ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ 11 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ, ಭೀಕರ ಹತ್ಯೆ ಮತ್ತು ಅದರ ಬೆನ್ನಲ್ಲೇ ನಡೆದ ಗುಂಪು ಹಲ್ಲೆ ಘಟನೆಯು ರಾಜ್ಯದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದೆ.
ಏನಿದು ಘಟನೆ?
ಕಳೆದ ಶನಿವಾರ ತನ್ನ ಸ್ನೇಹಿತನಿಗೆ ಜನ್ಮದಿನದ ಉಡುಗೊರೆ ಖರೀದಿಸಲು ಮನೆಯಿಂದ ಹೊರಟಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಮರುದಿನ ಭಾನುವಾರ ಚೀಲವೊಂದರಲ್ಲಿ ತುಂಬಿದ ಸ್ಥಿತಿಯಲ್ಲಿ ಅವಳ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕ್ರೂರವಾಗಿ ಹಲ್ಲೆಗೈದು ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ವರದಿಯ ಪ್ರಕಾರ ಬಾಲಕಿಯ ಖಾಸಗಿ ಅಂಗಗಳ ಮೇಲೆ ಗಾಯದ ಗುರುತುಗಳಿದ್ದು, ದೇಹದಾದ್ಯಂತ ಪರಚಿದ ಮತ್ತು ಕಚ್ಚಿದ ಗುರುತುಗಳು ಕಂಡುಬಂದಿವೆ. ತಲೆಯನ್ನು ಬಲವಾದ ವಸ್ತುವಿನಿಂದ ಹೊಡೆದಿರುವುದು ಅಥವಾ ಕಠಿಣ ಮೇಲ್ಮೈಗೆ ಜೋರಾಗಿ ಬಡಿದಿರುವುದು ಕಂಡುಬಂದಿದ್ದು, ಕಡೆಗೆ ಬಾಲಕಿಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ.
ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಹತ್ಯೆಯಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲಾದ ವ್ಯಕ್ತಿಯೊಬ್ಬನನ್ನು ಹಿಡಿದು ಅಮಾನವೀಯವಾಗಿ ಗುಂಪು ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ. ಪರಿಣಾಮವಾಗಿ ಬರುಯಿಪುರ, ಸೋನಾರ್‌ಪುರ ಮತ್ತು ನರೇಂದ್ರಪುರ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಡಳಿತವು ನಿಷೇಧಾಜ್ಞೆ ಜಾರಿಗೊಳಿಸಿದೆ. ಹಿಂಸಾಚಾರದ ವೇಳೆ ಪೊಲೀಸ್ ವಾಹನಗಳನ್ನು ಸುಟ್ಟುಹಾಕಲಾಗಿದೆ ಮತ್ತು ಕೇಂದ್ರ ಪಡೆಗಳ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ಕುಟುಂಬಕ್ಕೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ತಮಗೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಅವಕಾಶ ನೀಡದೆ ಪೊಲೀಸರು ಮತ್ತು ಕೇಂದ್ರ ಪಡೆಗಳು ತಡೆದಿವೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನನ್ನೇಕೆ ತಡೆಯಲಾಗುತ್ತಿದೆ? ನಾನು ಅಷ್ಟೊಂದು ದೊಡ್ಡ ಬೆದರಿಕೆಯೇ? ಬಿಜೆಪಿ ಬೆಂಬಲಿತರಿಗೆ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶವಿದ್ದು, ನಮಗೆ ಮಾತ್ರ ನಿರ್ಬಂಧವೇಕೆ?” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ಬಂಡಾಯ ನಾಯಕಿ ಮತ್ತು ಸಂಸದೆ ಸಯೋನಿ ಘೋಷ್ ಅವರು, ಬಾಲಕಿಯ ಹತ್ಯೆಯನ್ನು ಖಂಡಿಸುತ್ತಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ತ್ವರಿತ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಜತೆಗೆ ನಾಗರಿಕ ಸಮಾಜದಲ್ಲಿ ಗುಂಪು ಹಲ್ಲೆಗೆ ಅಥವಾ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ಚಿನ್ನ ಲೇಪಿತ ‘ತುಳಸಿ ರಾಮಾಯಣ’ ಪುಸ್ತಕ ನಾಪತ್ತೆ; ಗ್ರಂಥದ ಮೌಲ್ಯ 5 ಕೋಟಿ ರೂ.!
ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ದಾರ್ ಆನಂದ ಸರ್ದಾರ್, ಪ್ರವಾಶ್ ಮೊಂಡೋಲ್ ಮತ್ತು ದಿಬಾಕರ್ ಸರ್ದಾರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಬಾಲಕಿಯ ಹತ್ಯೆಯ ನಂತರ ನಡೆದ ಗುಂಪು ಹಲ್ಲೆ ಪ್ರಕರಣದಲ್ಲಿ ಪೊಲೀಸ್ ವಾಹನಗಳನ್ನು ಸುಟ್ಟುಹಾಕಲಾಗಿದೆ, ಇಬ್ಬರು ಕೇಂದ್ರ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ರೈಲು ಮಾರ್ಗವನ್ನು ತಡೆಯಲು ಪ್ರಯತ್ನಿಸಲಾಗಿದೆ. ಈ ಲೀಂಚಿಂಗ್ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಎಂ ಸುವೇಂದು ಅಧಿಕಾರಿ ತಿಳಿಸಿದ್ದಾರೆ.




