ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅಭಿನಯದ ಮುಂಬರುವ ಬಹುನಿರೀಕ್ಷಿತ ‘ಎ ಫಾರ್ ಆನಂದ್’ (A for Anand) ಸಿನಿಮಾದಲ್ಲಿ ಬಾಲಿವುಡ್‌ನ ಹಿರಿಯ ನಟಿ ಮಾಧುರಿ ದೀಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗುತ್ತಿದೆ.
‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ‘ಘೋಸ್ಟ್’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀನಿ ನಿರ್ದೇಶಿಸುತ್ತಿದ್ದಾರೆ. ಶಿವಣ್ಣ ಮತ್ತು ಮಾಧುರಿ ದೀಕ್ಷಿತ್ ಅವರ ನಡುವಿನ ಮಾತುಕತೆಗಳು ಸದ್ಯ ಪ್ರಗತಿಯಲ್ಲಿದ್ದು, ತಂಡವು ಈ ಕುರಿತು ಗುಟ್ಟಾಗಿ ಚರ್ಚೆಗಳನ್ನು ನಡೆಸುತ್ತಿದೆ. ಒಂದು ವೇಳೆ ಈ ಮಾತುಕತೆ ಯಶಸ್ವಿಯಾದರೆ, ಇದು ಮಾಧುರಿ ದೀಕ್ಷಿತ್ ಅವರ ಚೊಚ್ಚಲ ಕನ್ನಡ ಸಿನಿಮಾವಾಗಲಿದೆ.
ಇದನ್ನೂ ಓದಿ: ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಸೇರ್ಪಡೆ
‘ಎ ಫಾರ್ ಆನಂದ್’ ಚಿತ್ರವು ಗುರು-ಶಿಷ್ಯರ ನಡುವಿನ ಭಾವನಾತ್ಮಕ ಹಾಗೂ ವಿಶೇಷ ಬಂಧದ ಸುತ್ತ ಸಾಗುವ ಕಥೆಯಾಗಿದೆ. ಶಿವಣ್ಣ ಅವರ ಚೊಚ್ಚಲ ಚಿತ್ರ ‘ಆನಂದ್’ ಹೆಸರನ್ನೇ ನೆನಪಿಸುವಂತೆ ಈ ಶೀರ್ಷಿಕೆ ಇಟ್ಟಿರುವುದರಿಂದ ಅಭಿಮಾನಿಗಳಲ್ಲಿ ಈಗಾಗಲೇ ಅಪಾರ ನಿರೀಕ್ಷೆ ಮೂಡಿದೆ. ಈ ವಿಶಿಷ್ಟ ಕಥಾಹಂದರಕ್ಕೆ ತಕ್ಕಂತೆ ಬಲವಾದ ಪಾತ್ರವೊಂದಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಕರೆತರಲು ನಿರ್ದೇಶಕ ಶ್ರೀನಿ ಪ್ರಯತ್ನಿಸುತ್ತಿದ್ದಾರೆ.
ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಶೀಘ್ರದಲ್ಲೇ ನಟ-ನಟಿಯರ ಸಂಪೂರ್ಣ ವಿವರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.




