ಬಿಡದಿ ಟೌನ್‌ಶಿಪ್‌ | 2ನೇ ದಿನಕ್ಕೆ ಜೆಡಿಎಸ್‌ ಪಾದಯಾತ್ರೆ: ಎಚ್‌.ಡಿ ದೇವೇಗೌಡ ಭಾಗಿ; ಸರ್ಕಾರದ ವಿರುದ್ಧ ವಾಗ್ದಾಳಿ

Date:

ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಜೆಡಿಎಸ್ ಆರಂಭಿಸಿರುವ ಪಾದಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಸೋಮವಾರ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡ ಭಾಗಿಯಾಗಿದ್ದಾರೆ. ಜೊತೆಗೆ, ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

- Advertisement -

ಆಗಸ್ಟ್ 9ರಂದು ಭೈರಮಂಗಲದಿಂದ ಆರಂಭವಾದ ಪಾದಯಾತ್ರೆ ಆಗಸ್ಟ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶಗೊಳ್ಳಿದೆ. ಪಾದಯಾತ್ರೆಯಲ್ಲಿ ರೈತರು ಮತ್ತು ಜೆಡಿಎಸ್‌ ಕಾರ್ಯಕರ್ತರು ಭಾಗಿಯಾಗಿದ್ದು, ‘ನಮ್ಮ ಭೂಮಿ, ನಮ್ಮ ಹಕ್ಕು’ ಎಂಬ ಘೋಷಣೆಗಳು ಮೊಳಗಿವೆ. “ಟೌನ್‌ಶಿಪ್ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಪ್ರತಿಭಟನಾನಿರತ ರೈತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಹತ್ತಿಕ್ಕಲಾಗುತ್ತಿದೆ” ಎಂದು ಜೆಡಿಎಸ್‌ ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಭಾನುವಾರ ಪಾದಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಡದಿಯ ರೈತರು ಕೇವಲ ತಮ್ಮ ಜಮೀನಿಗಾಗಿ ಹೋರಾಡುತ್ತಿಲ್ಲ; ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಮತ್ತು ವ್ಯಾಪಕ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟಕ್ಕೆ ಮುನ್ನುಡಿಯಾಗಿದೆ. ಪಾದಯಾತ್ರೆ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹೋರಾಟ ಮಾತ್ರವಲ್ಲ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಹೋರಾಟಕ್ಕೂ ಇದು ಅಡಿಪಾಯವಾಗಲಿದೆ” ಎಂದು ಹೇಳಿದ್ದಾರೆ.

“ಬಿಡದಿ ಯೋಜನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತಿಯಾದ ಆಸಕ್ತಿ ತೋರಿಸುತ್ತಿದ್ದಾರೆ. ಈ ಯೋಜನೆಯ ಹಿಂದೆ ಕೆಲವು ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಸರ್ಕಾರ ಮೊದಲು ಎಕರೆಗೆ ಸುಮಾರು 2 ಕೋಟಿ ರೂ. ಪರಿಹಾರದ ಮಾತು ಹೇಳುತ್ತಿತ್ತು. ಆದರೆ, ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಎಕರೆಗೆ 3 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ನೀಡುವುದಾಗಿ ಹೇಳುತ್ತಿದ್ದಾರೆ. ಈ ಆಮಿಷಕ್ಕೆ ರೈತರು ಮರುಳಾಗಬಾರದು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ಬಿಡದಿ ಟೌನ್‌ಶಿಪ್ ಮತ್ತು NICE ಯೋಜನೆ ‘ಒಂದೇ ನಾಣ್ಯದ ಎರಡು ಮುಖಗಳು’ ನೈಸ್‌ ಯೋಜನೆಗಾಗಿ ಸುಮಾರು ಮೂರು ದಶಕಗಳ ಹಿಂದೆ ಭೂಮಿ ಕಳೆದುಕೊಂಡ ಹಲವರಿಗೆ ಇನ್ನೂ ಸಮರ್ಪಕ ಪರಿಹಾರ ಅಥವಾ ಪರ್ಯಾಯ ನಿವೇಶನ ದೊರೆತಿಲ್ಲ. ಬಿಡದಿಯಲ್ಲೂ ಅದೇ ಪರಿಸ್ಥಿತಿ ಮರುಕಳಿಸಬಹುದು” ಎಂದಿದ್ದಾರೆ.

