ಬಾಗಲಕೋಟೆ ಉಪ ಚುನಾವಣೆ | ಕಾಂಗ್ರೆಸ್‌ಗೆ ಚರಂತಿಮಠ ಅವರೇ ಸವಾಲು

Date:

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯನ್ನು ಆಡಳಿತರೂಢ ಕಾಂಗ್ರೆಸ್‌ ತನ್ನ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ತೀವ್ರ ಅಸಮಾಧಾನದ ನಡುವೆಯೂ ಅನುಕಂಪ ಮತ್ತು ʼಶಾಮನೂರು ಕುಟುಂಬʼ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಉಪಕಾರ ಸ್ಮರಣೆಯಿಂದಾದರೂ ಮತದಾರರು ಪಕ್ಷದ ಕಡೆಗೆ ಮುಖ ಮಾಡಿದರೆ ಗೆಲ್ಲಬಹುದು ಎನ್ನುವ ಅಂದಾಜಿನಲ್ಲಿ ಕಾಂಗ್ರೆಸ್‌ ಇದೆ. ಆದರೆ, ಬಾಗಲಕೋಟೆಯಲ್ಲಿ ಹೆಚ್‌.ವೈ ಮೇಟಿ ಅವರ ನಿಧನದಿಂದ ಸೃಷ್ಟಿಯಾದ ನಿರ್ವಾತವನ್ನು ತುಂಬಲು ಅನುಕಂಪವನ್ನು ಹೊರತಾಗಿ ಕಾಂಗ್ರೆಸ್‌ಗೆ ಬೇರೆ ಯಾವ ಅಸ್ತ್ರಗಳು ಕಾಣಿಸುತ್ತಿಲ್ಲ ಎನ್ನುವ ವಾತಾವರಣವಿದೆ. ಹಾಗಾಗಿ ಬಾಗಲಕೋಟೆ ಕ್ಷೇತ್ರದ ಮೇಲೆ ಕಾಂಗ್ರೆಸ್‌ಗೆ ಆತಂಕ ಶುರುವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಕಾಂಗ್ರೆಸ್‌ನಿಂದ ಎಚ್‌.ವೈ ಮೇಟಿ ಅವರ ಪುತ್ರ ಉಮೇಶ್‌ ಮೇಟಿ ಅವರನ್ನು ಸ್ಪರ್ಧೆಗೆ ಇಳಿಸಲಾಗಿದೆ. ಬಿಜೆಪಿಯಿಂದ ಪ್ರಬಲ ಲಿಂಗಾಯತ ಸಮುದಾಯದ ವೀರಣ್ಣ ಚರಂತಿಮಠ ಅವರನ್ನು ಸ್ಪರ್ಧೆಗೆ ಇಳಿಸಲಾಗಿದೆ. ಈ ಹಿಂದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ವೈ ಮೇಟಿ ಅವರ ಎದುರು ಸ್ಪರ್ಧಿಸಿ ಗೆದ್ದವರು ಚರಂತಿಮಠ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ವೈ ಮೇಟಿ ಅವರು ಗೆದ್ದಿದ್ದು ಕೇವಲ 5,878 ಮತಗಳ ಅಂತರದಿಂದ ಎನ್ನುವುದು ಇಲ್ಲಿ ಉಲ್ಲೇಖನೀಯ. ಹಾಗಾಗಿ ಬಿಜೆಪಿಗೆ ಈ ಬಾರಿ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯಾಗಿರುವ ವೀರಣ್ಣ ಚರಂತಿಮಠ, ಶಿಕ್ಷಣ ಕ್ಷೇತ್ರದಲ್ಲಿಯೂ ಆ ಭಾಗದಲ್ಲಿ ಮಹತ್ತರ ಕೊಡುಗೆ ನೀಡಿದವರಾಗಿರುವ ಕಾರಣ, ಕಾಂಗ್ರೆಸ್‌ನ ಅಭ್ಯರ್ಥಿ ಉಮೇಶ್‌ ಮೇಟಿ ಅವರಿಗೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಮುಂದೆ ʼವರ್ಚಸ್ಸುʼ ಇದೆಯೇ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.

