ವಜನಿಕ ಆಸ್ತಿಪಾಸ್ತಿ ಸಂಪತ್ತನ್ನು ತನ್ನಾಪ್ತ ಖಾಸಗಿಯವರಿಗೆ ಮಾರಿಕೊಂಡು ಬದುಕುತ್ತಿರುವ ಈ ಬಿಜೆಪಿ ಸರ್ಕಾರ ಯಾವುದೇ ಸಂಕೋಚ ನಾಚಿಕೆ ಇಲ್ಲದೆ ʼದಡ್ಡನಿಗೆ ಧೈರ್ಯ ಹೆಚ್ಚುʼ ಎಂಬಂತೆ ಮುನ್ನುಗ್ಗಿ ದಾಳಿ ಮಾಡುವುದನ್ನು ಮಾತ್ರ ಕಲಿತಿದೆ. ಈ ಡಬಲ್‌ ಇಂಜಿನ್‌ನಲ್ಲಿ ಕಾಣುವುದೇನು? ಒಂದು ಎಂಜಿನ್‌ನಲ್ಲಿ ದ್ವೇಷ ತುಂಬಿಕೊಂಡಿದೆ. ಇನ್ನೊಂದು ಈ ಡಬಲ್‌ ಎಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ.

ಇತ್ತೀಚೆಗೆ, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಒಂದಿಷ್ಟು ತರುಣರು ಮುತ್ತಿಗೆ ಹಾಕಿ– ʼನೀವು, ನಿಮ್ಮ ನಾಯಕರು ನಮ್ಮ ಸಂವಿಧಾನವನ್ನೇ ಬದಲಾಯಿಸ್ತೀವಿ ಅಂತೀರಿ. ಯಾಕೆ ನಾವು ನಿಮಗೆ ಓಟು ಕೊಡಬೇಕು? ಅಂತ ಹಿಗ್ಗಾಮುಗ್ಗಾ ಕೇಳಿದಾಗ, ಆ ಠೇಂಕಾರದ, ಉಡಾಫೆಯ ಸಂಸದರ ಬಾಯಿ ಬಂದ್‌ ಆಗಿತ್ತು. ನಾನು ನಿನ್ನೆ ತಾನೇ ವರುಣಾ ಕ್ಷೇತ್ರಕ್ಕೆ ಒಂದು ರೌಂಡ್‌ ಹೋಗಿದ್ದೆ. ಅಲ್ಲೆ ಸಿಕ್ಕಿದ ಕೆಲವು ಹುಡುಗರಿಗೆ ʼಏನ್ರಪ್ಪಾ, ಸಂಸದನಿಗೇನೆ ಕುತ್ತಿಗೆ ಪಟ್ಟಿ ಹಿಡಿದುಕೊಂಡವರಂತೆ ಕೇಳಿದ್ದು ಸರೀನಾ?ʼ, ಒಬ್ಬ ಹುಡುಗ ಹೇಳಿದ– “ನಮ್ಮ ಸಂವಿಧಾನ ಬದಲಾವಣೆ ಮಾಡಿ ಅವರ ʼಮನುಧರ್ಮಶಾಸ್ತ್ರʼ ಮತ್ತೆ ತರಬೇಕು ಅಂತ ಇದ್ದಾರೆ. ಹಾಗಾದರೆ ಈ ಹಿಂದೆ ಶೂದ್ರರು ಅಂದರೆ ಸೇವಕರಾಗಿದ್ದ ಒಕ್ಕಲಿಗರು, ಲಿಂಗಾಯತರು ಮತ್ತೆ ಅವರಿಗೆ ಸೇವಕರಾಗಬೇಕಾ? ತಳಸಮುದಾಯಗಳು ಮತ್ತೆ ಕಾಲಾಳುಗಳಾಗಬೇಕಾ? ಈಗೀಗ ಊರೊಳಕ್ಕೆ ಬರುತ್ತಿರುವ ಅಸ್ಪೃಶ್ಯರು ಮತ್ತೆ ಊರಾಚೆಗೆ ಇರಬೇಕಾ? ಹಳ್ಳಿ ಮಕ್ಕಳ ಸ್ಕಾಲರ್‌ಶಿಪ್‌ ಕಿತ್ತುಕೊಳ್ಳುವ ಬಿಜೆಪಿ ಸರ್ಕಾರದ ಉದ್ದೇಶವಾದರೂ ಏನು?” ಹೀಗೆ ಮುಂದುವರೆದಿತ್ತು ಆ ಹುಡುಗನ ಒಡಲಾಳದ ಮಾತುಗಳು. ನನಗೆ ಅಬ್ಬಾಡೆ ಅನ್ನಿಸಿತು. ನಾನು ಮಾತಾಡಲಿಲ್ಲ. ಆ ಹುಡುಗನಿಗೆ ಒಂದು ಹಗ್‌ ಮಾಡಿದೆ ಎಂದು ತಿಳಿಸಿದರು.

