ಹಣ ಪಡೆದು ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆಂದು ಆರೋಪ
ವಿರೋಧ ವ್ಯಕ್ತವಾಗುತ್ತಲೇ ಫೇಸ್ ಬುಕ್ ಪೋಸ್ಟ್ ತೆಗೆದು ಹಾಕಿದ ಸಂಬರಗಿ
ನಟ ಶಿವರಾಜ್ ಕುಮಾರ್ ಹಣ ಪಡೆದು ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ, ಬಲಪಂಥೀಯ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ನಾಲಿಗೆ ಹರಿಬಿಟ್ಟಿದ್ದಾರೆ.
“ಶಿವಣ್ಣ ಯಾವತ್ತೂ ʼಸ್ಕ್ರಿಪ್ಟ್ʼ ಕೇಳುವುದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ, ಒಪ್ಪಿಕೊಂಡಿದ್ದ ಸಿನಿಮಾ ಮಾಡುತ್ತಾರೆ. ತುಂಬಾ ಎಮೋಶನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತೆಗೆದುಕೊಂಡು ಇನ್ನೊಂದು ಫಿಲಂ ಸೈನ್ ಮಾಡಿಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ದರೇನು, ಸೋತರೇನು ಎಲ್ಲ ಒಂದೇ. ಬಂತಾ ಪ್ಯಾಕೇಟ್ ಸರಿ. ಆಲ್ ರೈಟ್ ಮುಂದೆ ಹೋಗೋಣ” ಎಂದು ಶಿವರಾಜ್ ಕುಮಾರ್ ಹಣ ಪಡೆದು ಪ್ರಚಾರ ಮಾಡುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶಿವಣ್ಣನ ವಿರುದ್ಧ ಅಶ್ಲೀಲ ಪದ ಪ್ರಯೋಗವನ್ನು ಕೂಡ ಮಾಡಿದ್ದಾರೆ.

ಪ್ರಶಾಂತ್ ಸಂಬರಗಿ ಫೇಸ್ ಬುಕ್‌ನಲ್ಲಿ ಈ ರೀತಿಯ ವಿವಾದಾತ್ಮಕ ಬರಹವನ್ನು ಹಂಚಿಕೊಳ್ಳುತ್ತಲೇ ಶಿವಣ್ಣನ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. “ನೀನು ರಾಜಕೀಯ ಪಕ್ಷದ ಗುಲಾಮ. ನಿನಗೆ ಶಿವಣ್ಣನ ಬಗ್ಗೆ ಮಾತನಾಡುವ ಯೋಗ್ಯತೆ ನಿನಗೆ ಏನಿದೆ?” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿದ ಸ್ಯಾಂಡಲ್‌ವುಡ್ ತಾರೆಯರು
ರಾಜ್ ಕುಟುಂಬದ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಲೇ ಪ್ರಶಾಂತ್ ಸಂಬರಗಿ ತಮ್ಮ ಫೇಸ್ ಬುಕ್ ಕಾತೆಯಿಂದ ವಿವಾದಾತ್ಮಕ ಬರಹವನ್ನು ತೆಗೆದು ಹಾಕಿದ್ದಾರೆ. ಆದರೆ, ರಾಜ್ ಕುಟುಂಬದ ಅಭಿಮಾನಿಗಳು ವಿವಾದಿತ ಬರಹದ ʼಸ್ಕ್ರೀನ್ ಶಾಟ್ʼ ಮುಂದಿಟ್ಟು ಪರಿಣಾಮ ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ.