ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಜೂನ್ 25ರ ಸಂಜೆ ಮೆಟ್ರೋ ಸೇವೆ ಕೆಲಕಾಲ ವ್ಯತ್ಯಯಗೊಂಡಿದ್ದಕ್ಕೆ, ಪ್ರಯಾಣಿಕರೊಬ್ಬರ ಲೋಹದ ಸರ (Chain) ಕಾರಣ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಜೂನ್ 25ರ ಸಂಜೆ 7:36 ರಿಂದ 7:54 ರವರೆಗೆ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಅವಧಿಯಲ್ಲಿ ರೈಲುಗಳ ಸಂಚಾರ ವಿಳಂಬವಾದ ಕಾರಣ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಪ್ರಯಾಣಿಕರು ಪರ್ಪಲ್ ಲೈನ್‌ನ ವಿವಿಧ ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು.
ಘಟನೆಗೆ ತಾಂತ್ರಿಕ ದೋಷವೇ ಕಾರಣವಿರಬಹುದು ಎಂದು ಹಲವರು ಆತಂಕಗೊಂಡಿದ್ದರು. ಆದರೆ, ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಪ್ರಯಾಣಿಕರೊಬ್ಬರ ಲೋಹದ ಸರ ಮೆಟ್ರೋ ರೈಲಿನ ಬಾಗಿಲು ಚಲಿಸುವ ಹಳಿ (Door guideway) ಒಳಗೆ ಸಿಲುಕಿಕೊಂಡಿತ್ತು. ಈ ಅಡಚಣೆಯಿಂದಾಗಿ ಬಾಗಿಲು ಸರಿಯಾಗಿ ಮುಚ್ಚಲು ಸಾಧ್ಯವಾಗಲಿಲ್ಲ. ಬಾಗಿಲು ಸರಿಯಾಗಿ ಮುಚ್ಚದ ಹೊರತು ರೈಲು ಚಲಿಸಲು ಸಾಧ್ಯವಾಗದ ಕಾರಣ, ತಾಂತ್ರಿಕ ಸುರಕ್ಷತಾ ವ್ಯವಸ್ಥೆ ರೈಲನ್ನು ನಿಲ್ಲಿಸಿತ್ತು.
ಘಟನೆಯ ನಂತರ ಬಿಎಂಆರ್‌ಸಿಎಲ್ ತಜ್ಞರ ತಂಡ ರೈಲಿನ ಬಾಗಿಲು ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಈ ವೇಳೆ ರೈಲಿನಲ್ಲಿ ಯಾವುದೇ ಯಾಂತ್ರಿಕ ಅಥವಾ ತಾಂತ್ರಿಕ ದೋಷವಿಲ್ಲ ಎಂಬುದು ಖಚಿತಪಟ್ಟಿದೆ. ಬಾಗಿಲು ತೆರೆದು ಸರವನ್ನು ಹೊರತೆಗೆದ ನಂತರ ಸೇವೆ ಎಂದಿನಂತೆ ಮುಂದುವರಿಯಿತು.
ಇದನ್ನೂ ಓದಿ: ತುಮಕೂರು | ಡಿಸಿಎಂ ಪರಮೇಶ್ವರ್ ತವರಲ್ಲಿ ಮಲಹೊರುವ ಪದ್ದತಿ ಜೀವಂತ
ಕಳೆದ ಒಂದು ವಾರದಲ್ಲಿ ಪರ್ಪಲ್ ಲೈನ್‌ನಲ್ಲಿ ಸಂಭವಿಸಿದ ಸತತ ಸೇವಾ ವ್ಯತ್ಯಯಗಳ ಹಿನ್ನೆಲೆಯಲ್ಲಿ, ಈ ಘಟನೆಯು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಆದರೆ, ಇದು ಕೇವಲ ಒಂದು ಅನಿರೀಕ್ಷಿತ ಅವಘಡ ಎಂಬುದನ್ನು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.




