ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದ ಅಸಮಾಧಾನ ತೀವ್ರಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ. ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ದಾಖಲಿಸಲು ಬೃಹತ್ ‘ಕರ್ನಾಟಕ ಮುಸ್ಲಿಂ ಸಮಾವೇಶ’ವನ್ನು ಆಯೋಜಿಸಿವೆ.
ಸಮಾವೇಶದ ಕುರಿತು ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸುಹೇಲ್ ಅಹ್ಮದ್ ಮರೂರ್ ಅವರು, “ಸಮಾವೇಶವು ಮೇ 16ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ‘ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?‘ ಎಂಬ ಶೀರ್ಷಿಕೆಯಡಿ ಸಮಗ್ರ ವರದಿ ಮತ್ತು ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ವರದಿಯನ್ನು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (KRMO) ಅಡ್ ಹಾಕ್ ಸಮಿತಿಯು ಸಿದ್ಧಪಡಿಸಿದೆ” ಎಂದು ತಿಳಿಸಿದ್ದಾರೆ.
“ವರದಿಯಲ್ಲಿ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗೂ ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ಭರವಸೆಗಳು ಎಷ್ಟು, ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯ ಹಾಗೂ ಈಗ ಸರ್ಕಾರದ ಎದುರು ನಾವು ಇಡಲಿರುವ ಬೇಡಿಕೆಗಳ ಸಮಗ್ರ ಮಾಹಿತಿಯನ್ನು ವಿವರಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಮುಖ್ಯವಾಗಿ, ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ – ದ್ವೇಷ ಅಪರಾಧ, ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಸ್ ವಿಷಯ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ – ಶಿಕ್ಷಣ ಕ್ಷೇತ್ರದ ಬೇಡಿಕೆಗಳು ವರದಿಯಲ್ಲಿವೆ. ನಮ್ಮ ವರದಿಯು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂದೇಶ ರವಾನಿಸುವ ಉದ್ದೇಶವನ್ನು ಹೊಂದಿದೆ” ಎಂದು ಸುಹೇಲ್ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು | ವಿಜಯ್ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?
“ಮೇ 16 ರಂದು ‘ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ’ ಯಾವುದೇ ರಾಜಕಾರಣಿಗಳನ್ನು ಆಹ್ವಾನಿಸುವುದಿಲ್ಲ. ನಮ್ಮ ಸಮಾವೇಶದ ಉದ್ದೇಶ ಸಂಘರ್ಷವಲ್ಲ, ಇದು ನಮಗೆ ನ್ಯಾಯವಾಗಿ, ಸಂವಿಧಾನಾತ್ಮಕವಾಗಿ ಸಿಗಲೇಬೇಕಿದ್ದ ಹಾಗೂ ಸರ್ಕಾರ ನಮಗೆ ಕೊಟ್ಟಿದ್ದ ಭರವಸೆಗಳನ್ನು ಇನ್ನಷ್ಟು ತಡಮಾಡದೆ ಈಡೇರಿಸಬೇಕೆಂದು ಒತ್ತಾಯಿಸುವುದಾಗಿದೆ. ಜೊತೆಗೆ, ಸರ್ಕಾರದ ಕಾರ್ಯವೈಖರಿ ಬಗ್ಗೆ ಸಮುದಾಯದ ಅಸಮಾಧಾನ ಮತ್ತು ನಿರಾಶೆಯನ್ನು ಸರ್ಕಾರಕ್ಕೆ ತಲುಪಿಸುವುದಾಗಿದೆ. ಸಮುದಾಯದ ನಿರ್ಲಕ್ಷ್ಯವನ್ನು ಇನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾಸಲು ಮುಸ್ಲಿಂ ಸಮುದಾಯವು ಒಗ್ಗೂಡಲಿದೆ” ಎಂದು ವಿವರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಲಾಲ್ ಮಸೀದಿಯ ಮೌಲಾನಾ ಖಾರಿ ಝುಲ್ಫಿಖರ್ ರಝಾ ನೂರಿ, ಸಮಿತಿ ಸಂಚಾಲಕರಾದ ತನ್ವೀರ್ ಅಹ್ಮದ್, ಯಹ್ಯಾ ದಾಮೂದಿ ಸೇರಿದಂತೆ ಉಲೇಮಾಗಳು,ಸಾಮಾಜಿಕ ಕಾರ್ಯಕರ್ತರು ಇದ್ದರು.



