ಎಸ್‌ಐಆರ್ ಪ್ರಕ್ರಿಯೆ ಮೂಲಕ ಮಹಿಳೆಯರು, ಆದಿವಾಸಿಗಳು, ದಲಿತರು ಮತ್ತು ಹಿಂದುಳಿದವರಿಂದ ಮತದಾನದ ಹಕ್ಕನ್ನು ಕಸಿಯುವ ಹುನ್ನಾರ ನಡೆಸಲಾಗುತ್ತಿದೆ. ಹೆಣ್ಣುಮಕ್ಕಳ ಅಸ್ತಿತ್ವವೇ ಇಲ್ಲದಂತಾಗಿರುವ ಈ ದೇಶದಲ್ಲಿ ಮತದಾರರ ಪಟ್ಟಿಯಿಂದ ಮಹಿಳೆಯನ್ನು ಕಿತ್ತೊಗಿಯುವುದು ಬಿಜೆಪಿಗರಿಗೆ ಕಷ್ಟದ ಕೆಲಸವೇನಲ್ಲ. ಮದುವೆಗೆ ಮುನ್ನ ತಂದೆಯೊಂದಿಗೆ ಗುರುತಿಸಿಕೊಳ್ಳುವ ಹೆಣ್ಣುಮಗಳು, ಮದುವೆ ನಂತರ ತನ್ನ ಗಂಡನ ಕುರುಹುಗಳೊಂದಿಗೆ ಗುರುತಿಸಿಕೊಳ್ಳುತ್ತಾಳೆ. ಹೀಗಿರುವಾಗ 2002 ಮತ್ತು 2025ರ ಮತದಾರ ಪಟ್ಟಿಗೆ ಹೊಂದಾಣಿಕೆಯಾಗದ ಮಹಿಳೆಯರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ವಕೀಲರಾಗಿರುವ ರಾಜಲಕ್ಷ್ಮಿ ಅಂಕಲಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಗಾಂಧಿಭವನದಲ್ಲಿ ಜಾಗೃತ ಕರ್ನಾಟಕದಿಂದ ಹಮ್ಮಿಕೊಂಡಿದ್ದ ʼಎಸ್‌ಐಆರ್ ಕುರಿತಂತೆ ಬಿಜೆಪಿಯೊಂದಿಗೆ ಬಹಿರಂಗ ಚರ್ಚೆʼ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿರುವುದರಿಂದ ಮತ್ತು ಎಸ್‌ಐಆರ್ ಪ್ರಕ್ರಿಯೆಯನ್ನು ಬಿಜೆಪಿಗರು ಸಮರ್ಥಿಸಿಕೊಳ್ಳುತ್ತಿರುವುದರಿಂದ ಬಿಜೆಪಿಗರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಈಗಾಗಲೇ ಬಿಹಾರ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಮಹಿಳೆಯರ ಹೆಸರು ಮತದಾನ ಪಟ್ಟಿಯಿಂದ ಕೈಬಿಟ್ಟು ಹೋಗಿರುವ ಕುರಿತು ಬಿಜೆಪಿಗರನ್ನು ಪ್ರಶ್ನಿಸಲಾಗಿತ್ತು. ಆದರೆ ಉತ್ತರವಿಲ್ಲದ ಮುಖಗೇಡಿ ಬಿಜೆಪಿಗರು ಸಭೆಗೆ ಬಾರದೆ ನುಣುಚಿಕೊಳ್ಳುವ ಕೆಲಸ ಮಾಡಿದರು” ಎಂದರು.
