ಸುಡುಬಿಸಿಲಿನಲ್ಲಿ ತನ್ನ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಯೊಬ್ಬರಿಗೆ 1,050 ರೂ. ದಂಡ ವಿಧಿಸಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣವನ್ನು 15 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನಂತರ ಸ್ಥಳೀಯ ಕೋರ್ಟ್ ಅರೋಪಿಗೆ ದಂಡ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2024ರ ಜೂನ್ 20ರಂದು ಫರಿದಾಬಾದ್‌ನ ಸೆಕ್ಟರ್ 82 ರಲ್ಲಿರುವ ಪುರಿ ಪ್ರಾಣಾಯಾಮ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಪೀಪಲ್ ಫಾರ್ ಅನಿಮಲ್ಸ್ ಯೂನಿಟ್‌ನ ವೃಂದಾ ಶರ್ಮಾ ಅವರ ದೂರಿನ ಆಧಾರದ ಮೇಲೆ ಬಿಪಿಟಿಪಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿದ್ದರು.
ಇದನ್ನು ಓದಿದ್ದೀರಾ? ಮೈಸೂರು | ಪ್ರಾಣಿ,ಪಕ್ಷಿ ಸಂಕುಲ ಉಳಿಸಿ : ನಟ ಪ್ರಜ್ವಲ್ ದೇವರಾಜ್
ದೀಪಕ್ ಶರ್ಮಾ ಎಂಬವರು ಸುಡು ಬಿಸಿಲಿನಲ್ಲಿ ತನ್ನ ನಾಯಿಯನ್ನು ಸಣ್ಣ ಬಾಲ್ಕನಿಯಲ್ಲಿ ಕಟ್ಟಿಹಾಕಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೀಪಲ್ ಫಾರ್ ಅನಿಮಲ್ಸ್ ಯೂನಿಟ್ ತಂಡವು ಪೊಲೀಸರ ಸಹಾಯದಿಂದ ನಾಯಿಯನ್ನು ರಕ್ಷಿಸಿತ್ತು. ಈ ತಂಡದೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವು ದೀಪಕ್ ಶರ್ಮಾ ಮೇಲಿದೆ.
ತನಿಖೆಯ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಆರಂಭದಲ್ಲಿ, ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429 ಅನ್ನೂ ಸೇರಿಸಿತು. ಈ ಸೆಕ್ಷನ್ ಪ್ರಾಣಿಗೆ ಹಾನಿ ಮಾಡಿದರೆ 1,000 ರೂ.ಗಳ ದಂಡವನ್ನು ವಿಧಿಸಲು ಅವಕಾಶ ನೀಡುತ್ತದೆ.
ವಿಚಾರಣೆಯ ವೇಳೆ ದೀಪಕ್ ಶರ್ಮಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಪು ನೀಡಿತು. ಇತ್ತೀಚೆಗೆ ವಾದ ವಿವಾದ ಆಲಿಸಿದ ಕೋರ್ಟ್ ಪ್ರಾಣಿ ಹಿಂಸೆ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ 50 ರೂ.ಗಳ ದಂಡ ಮತ್ತು ಐಪಿಸಿಯ ಸೆಕ್ಷನ್ 429ರ ಅಡಿಯಲ್ಲಿ 1,000 ರೂ.ಗಳ ದಂಡವನ್ನು ವಿಧಿಸಿದೆ.




