ದಾವಣಗೆರೆ ಮುಸ್ಲಿಮರು, ಯುವಜನರು ಪ್ರಚಾರದಲ್ಲಿ ʼಕಾಂಗ್ರೆಸ್ ಸೋಲಿಸಿ, ಕುಟುಂಬ ರಾಜಕೀಯ ಕೊನೆಗೊಳಿಸಿʼ. ʼಜಸ್ಟಿಸ್ ಫಾರ್ ಮೈನಾರಿಟಿಸ್, ಜಸ್ಟಿಸ್ ಫಾರ್ ಅಹಿಂದ ಹಾಗೂ ಜಸ್ಟಿಸ್ ಫಾರ್ ಮುಸ್ಲಿಂʼ ಎನ್ನುವಂತಹ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಾರ್ಡ್‌ಗಳಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ನಡುವೆ ದಾವಣಗೆರೆ ಕ್ಷೇತ್ರವು ಹೈ ವೋಲ್ಟೇಜ್ ಕ್ಷೇತ್ರವಾಗಿ ಹೊರಹೊಮ್ಮಿದ್ದು, ರಾಜ್ಯದ ಗಮನ ಅಷ್ಟೇ ಅಲ್ಲದೆ, ದೇಶದ ಗಮನವೂ ಈ ಕ್ಷೇತ್ರದತ್ತ ಕೇಂದ್ರೀಕೃತವಾಗಿದೆ. ರಾಜಕೀಯ ಪಕ್ಷಗಳ ತಂತ್ರಗಳು, ಅಭ್ಯರ್ಥಿಗಳ ಆಯ್ಕೆ ಹಾಗೂ ಸಮುದಾಯಗಳ ಮತದಾನ ಪ್ರವೃತ್ತಿ ಈ ಕ್ಷೇತ್ರವನ್ನು ರಾಜಕೀಯದ ಕಣಜವಾಗಿಸಿವೆ.
ಈ ಬಾರಿ ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮನಸ್ಥಿತಿ ರಾಜಕೀಯ ವಲಯದಲ್ಲಿ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಹಾಗೂ ಕುಟುಂಬ ರಾಜಕೀಯದ ಪ್ರಭಾವದ ಬಗ್ಗೆ ಸಮುದಾಯದೊಳಗೆ ಅಸಮಾಧಾನ ವ್ಯಕ್ತವಾಗುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರು ತಮ್ಮ ಮತದಾನದ ಮೂಲಕ ಸ್ಪಷ್ಟ ಸಂದೇಶ ನೀಡಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಬೇಕು ಎಂಬ ಅಭಿಪ್ರಾಯದ ಪ್ರಚಾರ ನಡೆಯುತ್ತಿರುವುದು ಗಮನಾರ್ಹವಾಗಿದೆ. ಇದರಿಂದ ಪಕ್ಷದ ಹೈಕಮಾಂಡ್ ಮತ್ತು ಸ್ಥಳೀಯ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ತಂತ್ರ ಯಶಸ್ವಿಯಾಗುತ್ತದೆಯೇ ಅಥವಾ ಮತದಾರರು ವಿಭಿನ್ನ ನಿರ್ಧಾರ ಕೈಗೊಳ್ಳುವರೆಯೇ ಎಂಬುದು ಚುನಾವಣಾ ಫಲಿತಾಂಶದ ನಂತರವೇ ಸ್ಪಷ್ಟವಾಗಲಿದೆ.
ಒಂದು ವೇಳೆ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ, ಅದು ಮುಸ್ಲಿಂ ಸಮುದಾಯದ ವಿಭಜನೆಯ ಕಾರಣವೆಂದು ಸ್ಪಷ್ಟ ಪ್ರತಿಬಿಂಬವಾಗಿ ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಕಾಂಗ್ರೆಸ್ ಗೆದ್ದರೆ ಮುಸ್ಲಿಮರ ವಿರೋಧವಿದ್ದರೂ ಕಾಂಗ್ರೆಸ್ ಗೆದ್ದಿದೆವೆಂದು ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಟಿಕೆಟ್ ಹಂಚಿಕೆಯಲ್ಲಿ ಬದಲಾವಣೆ ಆಗಬಹುದೇ ಎಂಬ ಪ್ರಶ್ನೆಯೂ ಕೂಡ ಮುಸ್ಲಿಮರಲ್ಲಿ ಉದ್ಭವಿಸಿದೆ.

