ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ NEET ಮತ್ತು KCET ತರಬೇತಿ ನೀಡುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೈಮ್ ಲಾ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಟೆಂಡರ್‌ನಲ್ಲಿ ಭಾಗವಹಿಸುವ ಸಂಸ್ಥೆಗಳು ಕನಿಷ್ಠ 3 ವರ್ಷಗಳಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಹೊಂದಿರಬೇಕು ಹಾಗೂ ಅಪ್ಲಿಕೇಶನ್ ಡೌನ್‌ಲೋಡ್‌ಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತಿದೆ. ಈ ಮಾನದಂಡಗಳು ಆಫ್‌ಲೈನ್ ಕೋಚಿಂಗ್ ಗುಣಮಟ್ಟಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಹಳೆಯ ಗುತ್ತಿಗೆದಾರರಿಗೆ ಅನುಕೂಲ ಎಂದು ನೋಟೀಸ್ ನಲ್ಲಿ ಅರೋಪಿಸಲಾಗಿದೆ.
ಟೆಂಡರ್ ಷರತ್ತುಗಳನ್ನು ಕೇವಲ ಹಿಂದಿನ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಹೊಸ ಅರ್ಹ ಸಂಸ್ಥೆಗಳು ಭಾಗವಹಿಸದಂತೆ ತಡೆಯಲು ಇದು ಉದ್ದೇಶಿತ ಕ್ರಮ ಎಂದು ಹೇಳಲಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಕೆಟಿಪಿಪಿ (KTPP) ಕಾಯ್ದೆಯ ಸೆಕ್ಷನ್ 10 ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಿಯಮಾನುಸಾರ ಟೆಂಡರ್ ಆಹ್ವಾನಿಸುವ ಮತ್ತು ಅಂಗೀಕರಿಸುವ ಪ್ರಾಧಿಕಾರಗಳು ಪ್ರತ್ಯೇಕವಾಗಿರಬೇಕು. ಆದರೆ ಇಲ್ಲಿ ಅದನ್ನು ಪಾಲಿಸಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಚಿವರಿಗೆ ಮಾಹಿತಿ ನೀಡಿದರೂ ಕ್ರಮವಿಲ್ಲ
ಈ ಕುರಿತು ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ಗಮನಕ್ಕೆ ವಿಷಯ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ನೋಟಿಸ್‌ನಲ್ಲಿ ಸರ್ಕಾರಕ್ಕೆ ಕೆಲವು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಅಕ್ರಮದಲ್ಲಿ ಭಾಗಿಯಾದ ಬಿಡ್ಡರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸಂಪೂರ್ಣ ಟೆಂಡರ್ ಪ್ರಕ್ರಿಯೆಗೆ ಸ್ವತಂತ್ರ ತನಿಖೆ ನಡೆಸಬೇಕು. ಟೆಂಡರ್ ಪರಿಶೀಲನಾ ಸಮಿತಿ ರಚನೆಯಲ್ಲಿ ನಡೆದಿರುವ ಲೋಪಗಳನ್ನು ಪರಿಶೀಲಿಸಬೇಕು. ಇದಲ್ಲದೆ, ಸಿಬ್ಬಂದಿ ನೇಮಕಾತಿ ದಾಖಲೆಗಳು ಹಾಗೂ ವಿದ್ಯಾರ್ಥಿಗಳ ಸಾಧನಾ ಪಟ್ಟಿಗಳನ್ನು ಕೃತಕವಾಗಿ ಸೃಷ್ಟಿಸಿರುವ ಸಾಧ್ಯತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಒಟ್ಟಿನಲ್ಲಿ, ಅಲ್ಪಸಂಖ್ಯಾತರ ಇಲಾಖೆಯ ಟೆಂಡರ್ ಪ್ರಕ್ರಿಯೆ ಸುತ್ತ ಮತ್ತೊಂದು ವಿವಾದ ತಲೆದೋರಿದ್ದು, ಸರ್ಕಾರದ ಮುಂದಿನ ಕ್ರಮ ಏನಾಗಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.





