ASDDO ಅಂಕಿಅಂಶಗಳಲ್ಲಿ ಹೊಂದಾಣಿಕೆ ಇಲ್ಲ, 44 ಲಕ್ಷ ಮತದಾರರ ಮ್ಯಾಪಿಂಗ್ ಸಮಸ್ಯೆ, ಮತಗಟ್ಟೆಗಳ ಭಾರೀ ಸ್ಥಳಾಂತರ; ಅರ್ಹ ಮತದಾರರ ಹಕ್ಕು ಕಳೆದುಹೋಗದಂತೆ ತಕ್ಷಣ ಪರಿಶೀಲನೆಗೆ ಆಗ್ರಹ
ಕರ್ನಾಟಕದಲ್ಲಿ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹಲವು ಗಂಭೀರ ಲೋಪಗಳು, ಅಂಕಿಅಂಶಗಳ ಅಸ್ಪಷ್ಟತೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಸ್ಪಷ್ಟತೆ ಕೊರತೆ ಇದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಶುಕ್ರವಾರ ಪತ್ರ ಬರೆದಿರುವ ಅವರು, “SIR ಪ್ರಕ್ರಿಯೆಯಲ್ಲಿರುವ ಪ್ರತಿಯೊಂದು ಅನುಮಾನಕ್ಕೂ ಚುನಾವಣಾ ಆಯೋಗ ಲಿಖಿತವಾಗಿ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“SIR ಪ್ರಕ್ರಿಯೆ ಆರಂಭವಾದ ದಿನದಿಂದ ಹಿಡಿದು ASDDO ವರ್ಗೀಕರಣ, ಮತದಾರರ ಮ್ಯಾಪಿಂಗ್, ಮತಗಟ್ಟೆಗಳ ಮರುಹೊಂದಿಕೆ ಹಾಗೂ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡುವವರೆಗೆ ಹಲವು ಹಂತಗಳಲ್ಲಿ ಪ್ರಶ್ನೆಗಳು ಹಾಗೆಯೇ ಉಳಿದಿವೆ. ಪ್ರತ್ಯೇಕವಾಗಿ ನೋಡಿದಾಗ ಈ ಸಮಸ್ಯೆಗಳಿಗೆ ತಾಂತ್ರಿಕ ಕಾರಣಗಳಿರಬಹುದು; ಆದರೆ ಎಲ್ಲವನ್ನೂ ಒಟ್ಟಾಗಿ ಪರಿಗಣಿಸಿದಾಗ SIR ಪ್ರಕ್ರಿಯೆಯ ಪಾರದರ್ಶಕತೆ, ಸ್ಥಿರತೆ ಹಾಗೂ ಪರಿಶೀಲನಾರ್ಹತೆ ಕುರಿತು ಗಂಭೀರ ಅನುಮಾನಗಳು ಮೂಡುತ್ತವೆ” ಎಂದು ಹೇಳಿದ್ದಾರೆ.
“2025ರ ಅಂತಿಮ ಮತದಾರರ ಪಟ್ಟಿ 5,54,22,344 ಮತದಾರರು ಇದ್ದರು. ಆದರೆ, 2025ರ ಅಂತಿಮ ಪಟ್ಟಿಯಿಂದ 2026ರ ಜೂನ್ 30ರಂದು SIR ಆರಂಭವಾಗುವವರೆಗಿನ ಅವಧಿಯಲ್ಲಿ ಮತದಾರರ ಸೇರ್ಪಡೆ, ಹೆಸರು ತೆಗೆದುಹಾಕುವಿಕೆ ಹಾಗೂ ತಿದ್ದುಪಡಿಗಳು ನಡೆದಿವೆಯೇ, ನಡೆದಿದ್ದರೆ ಅದರ ಸಂಪೂರ್ಣ ಲೆಕ್ಕವೇನು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಎರಡು ಅವಧಿಗಳಲ್ಲಿಯೂ ಒಟ್ಟು ಮತದಾರರ ಸಂಖ್ಯೆ ಒಂದೇ ಆಗಿರುವುದರಿಂದ ಈ ಬಗ್ಗೆ ಸ್ಪಷ್ಟನೆ ಅಗತ್ಯವಿದೆ” ಎಂದು ಹೇಳಿದ್ದಾರೆ.
