ಸ್ಟಾರ್ ನಟರು ಬಿಜೆಪಿ ಸೇರುವುದು ಬಹುತೇಕ ಖಚಿತ
ಬಿಜೆಪಿ ಶಾಸಕರ ಪರ ಪ್ರಚಾರ ಶುರುವಿಟ್ಟುಕೊಂಡಿರುವ ದರ್ಶನ್
ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಇದೇ ಹೊತ್ತಿನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಸುದೀಪ್ ಮತ್ತು ದರ್ಶನ್ ಬಿಜೆಪಿ ಸೇರಲಿದ್ದಾರೆ ಎಂಬ ಚರ್ಚೆ ಮತ್ತೆ ಜೋರಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸುದೀಪ್ ಇಂದು ಮಧ್ಯಾಹ್ನ 1:30ಕ್ಕೆ ಬಿಜೆಪಿ ಸೇರಲಿದ್ದು, ಅದಾದ ಬಳಿಕ 2:30ರ ಹೊತ್ತಿಗೆ ದರ್ಶನ್ ಕೂಡ ಕಮಲ ಪಾಳಯ ಸೇರಲಿದ್ದಾರೆ ಎಂದು ವರದಿಯಾಗಿದೆ.
ಸುದೀಪ್ ಮತ್ತು ದರ್ಶನ್, ಈ ಇಬ್ಬರು ನಟರ ರಾಜಕೀಯ ಒಲವು ಮತ್ತು ನಿಲುವುಗಳು ಹಲವು ವರ್ಷಗಳಿಂದ ಚರ್ಚೆಯಲ್ಲಿವೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಪಕ್ಷಗಳ ಪ್ರಮುಖರು ಈ ನಟರಿಗೆ ಪಕ್ಷ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದರು.
ಕೆಲ ದಿನಗಳ ಹಿಂದಷ್ಟೇ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸುದೀಪ್ ಅವರನ್ನು ಭೇಟಿಯಾಗಿ ತಮ್ಮ ಪಕ್ಷ ಸೇರಿಕೊಳ್ಳುವಂತೆ ಆಹ್ವಾನಿಸಿದ್ದರು.
ಈ ಬಗ್ಗೆ ‘ಕೆಸಿಸಿ’ ಪಂದ್ಯಾವಳಿಯ ವೇಳೆ ಪ್ರತಿಕ್ರಿಯಿಸಿದ್ದ ಸುದೀಪ್, “ಡಿ.ಕೆ ಶಿವಕುಮಾರ್ ನನ್ನನ್ನು ಪಕ್ಷಕ್ಕೆ ಕರೆದಿದ್ದು ಸತ್ಯ. ರಮ್ಯ ಕೂಡ ಈ ವಿಚಾರವಾಗಿ ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ನನ್ನ ಸ್ನೇಹಿತರಿದ್ದಾರೆ. ಅವರು ತಮ್ಮ ಪಕ್ಷಗಳಿಗೆ ಆಹ್ವಾನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ರಾಜಕೀಯ ಪ್ರವೇಶದ ಬಗ್ಗೆ ನಾನಿನ್ನೂ ನಿರ್ಧರಿಸಿಲ್ಲ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಅಲೆಮಾರಿ ಜನರಿಗೆ ಪ್ರವೇಶ ನಿರಾಕರಿಸಿದ ಚಿತ್ರಮಂದಿರದ ಸಿಬ್ಬಂದಿ
ಇನ್ನು ದರ್ಶನ್, 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರ ಬೆನ್ನಿಗೆ ನಿಂತಿದ್ದರು. ಸುಮಲತಾ ಅವರ ಗೆಲುವಿಗೆ ದರ್ಶನ್ ಮತ್ತು ಯಶ್ ಜೋಡಿಯ ಅಬ್ಬರದ ಪ್ರಚಾರ ಪ್ರಮುಖ ಕಾರಣವಾಗಿತ್ತು. ಈ ಬಾರಿಯ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿಯ ಹಾಲಿ ಶಾಸಕ ಸತೀಶ್ ರೆಡ್ಡಿ ಪರ ರೋಡ್ ಶೋ ನಡೆಸಿದ್ದ ದರ್ಶನ್ ಇದೀಗ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಬೆಂಬಲದಿಂದ ಗೆದ್ದಿದ್ದ ಸುಮಲತಾ ಕೂಡ ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.