ಇನ್ನು, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಸುಮಾರು 2,45,532 ನೋಂದಾಯಿತ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ಕುರುಬರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದು, ಚುನಾವಣಾ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಪೈಕಿ 80,000- 85,000 ಲಿಂಗಾಯತ ಮತದಾರರಿದ್ದಾರೆ. ಕ್ಷೇತ್ರದ ಪ್ರಭಾವಿ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯ 45,000-50,000 ಮತದಾರರಿದ್ದಾರೆ. ಮುಸ್ಲೀಮರು 32,920 ಮತದಾರರಿದ್ದು, ಒಟ್ಟು ಮತದಾರರ ಸುಮಾರು ಶೇ. 14.1ರಷ್ಟಿದ್ದಾರೆ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ದ ಸುಮಾರು 35,000 – 40,000 ಮತದಾರರಿದ್ದಾರೆ. ಇತರ ಹಿಂದುಳಿದ ವರ್ಗಗಳಾದ(OBC)ಗಾಣಿಗ, ರೆಡ್ಡಿ ಮತ್ತು ಇತರ ಸಣ್ಣ ಸಮುದಾಯಗಳು ಸೇರಿ ಸುಮಾರು 37,612 ಮತದಾರರು ಇದ್ದಾರೆ. ಲಿಂಗಾಯತ ಸಮುದಾಯವನ್ನು ಹೊರತುಪಡಿಸಿ ಉಳಿದ ಎಲ್ಲಾ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಸಂಪೂರ್ಣವಾಗಿ ಬರುತ್ತವೆ ಎನ್ನುವ ಬಲವಾದ ವಿಶ್ವಾಸ ಕಾಂಗ್ರೆಸ್‌ಗೆ ಇಲ್ಲ ಎನ್ನುವುದು ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯ ಲೆಕ್ಕಾಚಾರ ಎಂದು ಮೂಲಗಳು ಹೇಳುತ್ತಿವೆ. ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿಯೇ ಅಹಿಂದ ನಾಯಕರಾಗಿ ಗುರುತಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಬೀರಬೇಕಾದ ಅನಿವಾರ್ಯತೆ ಎದುರಾಗಿದೆ.

ಬಾಗಲಕೋಟೆಯ ಚುನಾವಣಾ ಇತಿಹಾಸ ಗಮನಿಸುವುದಾದರೇ, 1998 ರಿಂದ 2008ರ ವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸತತವಾಗಿ ಗೆದ್ದಿದ್ದರು. ಆದರೆ 2013ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಚ್‌.ವೈ. ಮೇಟಿ ಗೆಲುವು ಸಾಧಿಸಿ ಕಾಂಗ್ರೆಸ್‌ ಧ್ವಜ ಹಾರಿಸಿದ್ದರು.  

ಇದನ್ನೂ ಓದಿ : ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ವಿರುದ್ಧ ಮುಸ್ಲಿಂ ಮತದಾರರ ಪ್ರಚಾರ, ಪಾಠ ಕಲಿಯುವುದೇ ಹೈಕಮಾಂಡ್?

ಕಾಂಗ್ರೆಸ್‌ ಮತ್ತು ಜನತಾ ಪರಿವಾರವೇ ರಾಜಕೀಯವಾಗಿ ಪಾರುಪತ್ಯ ಸಾಧಿಸಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲುವ ಹಾಗೆ ಮಾಡಿದವರು ಈಗಿನ ವಿಧಾನಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ. 1998ರ ಉಪ ಚುನಾವಣೆ ಮತ್ತು 1999ರ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದಿದ್ದರು. 2004ರಲ್ಲಿ ಬಿಜೆಪಿ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್‌ ನೀಡಿ ಸ್ಪರ್ಧೆಗಿಳಿಸಿತ್ತು. 2004ರ ವಿಧಾನಸಭಾ ಚುನಾವಣೆಯ ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಚರಂತಿಮಠ ಗೆದ್ದು ಬೀಗಿದ್ದರು.