ದಾವಣಗೆರೆ ಉಪಚುನಾವಣೆ ಮುಸಲ್ಮಾನರಿಗೆ ʼಮಾಡು ಇಲ್ಲವೇ ಮಡಿʼ ಎನ್ನುವ ಪಂದ್ಯವಾಗಿದೆ. ಮುಸ್ಲಿಂ ಬಾಹುಳ್ಯ ಪ್ರದೇಶವಾದ ರಾಯಚೂರು, ವಿಜಯಪುರ, ಕಲಬುರಗಿ ಉತ್ತರ ಸೇರಿ ನಾನಾ ಕಡೆ ಮುಸ್ಲಿಮರು ಸ್ಪರ್ಧಿಸಿದರೆ ಮತಗಳು ಛಿದ್ರವಾಗಿ ಸೋಲಾಗುತ್ತದೆ. ಮುಸ್ಲಿಮೇತರರಿಗೆ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಮುಂದಾಗುತ್ತದೆ. ಮುಸ್ಲಿಂ ಶಾಸಕರು ಕಡಿಮೆಯಾಗುತ್ತಾರೆ, ನಾವೆಲ್ಲಾ ವಂಚನೆಗೆ ಒಳಗಾಗುತ್ತೇವೆ ಎಂಬ ಗೋಳಾಗಿದೆ.
ದಾವಣಗೆರೆ ಹಿರಿಯ ಮುಸ್ಲಿಂ ಮುಖಂಡ ವಿಧಾನ ಪರಿಷತ್ ಸದಸ್ಯ ಕೆ ಅಬ್ದುಲ್ ಜಬ್ಬಾರ್ ಅವರನ್ನು ಪ್ರಚಾರಕ್ಕೆ ಕರೆಯುತ್ತಿಲ್ಲವೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗಿದ್ದರೆ ಶಾಮನೂರು ಕುಟುಂಬಕ್ಕೆ ಮುಸ್ಲಿಂಮರ ಅವಶ್ಯಕತೆ ಇಲ್ಲವೇ? ಒಂದು ವೇಳೆ ಅವಶ್ಯಕತೆ ಇಲ್ಲದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಮುಸ್ಲಿಮರ ಮೇಲೆ ದೂರುವುದು ಅಕ್ಷಮ್ಯವಾಗುತ್ತದೆ.
ದಾವಣಗೆರೆ ಮುಸ್ಲಿಮರು, ಯುವಜನರು ಪ್ರಚಾರದಲ್ಲಿ ʼಕಾಂಗ್ರೆಸ್ ಸೋಲಿಸಿ, ಕುಟುಂಬ ರಾಜಕೀಯ ಕೊನೆಗೊಳಿಸಿʼ. ʼಜಸ್ಟಿಸ್ ಫಾರ್ ಮೈನಾರಿಟಿಸ್, ಜಸ್ಟಿಸ್ ಫಾರ್ ಅಹಿಂದ ಹಾಗೂ ಜಸ್ಟಿಸ್ ಫಾರ್ ಮುಸ್ಲಿಂʼ ಎನ್ನುವಂತಹ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಾರ್ಡ್‌ಗಳಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಹಾಗೂ ಧಾರ್ಮಿಕ ನಾಯಕರು ಕಾರ್ಯಕರ್ತರಿಗೆ ವಿವಿಧ ಸಂದೇಶಗಳನ್ನು ನೀಡುತ್ತಿರುವುದು ರಾಜಕೀಯ ಚಟುವಟಿಕೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಇನ್ನು ಮುಖ್ಯಮಂತ್ರಿ, ಡಿಕೆ ಶಿವಕುಮಾರ್, ಸುರ್ಜೇವಾಲಾ ಸೇರಿದಂತೆ ಪ್ರಮುಖ ನಾಯಕರು ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿ ಪಕ್ಷದ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ? ದಾವಣಗೆರೆ | ಉಪಚುನಾವಣೆ ಪ್ರಚಾರದ ವೇಳೆ ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧ ಎಂದ ಸಿಎಂ ಸಿದ್ದರಾಮಯ್ಯ
ಈ ಎಲ್ಲ ಬೆಳವಣಿಗೆಗಳ ನಡುವೆ ದಾವಣಗೆರೆ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ವಿರೋಧದ ಅಲೆಯಾಗಿ ಮನೆ ಮನೆಗೆ ಹೋಗಿ ಪ್ರಚಾರಿಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಿ ಹೈ ಕಮಾಂಡ್‌ಗೆ ಪಾಠ ಕಲಿಸುತ್ತಾರೆಯೇ, ಕುಟುಂಬ ರಾಜಕೀಯಕ್ಕೆ ಇಂದು ಕೊನೆಯಾಗುವುದೇ? ಎಂಬುದನ್ನು ಕಾದು ನೋಡಬೇಕಾಗಿದೆ.


ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