“ತಾರ್ಕಿಕ ವ್ಯತ್ಯಾಸಗಳ ನೆಪ ಮಾಡಿ ಮತದಾರರ ಹಕ್ಕುಗಳನ್ನು ಕಸಿಯುತ್ತಿರುವುದು ಖಂಡನೀಯ. ಭಾಷಾ ವೈವಿಧ್ಯತೆ ಇರುವ ಈ ದೇಶದ ನೆಲದಲ್ಲಿ ಹೆಸರುಗಳ ಸ್ಪೆಲ್ಲಿಂಗ್ ಮಿಸ್ಟೇಕ್ ಎಂದು ಹೇಳುವುದು, ತಾಯಿ ಮಕ್ಕಳಿಗೆ ವಯಸ್ಸು ಹೊಂದಾಣಿಕೆಯಾಗುತ್ತಿಲ್ಲವೆನ್ನುವುದು ಮತದಾರರ ಹಕ್ಕುಗಳನ್ನು ಕಸಿಯುವ ಹುನ್ನಾರ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ ಲಕ್ಷ್ಮಿ ಎನ್ನುವ ಹೆಸರಿಗೆ ಉತ್ತರ ಕರ್ನಾಟಕದಲ್ಲಿ LAXMI ಎಂದರೆ, ಬೆಂಗಳೂರು ಭಾಷಾ ಶೈಲಿಯಲ್ಲಿ LAKSHMI ಎನ್ನಲಾಗುತ್ತದೆ. ಹೀಗಿರುವಾಗ ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಪ್ರಜಾಪ್ರಭುತ್ವ ದೇಶದ ಪೌರತ್ವವನ್ನೇ ಕಸಿಯಲು ಬಿಜೆಪಿ ಮುಂದಾಗಿದೆ. ಬಿಜೆಪಿ ಮಾತಿಗೆ ಚುನಾವಣಾ ಆಯೋಗ ತಲೆದೂಗುತ್ತಿದೆ” ಎಂದು ಹಲವು ಹೆಸರುಗಳ ಉದಾಹರಣೆಯನ್ನು ನೀಡಿ ಮಾತನಾಡಿದರು.
ಜಾಗೃತ ಕರ್ನಾಟಕದ ಸಂಚಾಲಕ ಬಿ ಸಿ ಬಸವರಾಜ್ ಮಾತನಾಡಿ, “ಕೇಂದ್ರದ ನೇತೃತ್ವದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಸುಮಾರು ಎಂಬತ್ತು ಬಾರಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಆ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಕೇಳುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಯುವಜನರನ್ನು ಟೆರರಿಸ್ಟ್‌ಗಳು ಎಂದು ಕರೆಯುತ್ತಾರೆ. ಆದರೆ ನಾವು ತಿಂಗಳಿಗೆ ಮೊದಲೇ ಇಂತಹ ಎಸ್‌ಐಆರ್ ಕುರಿತು ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆಂದು ಐದು ಪ್ರಶ್ನೆಗಳನ್ನು ನೀಡಲಾಗಿತ್ತು ಅದಕ್ಕೂ ಅವರ ಬಳಿ ಉತ್ತರವಿಲ್ಲದೆ ಬಹಿರಂಗ ಚರ್ಚೆಗೆ ಬರುವಲ್ಲಿ ವಿಫಲರಾದರು” ಎಂದು ಟೀಕಿಸಿದರು.
