ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಶಾಸಕರು ಕ್ರಾಸ್ ವೋಟಿಂಗ್ (ಅಡ್ಡ ಮತದಾನ) ಮಾಡುವುದನ್ನು ತಡೆಯಲು ವಿಫಲವಾದ ಕರ್ನಾಟಕ ರಾಜ್ಯ BJP ನಾಯಕರ ವಿರುದ್ಧ ಪಕ್ಷದ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಹನಮಗೌಡ ಪಾಟೀಲ್ ಮತ್ತು ವಿಧಾನ ಪರಿಷತ್ ಸಚೇತಕ ರವಿಕುಮಾರ್ ಅವರನ್ನೊಳಗೊಂಡ ನಿಯೋಗವು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿತು. ಈ ವೇಳೆ ರಾಜ್ಯದ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಸಹ ಉಪಸ್ಥಿತರಿದ್ದರು.
ಪಕ್ಷದ ಮುಖಭಂಗಕ್ಕೆ ಕಾರಣವಾದ ಕ್ರಾಸ್ ವೋಟಿಂಗ್ ತಡೆಯುವಲ್ಲಿ ರಾಜ್ಯ ನಾಯಕರು ಎಡವಿದ್ದಕ್ಕೆ ನಿತಿನ್ ನಬಿನ್ ಅಸಮಾಧಾನ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮತ್ತು ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲದೆ ಒಟ್ಟಾಗಿ ಕೆಲಸ ಮಾಡುವಂತೆ ನಾಯಕರಿಗೆ ಸೂಚನೆ ನೀಡಿದರು. ಅಲ್ಲದೆ, 2028ರ ವಿಧಾನಸಭೆ ಚುನಾವಣೆಯತ್ತ ಗಮನಹರಿಸಿ ಸಂಘಟನೆ ಬಲಪಡಿಸಲು ಸೂಚಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, “ಕ್ರಾಸ್ ವೋಟಿಂಗ್ ವಿಚಾರವನ್ನು ಹೈಕಮಾಂಡ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಸೂಕ್ತ ಪಾಠ ಕಲಿಸುವುದಾಗಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಆ ವಿಚಾರವನ್ನು ಅವರ ನಿರ್ಧಾರಕ್ಕೆ ಬಿಡಲಾಗಿದೆ” ಎಂದು ತಿಳಿಸಿದರು. ಕಳೆದ ವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ 7 ಸ್ಥಾನಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 2 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಜೆಡಿಎಸ್ ಖಾತೆ ತೆರೆಯಲು ವಿಫಲವಾಯಿತು. ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದರಿಂದಲೇ ಕಾಂಗ್ರೆಸ್ ನಿರೀಕ್ಷಿತ 140 ಮತಗಳಿಗಿಂತ 11 ಹೆಚ್ಚು ಮತಗಳನ್ನು (ಒಟ್ಟು 151) ಗಳಿಸಲು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.




