ಬೆಂಗಳೂರಿನಲ್ಲಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಸುನೀಶ್ ಹೆಗಡೆ ಮತ್ತು ರಾಬಿನ್ ಖಂಡೇಲವಾಲ್‌ಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಶುಕ್ರವಾರ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ ಚಂದ್ರಶೇಖರ್ ರೆಡ್ಡಿ, ಜೂ.5ರವರೆಗೆ ಜೈಲಿಗಟ್ಟಲು ಆದೇಶಿಸಿದ್ದಾರೆ.
ಮೇ.9ರಂದು ಬಂಧನಕ್ಕೊಳಗಾಗಿದ್ದ ಈ ಆರೋಪಿಗಳನ್ನು ಜಾರಿ ನಿರ್ದೇಶನಾಲಯ (ED) ಈವರೆಗೆ ಒಟ್ಟು 15 ದಿನಗಳ ಕಾಲ (ಮೊದಲು 10 ದಿನ, ಬಳಿಕ 5 ದಿನ ವಿಸ್ತರಣೆ) ತನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿತ್ತು. ಇಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಿಂದ ₹11.5 ಕೋಟಿ ಲೂಟಿ ಮಾಡಿರುವುದು, ದೇಶದ ಪ್ರಮುಖ ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದು ಮತ್ತು ವಿದೇಶಗಳಲ್ಲಿ ಕ್ರಿಪ್ಟೋ ಕರೆನ್ಸಿ ಬದಲಾವಣೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಇಡಿ ಸದ್ಯ ತನಿಖೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಈ ಪ್ರಕರಣದ ತನಿಖೆಯ ಭಾಗವಾಗಿ ಶ್ರೀಕಿಯ ಸ್ನೇಹಿತ ಎನ್ನಲಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ನಿವಾಸದ ಮೇಲೂ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಜತೆಗೆ ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ, ಬಿಟ್‌ಕಾಯಿನ್ ಬಳಸಿ ಡಾರ್ಕ್‌ನೆಟ್ ಮೂಲಕ ಮಾದಕ ದ್ರವ್ಯಗಳನ್ನು ತರಿಸಿಕೊಂಡ ಆರೋಪದ ಮೇಲೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲೂ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಯುನೋಕಾಯಿನ್ ಹ್ಯಾಕಿಂಗ್ ಹಗರಣದ ತನಿಖೆಯನ್ನು ಸಿಐಡಿ ನಡೆಸಿತ್ತು.
ಇದನ್ನೂ ಓದಿ: ನಗದು ಕೊರತೆ: ಬ್ಯಾಂಕ್‌ಗಳಿಗೆ ₹81,590 ಕೋಟಿ ಹರಿಸಿದ RBI
2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಈ ಬಿಟ್‌ಕಾಯಿನ್ ಹಗರಣದ ಮರುತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು (SIT) ರಚಿಸಿತ್ತು. 2024ರ ಜುಲೈನಲ್ಲಿ ಹೈಕೋರ್ಟ್ ಶ್ರೀಕಿ ಮತ್ತು ಖಂಡೇಲವಾಲಾ ವಿರುದ್ಧ ದಾಖಲಾಗಿದ್ದ ಕಠಿಣ ‘ಕೋಕಾ’ (KCOCA) ಕಾಯ್ದೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. 2020ರಲ್ಲಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಈ ಇಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿ ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.