ಇದನ್ನು ಓದಿ ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ‘ಸುಪ್ರೀಂ’ ತಾತ್ಕಾಲಿಕ ತಡೆ

ಬಹುಶಃ ಎದ್ದೇಳು ಕರ್ನಾಟಕ ಮಾಡಬಹುದಾದದ್ದು ಇಷ್ಟೇ ಅನ್ನಿಸುತ್ತದೆ. ಜನಸಮುದಾಯದ ಒಡಲಾಳದ ನುಡಿಗಳಿಗೆ ಅಪ್ಪುಗೆ ಹಾಗೂ ಮೆಚ್ಚುಗೆಯ ಒಂದು ಮುಗುಳ್ನಗೆ. ನೆನಪಿಟ್ಟುಕೊಳ್ಳಬೇಕು– ಎದ್ದೇಳು ಕರ್ನಾಟಕ ಯಾರದೂ ಅಲ್ಲ; ಎಲ್ಲರದು. ಎಲ್ಲೇ, ಯಾರೇ ತಾವೇ ಮಾಡಿಕೊಳ್ಳಬಹುದು. ಪರಸ್ಪರ ಮಾಹಿತಿ ಇರಲಿ, ಅಷ್ಟೇ. ಸಮುದಾಯದ ಎಚ್ಚರ ಮತ್ತು ವಿವೇಕವನ್ನು ವ್ಯಾಪಕಗೊಳಿಸಲು ಎದ್ದೇಳು ಕರ್ನಾಟಕ ವೇಗವರ್ಧಕದಂತೆ ಕೆಲಸ ಮಾಡುತ್ತದೆ. ಈಗ, ಮಂಗಳೂರಿನ ಕಡೆಯ ಒಂದು ಸುದ್ದಿ ಓದಿದೆ. ಅಲ್ಲಿನ ಮತದಾರರು, ಬಿಜೆಪಿ ಅಭ್ಯರ್ಥಿಗಳಿಗೆ ನಮ್ಮ ಅಕೌಂಟಿಗೆ 15 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ, ಅಕೌಂಟ್‌ಗೆ ಹಣ ಹಾಕಿ ಎಂದು ಕೇಳುತ್ತಿದ್ದಾರೆ ಅನ್ನುವುದೇ ಆ ಸುದ್ದಿ! ಜನ ಮರೆತು ಬಿಡುತ್ತಾರೆ ಅಂತಾರೆ. ಆದರೆ ಜನ ಮರೆತಿಲ್ಲ, ಪ್ರಶ್ನಿಸುತ್ತಿದ್ದಾರೆ. ಇದನ್ನು ಎಲ್ಲೆಡೆ ಹಬ್ಬಿಸಲು ಎದ್ದೇಳು ಕರ್ನಾಟಕ ಕ್ರಿಯಾಶೀಲವಾಗಬೇಕಾಗಿದೆ. ಹೀಗೇ ಅನೇಕ ಮತದಾರರು, ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಎಷ್ಟು, ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಎಷ್ಟು ಎಂದು ಕುಪಿತರಾಗಿ ಪ್ರಶ್ನಿಸುತ್ತಿದ್ದಾರೆ –ಇಂತಹ ಇನ್ನೆಷ್ಟೊ ಸಮುದಾಯದ ವಿವೇಕ ವಿವೇಚನೆಗಳಿಗೆ ಪ್ರಜ್ಞಾವಂತ ವ್ಯಕ್ತಿ, ಸಂಘಟನೆಗಳು ಜೊತೆಗೂಡಬೇಕಾಗಿದೆ. ಜೊತೆಗೂಡಿ, 15 ಲಕ್ಷ ಹಾಕುತ್ತೇವೆ ಎಂದು ಪ್ರಧಾನಿಯಾದ ಮೋದಿಯವರಿಗೆ ಕರ್ನಾಟಕಕ್ಕೆ ಬಂದಾಗಲೆಲ್ಲಾ ʼಅಕೌಂಟ್‌ಗೆ 15 ಲಕ್ಷ ಹಾಕಿʼ ಎಂದು ಕೇಳಬೇಕಾಗಿದೆ. ನೆನಪಿಡಿ, ಯಾವ ಕಾರಣಕ್ಕೂ ಗೃಹಸಚಿವ ಅಮಿತ್‌ ಶಾ ಅವರಿಗೆ ಈ ಪ್ರಶ್ನೆ ಕೇಳಬಾರದು. ಕೇಳಿದರೆ ಅವರು ಮುಗುಳ್ನಗೆಯಲ್ಲೆ ಕೊಲ್ಲುತ್ತಾರೆ ಎಂದರು.