2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದ ತನ್ನ ಸ್ಥಾನಮಾನ ಕಳೆದುಕೊಂಡಿತ್ತು. ಜನತಾದಳ ಮತ್ತು ಜನತಾದಳ (ಎಸ್‌) ಪಕ್ಷದಿಂದ ಪ್ರತಿನಿಧಿಸಿ ಮೂರು ಬಾರಿ ಶಾಸಕರಾಗಿದ್ದ ಹೆಚ್‌.ವೈ. ಮೇಟಿ ಅನಿವಾರ್ಯವಾಗಿ ಆ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರವನ್ನು ಅರಸಬೇಕಾಗಿತ್ತು. ಸಿದ್ದರಾಮಯ್ಯರ ಜೊತೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 2013ರಲ್ಲಿ ಸಿದ್ದರಾಮಯ್ಯ ಸೃಷ್ಟಿಸಿದ ರಾಜಕೀಯ ಅಲೆ ಮತ್ತು ಬಿಜೆಪಿ ಸರ್ಕಾರದ ಮೇಲಿದ್ದ ಆಡಳಿತ ವಿರೋಧಿ ಅಲೆಯ ಕಾರಣದಿಂದ ಗೆದ್ದು ಶಾಸಕರಾಗಿ, ಸಚಿವರೂ ಅದರು. ಆ ಬಳಿಕ ಅವರ ರಾಜಕೀಯ ಜೀವನದಲ್ಲಿ ಆದ ಏರಿಳಿತದ ಕಾರಣದಿಂದ(ಸಿ.ಡಿ ಪ್ರಕರಣ) 2018ರ ಚುನಾವಣೆಯಲ್ಲಿ ಸೋತರು. ಚರಂತಿಮಠ ಗೆದ್ದರು. 2023ರ ಚುನಾವಣೆಯಲ್ಲಿ ʼಕಾಂಗ್ರೆಸ್‌ ಗ್ಯಾರಂಟಿʼ ಇದ್ದಾಗಲೂ ಬಹಳ ಕಡಿಮೆ ಅಂತರದಲ್ಲಿ ಮೇಟಿ ಗೆದ್ದಿದ್ದರು. ಹಾಗಾಗಿ ಕಾಂಗ್ರೆಸ್‌ ಚರಂತಿಮಠ ಅವರ ಎದುರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ಸುಲಭವೇನಲ್ಲ ಎನ್ನುವುದನ್ನು ಮರೆಯುವಂತಿಲ್ಲ.  

ನಗರ ಕೇಂದ್ರಿತ ಕ್ಷೇತ್ರ, ಲಿಂಗಾಯತ ಮತದಾರರು ನಿರ್ಣಾಯಕವೆನ್ನಿಸುವ ಸಮುದಾಯದ ಪ್ರಭಾವ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುಂದೆ ಸವಾಲಿದೆ. ಹಿಂದಿನ ಚುನಾವಣೆಗಳಲ್ಲಿ ಹಳ್ಳಿಗಳಲ್ಲಿ ವರ್ಚಸ್ಸು ಗಳಿಸಿದ್ದ ಮೇಟಿಗೆ ಈ ಕ್ಷೇತ್ರ ಗೆಲ್ಲುವುದು ಕೂಡ ಸವಾಲಾಗಿತ್ತು. ಆರ್.ಬಿ ತಿಮ್ಮಾಪುರ ಕೂಡ ಅದೇ ಕ್ಷೇತ್ರದವರಾಗಿದ್ದ ಕಾರಣ ಸ್ವಲ್ಪ ಅನುಕೂಲಕರವಾಗಿತ್ತು. ಆದರೇ, ಈಗ ಪರಿಸ್ಥಿತಿ ಹಾಗಿಲ್ಲ. ಲಿಂಗಾಯತ ಸಮುದಾಯವನ್ನೇ ನೆಚ್ಚಿಕೊಂಡಿರುವ ಬಿಜೆಪಿ ತನ್ನ ಹಿಂದುತ್ವದ ರಾಜಕಾರಣವನ್ನು ಪ್ರಬಲವಾಗಿ ಮಾಡುತ್ತಿದೆ. ಬಿಜೆಪಿಯ ಎಲ್ಲಾ ನಾಯಕರು ಕ್ಷೇತ್ರಕ್ಕಿಳಿದು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ತಮ್ಮ ಸ್ನೇಹಿತ(ಚರಂತಿಮಠ)ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇವೆಲ್ಲಾ ಕಾಂಗ್ರೆಸ್‌ಗೆ ಸವಾಲಾಗಿದೆ.

ಇದನ್ನೂ ಓದಿ : IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ

ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ, ತೀವ್ರ ಜಿದ್ದಾಜಿದ್ದಿನ ಪೈಪೋಟಿ ಎದುರಾಗಬಹುದು ಎಂಬ ವರದಿ ಬಂದಿದೆ ಎಂದು ಹೇಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ನಿರಂತರವಾಗಿ ಬಾಗಲಕೋಟೆಯಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಮತ ಸೆಳೆಯುವುದಕ್ಕೆ ಯತ್ನಿಸುತ್ತಿದ್ದಾರೆ. ಸಿಎಂ ಕೂಡ ತಮ್ಮ ವರ್ಚಸ್ಸನ್ನು ಪೂರ್ಣವಾಗಿ ಇಲ್ಲಿ ವ್ಯಯಿಸುತ್ತಿದ್ದಾರೆ. ಆದರೂ ಇಲ್ಲಿ ಕಾಂಗ್ರೆಸ್‌ಗೆ ಗೆಲುವು ಸುಲಭದ ತುತ್ತಲ್ಲ ಎನ್ನುವ ವಾತಾವರಣವಿದ್ದು, ಕೊನೆಯ ಹಂತದಲ್ಲಿ ಏನೆಲ್ಲಾ ತಂತ್ರಗಾರಿಕೆ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...