ಹೊರನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಾಲೆಗಳ ಸ್ಥಿತಿಗತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಾದ ‘ಗಡಿನಾಡು ಕನ್ನಡ ವಿದ್ಯಾರ್ಥಿಗಳ ಕನ್ನಡ ಮಾಧ್ಯಮ ಪ್ರಶಸ್ತಿ’ ಮತ್ತು ಶಿಷ್ಯವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಹೊರನಾಡು ಕನ್ನಡಿಗರ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿ ನೇತೃತ್ವದಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಸಲ್ಲಿಸಲಾಯಿತು.
‘ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಕಾರಾಮುಂಗಿ, ಎಸಗಿ, ಮೋರಗಿ, ಗೊಂದೇಗಾಂವ, ಔದತಪೂರ, ಶಿಖರಖಾನ ಹಾಗೂ ಶಹಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ “ಗಡಿನಾಡು ಕನ್ನಡ ವಿದ್ಯಾರ್ಥಿಗಳ ಪ್ರಶಸ್ತಿ ಹಾಗೂ ಶಿಷ್ಯವೇತನ” ಯೋಜನೆ 2022-23ರಿಂದ ಸ್ಥಗಿತಗೊಂಡಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತವಾಗಿದೆ’ ಎಂದು ಹೇಳಿದರು.
‘2011-12ರಲ್ಲಿ ಆರಂಭವಾದ ಈ ಯೋಜನೆಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ದೊರೆಯುತ್ತಿತ್ತು. ಆದರೆ ಯೋಜನೆ ರದ್ದಾದ ಬಳಿಕ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಯೋಜನೆಯನ್ನು ಪುನಾರಂಭಿಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಪ್ರಶಸ್ತಿ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಭಾಷಾವಾರು ಪ್ರಾಂತ ರಚನೆಯ ನಂತರ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಗಡಿನಾಡಿನ ಸಾವಿರಾರು ಕನ್ನಡ ವಿದ್ಯಾರ್ಥಿಗಳು ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದರೂ ಕರ್ನಾಟಕದ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರ ವಿವಿಧ ಸಮಿತಿಗಳಿಂದ ಸಿದ್ಧಗೊಂಡಿರುವ ವರದಿಗಳನ್ನು ಕೂಡಲೇ ಜಾರಿಗೆ ತರಬೇಕು. ಹೊರನಾಡು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.5ರಷ್ಟು ಮೀಸಲು ನೀತಿಯನ್ನು ಅನುಷ್ಠಾನಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರು ಮನವಿ ಸ್ವೀಕರಿಸಿ ಮಾತನಾಡಿ, ‘ಶೀಘ್ರದಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕಾರಾಮುಂಗಿ ಗ್ರಾಮಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.
ಗಡಿನಾಡು ವಿದ್ಯಾರ್ಥಿಗಳ ಪ್ರಶಸ್ತಿ ಹಾಗೂ ಶಿಷ್ಯವೇತನವನ್ನು ಸರ್ಕಾರ ಬಿಡುಗಡೆ ಮಾಡದಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಧರ್ಮೇಂದ್ರ ಪೂಜಾರಿ ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಉಪವಾಸ ಸತ್ಯಾಗ್ರಹದಲ್ಲಿದ್ದ ಗೋಪಾಲ್ ಸಿಂಗ್ ಠಾಕೂರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಜಗನಾಥ ಹೆಬ್ಬಾಳೆ, ರಾಜಕುಮಾರ ಹೆಬ್ಬಾಳೆ, ಶಿವಶರಣಪ್ಪ ಗಣೇಶಪುರ, ಭೀಮರಾವ ಬೀದರಕರ, ರಾಜಕುಮಾರ ಮಡಕಿ ಮನ್ನಳಿ ಹಾಗೂ ಕಾಶಿನಾಥ ಗಡ್ಡೆ ಉಪಸ್ಥಿತರಿದ್ದರು.