ಎರಡನೇ ದಿನದ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, “ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಂಡು ನಗರ ನಿರ್ಮಿಸುವ ಅಗತ್ಯವೇನು? ಈ ಭೂಮಿಯನ್ನು ಅಂತಿಮವಾಗಿ ಯಾರಿಗೆ ನೀಡಲಾಗುತ್ತದೆ? ಬಿಡದಿ ಪ್ರದೇಶದಲ್ಲಿ ತೋಟಗಾರಿಕೆ ಮತ್ತು ಹೈನುಗಾರಿಕೆ ದೊಡ್ಡ ಪ್ರಮಾಣದಲ್ಲಿದ್ದು, ಇಲ್ಲಿನ ಕೃಷಿ ಆರ್ಥಿಕತೆಯನ್ನು ನಾಶಪಡಿಸಬಾರದು” ಎಂದು ಹೇಳಿದ್ದಾರೆ.

ಪಾದಯಾತ್ರೆಯ ನೇತೃತ್ವ ವಹಿಸಿರುವ ನಿಖಿಲ್ ಕುಮಾರಸ್ವಾಮಿ, “ಮೊದಲ ಹಂತದಲ್ಲೇ ಸುಮಾರು 498–500 ಎಕರೆ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನದಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಅವರಲ್ಲಿ ಬಹುಪಾಲು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. ಭೂಸ್ವಾಧೀನದ ವಿರುದ್ಧ ರೈತರು ನೂರಾರು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಅವರ ಮಾತು ಕೇಳುತ್ತಿಲ್ಲ. ರೈತರ ಒಪ್ಪಿಗೆ ಪಡೆಯದೇ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ. ಭೂಮಿ ನೀಡಲು ಸಿದ್ಧರಿಲ್ಲದವರ ಮೇಲೂ ಒತ್ತಡ ಹೇರಲಾಗುತ್ತಿದೆ” ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಪ್ರಯಾಗ್‌ರಾಜ್‌ನ ಛಾತ್ರೋಂ ಕೀ ಗೂಂಜ್: ಯುವಜನರ ಆಕ್ರೋಶಕ್ಕೆ ಹೊಸ ರಾಜಕೀಯ ಭಾಷ್ಯ ಬರೆದ ರಾಹುಲ್

ಬಿಡದಿ ಟೌನ್‌ಶಿಪ್ ವಿಚಾರವನ್ನು ಬಿಜೆಪಿ ಮತ್ತು ಜೆಡಿಎಸ್‌ ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂಬ ಅಸಮಾಧಾನವೂ ರೈತರಲ್ಲಿದೆ. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, “ಟೌನ್‌ಶಿಪ್‌ ವಿರುದ್ಧದ ಹೋರಾಟ ದೀರ್ಘಕಾಲದಿಂದ ನಡೆಯುತ್ತಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಸದನದಲ್ಲಿ ಸಮರ್ಪಕವಾಗಿ ಪ್ರಶ್ನೆ ಎತ್ತಿಲ್ಲ. ಟೌನ್‌ಶಿಪ್ ವಿರೋಧಿ ಹೋರಾಟವನ್ನು ಪಕ್ಷಾತೀತವಾಗಿ ಉಳಿಸಬೇಕು” ಎಂದು ಹೇಳಿದ್ದಾರೆ.

ಅಂದಹಾಗೆ, ಬಿಡದಿ ಟೌನ್‌ಶಿಪ್ ವಿರುದ್ಧ ನಿರಂತರವಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಹೋರಾಟಕ್ಕೆ ಮಣಿದಿರುವ ಸರ್ಕಾರ, ಯೋಜನೆಯ ಅನುಷ್ಠಾನ ಮತ್ತು ಭೂಸ್ವಾಧೀನವನ್ನು ಸ್ಥಗಿತಗೊಳಿಸಿದೆ. ಯೋಜನೆಗಾಗಿ ಭೂಮಿಯನ್ನು ಕೊಡಲು ಮುಂದೆಬರುವ ರೈತರಿಗೆ ಸೂಕ್ತ ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿಕೊಳ್ಳುತ್ತೇವೆಂದು ಸರ್ಕಾರ ಹೇಳುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಭೂಮಿ ಕೊಡುವ ಮಾತೇ ಇಲ್ಲವೆಂದು ರೈತರು ನಿರ್ಧರಿಸಿದ್ದಾರೆ.

ಈ ನಡುವೆ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರು, ಭೂಮಾಲೀಕರು ಮತ್ತು ಇತರರ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...