“SIRನ ಅತ್ಯಂತ ಪ್ರಮುಖ ಸಮಸ್ಯೆಯೇ ಎಎಸ್‌ಡಿಡಿಒ (Absent, Shifted, Dead, Duplicate and Others). 2025ರ ಅಂತಿಮ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಸಂಖ್ಯೆ ಮತ್ತು 2026ರ ಎಸ್‌ಐಆರ್‌ನಲ್ಲಿ ASDDO ಎಂದು ಗುರುತಿಸಲಾದವರ ಸಂಖ್ಯೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಂದಿಕೆಯಾಗುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ASDDO ಸಂಖ್ಯೆ ಹಿಂದಿನ ಪಟ್ಟಿಯಿಂದ ತೆಗೆದುಹಾಕಲ್ಪಟ್ಟವರಿಗಿಂತ ಹೆಚ್ಚಿದ್ದರೆ, ಇನ್ನೂ ಕೆಲವೆಡೆ ಕಡಿಮೆಯಾಗಿದೆ. ಇಂತಹ ವ್ಯತ್ಯಾಸಗಳನ್ನು ಕೇವಲ ‘ವಿವರಿಸಲಾಗದ ಮತದಾರರು’ ಎಂದು ವರ್ಗೀಕರಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ; ಪ್ರತಿ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲೂ ಅಂಕಿಅಂಶಗಳನ್ನು ಪರಸ್ಪರ ಹೊಂದಿಸಿ ಸ್ಪಷ್ಟನೆ ನೀಡಬೇಕು” ಎಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.
“ಮತಗಟ್ಟೆಗಳ ಮರುಹೊಂದಿಕೆಯೂ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ 2025ರ ಅಂತಿಮ ಪಟ್ಟಿಗೆ ಹೋಲಿಸಿದರೆ ಮತದಾರರನ್ನು ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸಲಾಗಿದೆ. ಇದರಿಂದ ಹಳೆಯ ಮತ್ತು ಹೊಸ ಪಟ್ಟಿಗಳ ಮತಗಟ್ಟೆವಾರು ಹೋಲಿಕೆ ಮತ್ತು Form-20 ಆಧಾರಿತ ವಿಶ್ಲೇಷಣೆ ಕಷ್ಟಕರವಾಗಿದೆ. ಹೀಗಾಗಿ ಚುನಾವಣಾ ಆಯೋಗವು ‘ಹಳೆ ಮತಗಟ್ಟೆ ಮತ್ತು ಹೊಸ ಮತಗಟ್ಟೆ ಮ್ಯಾಪಿಂಗ್’ಅನ್ನು ಸಂಪೂರ್ಣವಾಗಿ ಪ್ರಕಟಿಸಬೇಕು. ಜೊತೆಗೆ, ಇಷ್ಟೊಂದು ದೊಡ್ಡ ಪ್ರಮಾಣದ ಮತಗಟ್ಟೆ ಬದಲಾವಣೆಯ ಅಗತ್ಯ ಏನಿತ್ತು ಎಂಬುದನ್ನೂ ವಿವರಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಮಹದೇವಪುರ ವಿಧಾನಸಭಾ ಕ್ಷೇತ್ರದ SIR ಕರಡು ಪಟ್ಟಿಯಲ್ಲಿ ಕೆಲವು ಮತದಾರರ ಮನೆ ಸಂಖ್ಯೆಯನ್ನು ‘0’ ಎಂದು ತೋರಿಸಲಾಗಿದೆ. ಈ ಬಗ್ಗೆ ಈಗಾಗಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೂ, ತಪ್ಪುಗಳು ಮುಂದುವರೆದಿವೆ. ಇಂತಹ ಅನುಮಾನಾಸ್ಪದ ದಾಖಲೆಗಳು ಉಳಿದಿರುವುದು SIR ಪ್ರಕ್ರಿಯೆಯು ಸರಿಯಾಗಿ ನಡೆದಿದೆಯೇ ಎಂಬ ಪ್ರಶ್ನೆ ಹುಟ್ಟಿಸುತ್ತದೆ” ಎಂದು ಹೇಳಿದ್ದಾರೆ.