ಇದನ್ನು ಓದಿ ಈದಿನ.ಕಾಮ್ ಸಮೀಕ್ಷೆ-5: ಸರ್ಕಾರದ ಯೋಜನೆಗಳ ʼಫಲʼ ಬಿಜೆಪಿಗೆ ಸಿಗದು; ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಇನ್ನೂ ಇಲ್ಲ ಗ್ಯಾರಂಟಿ

ಆಮೇಲೆ ಏನು? ಈ ಸಂದಿಗ್ಧದ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಎದ್ದೇಳು ಕರ್ನಾಟಕ ತನ್ನ ಕರೆಯಲ್ಲಿ ಸ್ಪಷ್ಟವಾಗಿ ಹೇಳಿದೆ: “ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ, ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು. ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ” ಎಂದು ದೇವನೂರು ಹೇಳಿದರು.

ಇನ್ನೊಂದು ಸಂದಿಗ್ಧ. ಹಾಗಾದರೆ ಯಾವ ಪಕ್ಷಕ್ಕೆ ಮತ ನೀಡಬೇಕು? ಭಾರತ್‌ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್‌ ಮರುಹುಟ್ಟು ಪಡೆದಂತೆ ಕಾಣಿಸುತ್ತಿದೆ. ಬಹುತೇಕ ಕಾಂಗ್ರೆಸ್‌ ಪಕ್ಷಕ್ಕೇನೇ ಮತ ನೀಡಬೇಕಾಗಿದೆ. ಪ್ರಗತಿಪರ ಪಕ್ಷಗಳು ಎಲ್ಲಿ ಸ್ಪರ್ಧೆ ನೀಡುತ್ತಿವೆ ಎಂದು ಭರವಸೆ ಇರುತ್ತದೋ ಅಲ್ಲಿ ನಾಕಾರು ಕಡೆ ಬೆಂಬಲಿಸಬೇಕಾಗಿದೆ. ಮತ್ತೊಂದು ಸಂದಿಗ್ಧ. ಕಾಂಗ್ರೆಸ್‌ ಮೂರನೆ ಸ್ಥಾನದಲ್ಲಿ ಇರುವ ಕಡೆ? ಜೆಡಿಎಸ್‌ ಎಲ್ಲೆಲ್ಲಿ ಬಿಜೆಪಿಯ ನೇರಸ್ಪರ್ಧಿಯಾಗಿರುವುದು ಖಚಿತವೋ ಅಲ್ಲಿ ಜೆಡಿಎಸ್‌ಗೆ ಮತ ನೀಡಬೇಕು. ಒಟ್ಟಿನಲ್ಲಿ ಸಂಘಪರಿವಾರದ ಬಿಜೆಪಿ ಸೋಲಬೇಕು. ಈ ದುಷ್ಟಶಕ್ತಿಯ ಹಲ್ಲು ಉಗುರು ಕಿತ್ತು ಅದರ ಜೀವವನ್ನೂ ಉಳಿಸಬೇಕು. ಇದು ನಮ್ಮೆಲ್ಲರ ಹೆಗಲ ಮೇಲಿರುವ ಹೊಣೆಗಾರಿಕೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿಂತಕರಾದ ಯೋಗೇಂದ್ರ ಯಾದವ್, ರಹಮತ್ ತರೀಕೆರೆ, ತಾರಾ ರಾವ್, ತ್ರಿಲೋಚನ್ ಶಾಸ್ತ್ರಿ, ಯೂಸುಫ್ ಕಣ್ಣಿ, ವೀರಸಂಗಯ್ಯ ಮತ್ತು ಪ್ರೊ. ಜಾಫೆಟ್ ಉಪಸ್ಥಿತರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

ಛತ್ತೀಸ್‌ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುತೂಹಲದಿಂದ ಕೂಡಿದ್ದು ಕಾಂಗ್ರೆಸ್ ಹಾಗೂ...