ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿರುವ ಪ್ರಾಚ್ಯ ಅವಶೇಷ ಅನ್ವೇಷಣೆ ಸಪ್ತಾಹದಲ್ಲಿ ಇಲ್ಲಿನ ದುರ್ಗಾದೇವಿ ಕೆರೆಯಲ್ಲಿ ಹೊಯ್ಸಳ ಶೈಲಿಯ ಎರಡು ಪ್ರಾಚ್ಯ ಅವಶೇಷಗಳು ಸಿಕ್ಕಿರುವುದಾಗಿ ವರದಿಯಾಗಿದೆ.
ಲಕ್ಕುಂಡಿಯ ದುರ್ಗಾದೇವಿ ಕೆರೆಯಲ್ಲಿ ದೊರೆತಿರುವ 800 ವರ್ಷಗಳ ಹೊಯ್ಸಳ ‘ಸಂಗೀತ-ನೃತ್ಯ’ ಶಿಲ್ಪಗಳು ಕಲಾತ್ಮಕತೆಯಿಂದ ಕೂಡಿವೆ. ಈ ಪ್ರಾಚ್ಯ ಅವಶೇಷದಲ್ಲಿ ವಾದ್ಯ ನುಡಿಸುತ್ತಿರುವ ಪುರುಷ ಮತ್ತು ನೃತ್ಯನಿರತ ಭಂಗಿಯಲ್ಲಿರುವ ಸ್ತ್ರೀ ಶಿಲ್ಪಗಳಿವೆ. ಒಂದು ಶಿಲ್ಪದಲ್ಲಿ ಪುರುಷ ಮದ್ದಳೆಯನ್ನು ಬಾರಿಸುತ್ತಿದ್ದು, ಅದಕ್ಕೆ ಸ್ತ್ರೀ ನೃತ್ಯ ಮಾಡುತ್ತಿರುವುದು, ಮತ್ತೊಂದರಲ್ಲಿ ಪುರುಷ ವೇಣುವಾದನದಲ್ಲಿ ತಲ್ಲೀನನಾಗಿದ್ದರೆ, ಮಹಿಳೆಯು ನೃತ್ಯ ಮಾಡುತ್ತಿರುವ ಶೈಲಿ ಅವಶೇಷದಲ್ಲಿದೆ.
‘ಈ ಪ್ರಾಚ್ಯ ಅವಶೇಷಗಳ ಕೆತ್ತನೆಯಲ್ಲಿರುವ ನಯ-ನುಣುಪು ಮತ್ತು ಜೀವಂತಿಕೆಯನ್ನು ನೋಡಿದರೆ, ಹೊಯ್ಸಳರ ಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.
ಲಕ್ಕುಂಡಿ – ಹೊಯ್ಸಳ- ಚಾಲುಕ್ಯ ಕಲೆಯ ಗರ್ಭಗೃಹ
ಲಕ್ಕುಂಡಿ ಒಂದು ಕಾಲದಲ್ಲಿ ʼ101 ದೇವಾಲಯಗಳ ನಗರಿʼ ಎಂದೇ ಪ್ರಸಿದ್ಧವಾಗಿತ್ತು. ಪಶ್ಚಿಮ ಚಾಲುಕ್ಯರ ಕಾಲದಿಂದ ಹೊಯ್ಸಳರ ಅವಧಿಯವರೆಗೆ ಇಲ್ಲಿ ಸಾಂಸ್ಕೃತಿಕ-ಕಲಾತ್ಮಕ ಕೇಂದ್ರವಾಗಿ ಅಭಿವೃದ್ಧಿಯಾಗಿತ್ತು. ಇಲ್ಲಿ ಸಿಕ್ಕಿರುವ ಶಿಲ್ಪಗಳು ಕೇವಲ ದೇವರ ವಿಗ್ರಹಗಳಲ್ಲ; ಸಾಮಾನ್ಯ ಜನರ ಜೀವನ, ಸಂಗೀತ, ನೃತ್ಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ ದಾಖಲಿಸುವ ಸಾಕ್ಷ್ಯಗಳಾಗಿವೆ.
ಹೊಯ್ಸಳ ಶೈಲಿಯ ವಿಶೇಷತೆಗಳಾದ ಸೂಕ್ಷ್ಮ ಕೆತ್ತನೆ, ನಯವಾದ ಬಳ್ಳಿ-ಬಳ್ಳಿ ಅಲಂಕಾರ, ಜೀವಂತ ಭಂಗಿಗಳು ಮತ್ತು ದೈನಂದಿನ ಜೀವನದ ಚಿತ್ರಣ ಈ ಶಿಲ್ಪಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇಂತಹ ಶಿಲ್ಪಗಳು ಹಾಸನ ಜಿಲ್ಲೆಯ ಬೇಲೂರು-ಹಳೇಬೀಡುಗಳಲ್ಲಿ ಕಾಣುವಂತೆಯೇ ಲಕ್ಕುಂಡಿಯಲ್ಲೂ ಇದ್ದವು ಎಂಬುದನ್ನು ಈ ಕಂಡುಹಿಡಿತ ಮತ್ತೊಮ್ಮೆ ಸಾಬೀತುಪಡಿಸುತ್ತದೆ.