“ಕೆಲವು ವಿಧಾನಸಭಾ ಕ್ಷೇತ್ರಗಳ 2025ರ ಮತದಾರರ ಪಟ್ಟಿಯ PDF ಪ್ರತಿಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಇದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಳೆಯ ಮತ್ತು ಹೊಸ ಮತದಾರರ ಪಟ್ಟಿಗಳನ್ನು ಹೋಲಿಕೆ ಮಾಡಿ ವಿವರವಾದ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ತಕ್ಷಣ ಸರಿಪಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ
“ಕರಡು ಮತಪಟ್ಟಿಯಿಂದ ಸುಮಾರು 1.08 ಕೋಟಿ ಮತದಾರರನ್ನು ಹೊರಹಾಕಲಾಗಿದೆ. ಇನ್ನೂ ಸುಮಾರು 44 ಲಕ್ಷ ಮತದಾರರಿಗೆ ‘No Mapping’ ಮತ್ತು ‘Logical Anomaly’ ಸಮಸ್ಯೆಯಡಿ ನೋಟಿಸ್ ನೀಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮತದಾರರು ಅತಂತ್ರ ಪರಿಸ್ಥಿತಿಯಲ್ಲಿದ್ದು, ಪ್ರತಿ ಮತದಾರನ ಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಅಂಕಿಅಂಶಗಳನ್ನು ಹೊಂದಾಣಿಕೆ ಮಾಡಬೇಕು” ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.
“SIR ಪ್ರಕ್ರಿಯೆಯನ್ನು ಕೇವಲ ನಿಗದಿತ ಅವಧಿಯೊಳಗೆ ಮುಗಿಸಬೇಕೆಂಬ ಕಾರಣಕ್ಕೆ ಅವಸರದಲ್ಲಿ ನಡೆಸಬಾರದು. ಒಬ್ಬ ಅರ್ಹ ಮತದಾರನ ಹೆಸರೂ ತಪ್ಪಾಗಿ ಕೈಬಿಟ್ಟರೆ ಅದು ಆ ವ್ಯಕ್ತಿಯ ಮತದಾನದ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಈಗ ಗುರುತಿಸಲಾದ ಎಲ್ಲ ಅಸಂಗತತೆಗಳನ್ನು ಸಮಗ್ರವಾಗಿ ಮರುಪರಿಶೀಲಿಸಿ, ಯಾವುದೇ ಅರ್ಹ ಮತದಾರನು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಮಾತ್ರವಲ್ಲದೆ, “ಅಗತ್ಯವಿದ್ದರೆ ಹಕ್ಕು ಕಳೆದುಕೊಳ್ಳುವ ಸಾಧ್ಯತೆಯಿರುವ ಮತದಾರರ ಪರವಾಗಿ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ” ಎಂದಿದ್ದಾರೆ.
ಆಗಸ್ಟ್ 24ರಂದು ಪ್ರಕಟವಾದ ಅಧಿಕೃತ ಕರಡು ಮತಪಟ್ಟಿಯಲ್ಲಿ 4,46,80,151 ಮತದಾರರು ದಾಖಲಾಗಿದ್ದು, 1,07,96,415 ಜನರನ್ನು ASDDO ವರ್ಗದಡಿ ಹೊರಹಾಕಲಾಗಿದೆ. ಕರಡು ಪಟ್ಟಿಯಲ್ಲಿರುವ 4.46 ಕೋಟಿ ಮತದಾರರ ಪೈಕಿ ಸುಮಾರು 43.8 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಅವರೆಲ್ಲರನ್ನೂ ವಿಚಾರಣೆಗೆ ಕರೆಯಲಾಗುತ್ತಿದೆ.



