ದೇಶದ 53 ನಗರಗಳಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣಗಳ ವಿವರವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ- ಎನ್‌ಸಿಆರ್‌ಬಿ (National Crime Records Bureau) ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ದೆಹಲಿ ನಂತರ ಬೆಂಗಳೂರೇ ಆತ್ಮಹತ್ಯೆಗಳ ‘ರಾಜಧಾನಿ’ ಎನಿಸಿಕೊಂಡಿದೆ. 2024ರಲ್ಲಿ ದೆಹಲಿಯಲ್ಲಿ 2,905 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರಿನಲ್ಲಿ 2,403 ಆತ್ಮಹತ್ಯೆಗಳು ಸಂಭವಿಸಿವೆ. ಇನ್ನು ಮುಂಬೈನಲ್ಲಿ 1,406 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ಆದರೆ ದೆಹಲಿಯಲ್ಲಿ (ಜನಸಂಖ್ಯೆಯ ಅಂದಾಜು ಅಂಕಿಅಂಶಗಳ ಆಧಾರದ ಮೇಲೆ) ಆತ್ಮಹತ್ಯೆ ಪ್ರಮಾಣವು ಲಕ್ಷ ಜನರಿಗೆ 13.2 ಆಗಿದೆ. ಬೆಂಗಳೂರಿನಲ್ಲಿ ಲಕ್ಷ ಜನರಲ್ಲಿ 16.7 ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಈ ಪ್ರಮಾಣ 11 ಆಗಿದೆ. ಅಂದರೆ ಈ ಅಗ್ರ ಮೂರು ನಗರಗಳಲ್ಲಿ ಬೆಂಗಳೂರ ಜನಸಂಖ್ಯೆ ಆಧಾರದಲ್ಲಿ ನೋಡಿದಾಗ, ನಗರದಲ್ಲಿ ಆತ್ಮಹತ್ಯೆ ಪ್ರಮಾಣ ಅಧಿಕವಾಗಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡವರಲ್ಲಿ ವಿವಾಹಿತರೇ ಅಧಿಕವಾಗಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಮಾಜಿ ಶಾಸಕರ ಪುತ್ರನ ಆತ್ಮಹತ್ಯೆ ಪ್ರಕರಣ; ಸಮಗ್ರ ತನಿಖೆಗೆ ಎಸ್‌ಪಿಗೆ ಮನವಿ
ಇನ್ನು ಕರ್ನಾಟಕದ ಸ್ಥಿತಿ ಚಿಂತಾಜನಕವಾಗಿದೆ ಎಂಬುದನ್ನು ಎನ್‌ಸಿಆರ್‌ಬಿ ವರದಿ ಹೇಳುತ್ತದೆ. 2022 ಮತ್ತು 2024ರ ನಡುವೆ ರಾಜ್ಯದ ಒಟ್ಟಾರೆ ಆತ್ಮಹತ್ಯೆ ಪ್ರಕರಣವು ಹೆಚ್ಚಳವಾಗುತ್ತಲೇ ಸಾಗಿದೆ. ಅದರಲ್ಲೂ ಬೆಂಗಳೂರು ನಗರದಲ್ಲೇ ಅಧಿಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ಎನ್‌ಸಿಆರ್‌ಬಿ ಪ್ರಕಾರ ಬೆಂಗಳೂರಿನಲ್ಲಿ 2022ರಲ್ಲಿ 2,313 ಕ್ಕೂ ಹೆಚ್ಚು, 2023ರಲ್ಲಿ 2370 ಮತ್ತು 2024ರಲ್ಲಿ 2430 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಮೂರು ವರ್ಷಗಳ ಅವಧಿಯಲ್ಲಿ ನಗರದ ಆತ್ಮಹತ್ಯೆ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 20ರ ಸಮೀಪದಲ್ಲಿದೆ.
ಕೆಲಸದ ಒತ್ತಡ, ವಲಸೆ ಒತ್ತಡ, ಹೆಚ್ಚುತ್ತಿರುವ ಜೀವನ ವೆಚ್ಚಗಳು ಮತ್ತು ದುರ್ಬಲಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯೇ ಈ ಆತ್ಮಹತ್ಯೆಗಳಿಗೆ ಕಾರಣ ಎಂದು ಮಾನಸಿಕ ಆರೋಗ್ಯ ತಜ್ಞರು ಅಭಿಪ್ರಾಯಿಸಿದ್ದಾರೆ.
2022ರಲ್ಲಿ ದೆಹಲಿಯಲ್ಲಿ ಆತ್ಮಹತ್ಯೆಯಿಂದ 3,417 ಮಂದಿ ಸಾವನ್ನಪ್ಪಿದ್ದಾರೆ. ಆದರೆ 2023ರಲ್ಲಿ ಈ ಸಂಖ್ಯೆ 3,131ರಷ್ಟಿದ್ದು, ಆತ್ಮಹತ್ಯೆ ಪ್ರಕರಣಗಳು ಕೊಂಚ ಕಡಿಮೆಯಾಗಿದೆ. ಇನ್ನು 2024ರಲ್ಲಿ ಒಟ್ಟು 2,905 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಪುರುಷರು 2,078 (71.5%), ಮಹಿಳೆಯರು 825 (28.4%) ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಆಗಿದ್ದಾರೆ. ಆತ್ಮಹತ್ಯೆಗಳಿಗೆ ಕುಟುಂಬ ಸಂಬಂಧಿತ ಸಮಸ್ಯೆಗಳು ಪ್ರಮುಖ ಕಾರಣವಾಗಿದೆ. ಅದನ್ನು ಬಿಟ್ಟರೆ ವೈವಾಹಿಕ ಸಮಸ್ಯೆ, ನಿರುದ್ಯೋಗ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




