ವಿಚ್ಛೇದಿತ ವ್ಯಕ್ತಿಯು ತಮ್ಮ ಪಾಸ್‌ಪೋರ್ಟ್‌ನಿಂದ ಮಾಜಿ ಸಂಗಾತಿಯ (ಪತಿ ಅಥವಾ ಪತ್ನಿ) ಹೆಸರನ್ನು ತೆಗೆದುಹಾಕಲು ನ್ಯಾಯಾಲಯದ ‘ವಿಚ್ಛೇದನ ಆದೇಶ’ವನ್ನು (ಡಿಕ್ರಿ) ಕಡ್ಡಾಯವಾಗಿ ಹಾಜರುಪಡಿಸುವಂತೆ ಪಾಸ್‌ಪೋರ್ಟ್ ಅಧಿಕಾರಿಗಳು ಒತ್ತಾಯಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಾಸ್‌ಪೋರ್ಟ್ ನಿಯಮಾವಳಿಗಳೇ ಇಂತಹ ಯಾವುದೇ ಸಾಕ್ಷ್ಯಾಧಾರಗಳನ್ನು ಕೇಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುರಳಿ ಪುರುಷೋತ್ತಮನ್ ಅವರಿದ್ದ ಏಕಸದಸ್ಯ ಪೀಠವು, ಪಾಸ್‌ಪೋರ್ಟ್ ನಿಯಮಗಳು-1980ರ ಅಡಿ ಬರುವ ‘ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳ’ 3ನೇ ಶೆಡ್ಯೂಲ್ ಅನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಿದೆ.
”ಶಾಸನಬದ್ಧ ನಿಯಮಗಳೇ ವಿಚ್ಛೇದನ ಆದೇಶವನ್ನು ಕಡ್ಡಾಯ ಮಾಡಿಲ್ಲದಿರುವಾಗ, ಕೇವಲ ಕಾರ್ಯಾಂಗದ ಸೂಚನೆಗಳು ಅಥವಾ ಕಚೇರಿ ಜ್ಞಾಪಕ ಪತ್ರಗಳನ್ನು (ಆಫೀಸ್ ಮೆಮೊರಾಂಡಮ್) ಮುಂದಿಟ್ಟುಕೊಂಡು ಅರ್ಜಿದಾರರ ಮೇಲೆ ಹೆಚ್ಚುವರಿ ಷರತ್ತುಗಳನ್ನು ಹೇರುವ ಅಧಿಕಾರ ಪಾಸ್‌ಪೋರ್ಟ್ ಅಧಿಕಾರಿಗಳಿಗಿಲ್ಲ. ಕಚೇರಿಯ ಸುತ್ತೋಲೆಗಳು ಶಾಸನಬದ್ಧ ನಿಯಮಗಳನ್ನು ಮೀರಿರಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಪಾಸ್‌ಪೋರ್ಟ್‌ನಿಂದ ಮಾಜಿ ಪತಿಯ ಹೆಸರನ್ನು ಅಳಿಸಿ, ಹೊಸದಾಗಿ ಪಾಸ್‌ಪೋರ್ಟ್ ಮರುಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ 2025ರಲ್ಲಿ ‘ತಲಾಖ್’ ಮೂಲಕ ಇವರಿಬ್ಬರು ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆದಿದ್ದರು. ಹೀಗಾಗಿ ಮಹಿಳೆಯ ಬಳಿ ನ್ಯಾಯಾಲಯ ನೀಡಿದ ಅಧಿಕೃತ ವಿಚ್ಛೇದನ ಆದೇಶವಿರಲಿಲ್ಲ. ಆದರೆ, ನ್ಯಾಯಾಲಯದ ಆದೇಶವಿಲ್ಲ ಎಂಬ ಕಾರಣ ನೀಡಿ ಪಾಸ್‌ಪೋರ್ಟ್ ಅಧಿಕಾರಿಗಳು ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ 2024ರ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಸುತ್ತೋಲೆಯನ್ನು ಪಾಸ್‌ಪೋರ್ಟ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡರು. “ಕೆಲವರು ತಪ್ಪು ಮಾಹಿತಿ ನೀಡಿ ಬೇರೆಯವರ ಹೆಸರನ್ನು ತಮ್ಮ ಸಂಗಾತಿ ಎಂದು ನಮೂದಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು, ಹೆಸರು ಅಳಿಸುವ ಪ್ರಕ್ರಿಯೆಯಲ್ಲಿ ವಿಚ್ಛೇದನ ಆದೇಶವನ್ನು ಕಡ್ಡಾಯಗೊಳಿಸಲಾಗಿದೆ” ಎಂದು ಅವರು ವಾದಿಸಿದರು.
ಅಧಿಕಾರಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಾಲಯವು, ‘ಆಯಿಷತ್ ಬುಣಯತ್ ಮತ್ತು ಕೇಂದ್ರ ಸರ್ಕಾರ’ ನಡುವಿನ ಹಿಂದಿನ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಸ್ಮರಿಸಿತು. “ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ‘ಮುಬಾರತ್’ (ಪರಸ್ಪರ ಸಮ್ಮತಿಯ ವಿಚ್ಛೇದನ) ಮೂಲಕ ಪಡೆದ ವಿಚ್ಛೇದನಕ್ಕೆ ಪಾಸ್‌ಪೋರ್ಟ್ ಅಧಿಕಾರಿಗಳು ಕೋರ್ಟ್ ಡಿಕ್ರಿಯನ್ನು ಕೇಳುವಂತಿಲ್ಲ. ಅದೇ ರೀತಿ ಪತಿಯು ‘ತಲಾಖ್’ ಘೋಷಿಸುವ ಮೂಲಕ ಪಡೆಯುವ ವಿಚ್ಛೇದನವು ಕೂಡ ಕಾನೂನುಬದ್ಧವಾಗಿದ್ದು, ಅದಕ್ಕೆ ಲಿಖಿತ ದಾಖಲೆಗಳಿಲ್ಲದಿದ್ದರೂ ಅದನ್ನು ಮಾನ್ಯ ಮಾಡಬೇಕು” ಎಂದು ಪೀಠವು ಹೇಳಿದೆ.
ಪಾಸ್‌ಪೋರ್ಟ್‌ನಿಂದ ಮಾಜಿ ಪತಿಯ ಹೆಸರನ್ನು ತೆಗೆದುಹಾಕುವಂತೆ ಕೋರಿ ಮಹಿಳೆ ಸಲ್ಲಿಸಿರುವ ಅರ್ಜಿಯನ್ನು ಮರುಪರಿಶೀಲಿಸಿ, ಒಂದು ತಿಂಗಳ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ನ್ಯಾಯಾಲಯವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಎಂ.ಎಸ್. ಶಾಜು ಪುರುಷೋತ್ತಮನ್ ಮತ್ತು ಕೆ.ಎಸ್. ರಾಜೇಶ್ ವಾದ ಮಂಡಿಸಿದರೆ, ಕೇಂದ್ರ ಸರ್ಕಾರ ಹಾಗೂ ಪಾಸ್‌ಪೋರ್ಟ್ ಅಧಿಕಾರಿಗಳ ಪರವಾಗಿ ಉಪ ಸಾಲಿಸಿಟರ್ ಜನರಲ್ ಒ.ಎಂ. ಶಾಲಿನಾ ಹಾಜರಿದ್ದರು.