ಇದರ ಮಹತ್ವ ಏನು?
ಲಕ್ಕುಂಡಿಯನ್ನು UNESCO ವಿಶ್ವ ಪಾರಂಪರಿಕ ಸ್ಥಳವಾಗಿ ಗುರುತಿಸುವ ಪ್ರಯತ್ನಗಳಿಗೆ ಈ ಅವಶೇಷಗಳು ಬಲವಾದ ಸಾಕ್ಷ್ಯವಾಗುತ್ತವೆ.
ನೀರಿನಡಿಯಲ್ಲಿಯೂ ಇನ್ನಷ್ಟು ಅಮೂಲ್ಯ ಕಲಾಕೃತಿಗಳು ಇರಬಹುದೆಂಬ ಆಶಾಕಿರಣ ಹುಟ್ಟಿಸುತ್ತದೆ. ಇವುಗಳು
ಕರ್ನಾಟಕದ ಪ್ರಾಚೀನ ಸಂಗೀತ-ನೃತ್ಯ ಪರಂಪರೆಯನ್ನು ದೃಶ್ಯರೂಪದಲ್ಲಿ ತೋರಿಸುವ ಅಪರೂಪದ ದಾಖಲೆಯಾಗಿವೆ. ಅಲ್ಲದೆ ಈ ಶಿಲ್ಪಗಳು ನಮಗೆ ಹೊಯ್ಸಳರ ಕಾಲದ ಸಂಸ್ಕೃತಿ, ಕಲೆ ಮತ್ತು ಜೀವನಶೈಲಿಯನ್ನು ತಿಳಿಸುತ್ತವೆ. ಇವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಮಾನತೆಯ ಹರಿಕಾರ ಬಸವಣ್ಣ : ಪ್ರೊ.ಬಿ.ಎಸ್.ಬಿರಾದಾರ
ಜನವರಿ 10ರಂದು ಲಕ್ಕುಂಡಿ ಗ್ರಾಮದ ಚವಡಿ ಹತ್ತಿರದ ಪ್ರಜ್ವಲ್ ರಿತ್ತಿ ಎಂಬುವರ ಮನೆ ನಿರ್ಮಾಣದ ಕಾಮಗಾರಿ ವೇಳೆ 634 ಗ್ರಾಂ ತಂಬಿಗೆಯಲ್ಲಿ 466 ಗ್ರಾಂ ಚಿನ್ನಾಭರಣಗಳ ಅವಶೇಷಗಳು ಸಿಕ್ಕಿದ್ದವು. ಇದು ಇಲ್ಲಿಯ ಇತಿಹಾಸಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ಮತ್ತೊಂದು ಇತಿಹಾಸಕ್ಕೆ ಮುನ್ನುಡಿ ಬರೆದಂತಾಗಿತ್ತು. ಬಳಿಕ ಲಕ್ಕುಂಡಿಯಲ್ಲಿ ಪ್ರಾಚ್ಯ ಅವಶೇಷ ಅನ್ವೇಷಣೆ ಸಪ್ತಾಹ ಕೈಗೊಳ್ಳಲಾಗಿತ್ತು.
ಇಂತಹ ಅವಶೇಷಗಳನ್ನು ಕಂಡಾಗ ಸ್ಥಳೀಯರು, ಸರ್ಕಾರ ಮತ್ತು ಪ್ರವಾಸಿಗರು ಒಟ್ಟಾಗಿ ಅವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಿದೆ. ಲಕ್ಕುಂಡಿಯನ್ನು ಸಂರಕ್ಷಿಸುವುದು ಕೇವಲ ದೇವಾಲಯಗಳನ್ನು ಕಾಪಾಡುವುದಲ್ಲ, ನಮ್ಮ ಗುರುತನ್ನೇ ಕಾಪಾಡುವ ಕೆಲಸ. ಆ ಶಿಲ್ಪಗಳೇ ಮುಂದಿನ ಪೀಳಿಗೆಗೆ ಇಲ್ಲಿಯ ಸೊಬಗನ್ನು ತಿಳಿಸುವಂತಾಗಬೇಕು.