“ನುಸುಳುಕೋರನ್ನು ಹೊರಕಳುಹಿಸಲು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದ ಬಿಜೆಪಿ, ದೇಶದ ಆರು ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಈ ದೇಶದ ಪ್ರಜೆಗಳೆಂದು ಪರಿಗಣಿಸದಿರುವ ಆತಂಕ ಎದುರಾಗಿದೆ. ಅದರಲ್ಲೂ ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರನ್ನು ಕೈಬಿಡಲಾಗುತ್ತಿದೆ. ಹಿಂದೂ ನಾವೆಲ್ಲ ಒಂದು ಎನ್ನುವ ಬಿಜೆಪಿ ಕೋಟ್ಯಂತರ ಹಿಂದೂ ಮತದಾರರನ್ನೇ ಈ ದೇಶದ ಪ್ರಜಾಪ್ರಭುತ್ವದಿಂದ ಹೊರಗುಳಿಸಿದೆ. ಕರ್ನಾಟಕದಲ್ಲಿ ಕನಿಷ್ಠ ಹತ್ತು ಲಕ್ಷ ಮತದಾರರನ್ನು ಕೈಬಿಡುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಬ್ರಿಟಿಷರ ವಿರುದ್ಧ ಹೋರಾಡಿದ ಸಂತಾಲ ಬುಡಕಟ್ಟು ಸಮುದಾಯದವರು ವಿರೋಚಿತ ಹೋರಾಟ ಕೈಗೊಂಡ ದಿನ ಜೂನ್ 30 ಆಗಿರುವುದರಿಂದ ಇಂದು ಈ ಬಹಿರಂಗ ಚರ್ಚೆ ಹಮ್ಮಿಕೊಳ್ಳಲಾಯಿತೇ ಹೊರತು, ಇಂದು ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದೆ ಎಂದಲ್ಲ. ಹಾಗಾಗಿ ಈ ದೇಶಕ್ಕಾಗಿ ತ್ಯಗ ಬಲಿದಾನಗಳನ್ನು ನೀಡಿದ ಬುಡಕಟ್ಟುಗಳು ಎಸ್‌ಐಆರ್‌ನಿಂದ ಮತದಾರರ ಪಟ್ಟಿಯಿಂದ ಹೊರಗುಳಿದರೆ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಉಳಿವಿಗೆ ಬಿಜೆಪಿಗರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎನ್ನುವ ಉತ್ತರ ಬೇಕಿತ್ತು. ಅದಕ್ಕಾಗಿ ಬಿಜೆಪಿಗರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಸಭೆಗೆ ಬರಲಿಲ್ಲ. ಆದ ಕಾರಣ ಅವರ ಫೋಟೋಗಳನ್ನು ಇಟ್ಟು ಸಭೆ ಮಾಡಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | SIR ವಿರುದ್ಧ ವಿವಿಧ ಸಂಘಟನೆಗಳ ಆಕ್ಷೇಪ: ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ಬುಡಕಟ್ಟು ಒಕ್ಕೂಟದ ರಾಜ್ಯಾಧ್ಯಕ್ಷ ಚಾವಡಿ ಲೋಕೇಶ್ ಮಾತನಾಡಿ, “ಎಸ್‌ಐಆರ್ ಭೂತಕ್ಕೆ ಬಲಿಯಾಗುತ್ತಿರುವ ಸಮುದಾಯವೆಂದರೆ ಬುಡಕಟ್ಟು ಸಮುದಾಯ. ಅಂದಿನ ಆದಿವಾಸಿಗಳೇ ಇಂದು ಅತಂತ್ರ ಅಲೆಮಾರಿಗಳಾಗಿದ್ದಾರೆ. ಕಾಡಿನ ಸಂಪತ್ತನ್ನೆಲ್ಲ ದೋಚುವುದಕ್ಕಾಗಿ ಕೇಂದ್ರ ಎಸ್‌ಐಆರ್ ಹೆಸರಿನಲ್ಲಿ ಬುಡಕಟ್ಟುಗಳನ್ನು ಕಾಡಿನಿಂದ ಹೊರದಬ್ಬುವ ಹುನ್ನಾರ ನಡೆಸುತ್ತಿದೆ. ನಾವು ಇತ್ತೀಚೆಗೆ ಮುನ್ನೆಲೆಗೆ ಕಾಣಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಎಸ್‌ಐಆರ್ ಮೂಲಕ ನಮ್ಮ ಅಸ್ತಿತ್ವವನ್ನು ಕಸಿಯಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ, ಮುಕುಂದ ಗೌಡ, ರಾಜಶೇಖರ್ ಅಕ್ಕಿ, ಡಾ. ಎಚ್ ವಿ ವಾಸು, ಅನಿಲ್ ಚಿಕ್ಕದಳವಟ್ಟ ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದರು.
ಜಾಗೃತ ಕರ್ನಾಟಕದ ಸಂಘಟಕರು ಸೇರಿದಂತೆ ಬಹುತೇಕರು ಈ ಬಹಿರಂಗ ಚರ್ಚೆ ಕಾರ್ಯಕ್ರಮದಲ್ಲಿ ಇದ್ದರು.




