ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕಾರಣಕ್ಕೆ ಪಡಿತರ (ರೇಷನ್) ಸೌಲಭ್ಯವನ್ನು ನಿರಾಕರಿಸಿದ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿದಾರರು ಈ ವಿಚಾರವಾಗಿ ಮೊದಲು ಕಲ್ಕತ್ತಾ ಹೈಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಈ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತು. “ಕಲ್ಕತ್ತಾ ಹೈಕೋರ್ಟ್ ಈಗಾಗಲೇ ಬೇಸಿಗೆ ರಜೆ ಮುಗಿಸಿ ಕಾರ್ಯನಿರ್ವಹಿಸುತ್ತಿದೆ. ಇಂತಹ ರಾಜ್ಯ ಮಟ್ಟದ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಸೂಕ್ತ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪಶ್ಚಿಮ ಬಂಗಾಳ ಮೂಲದ ‘ಪಶ್ಚಿಮ ಬಂಗಾ ಕೃಷಿ ಮಜೂರ್ ಸಮಿತಿ’ ಎಂಬ ಕಾರ್ಮಿಕ ಸಂಘಟನೆಯು ಸಂವಿಧಾನದ ವಿಧಿ 32ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಕೀಲ ಎಸ್. ಪ್ರಸನ್ನ ಅವರು ವಾದ ಮಂಡಿಸುತ್ತಾ, “ಇದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಇದು ದೇಶಾದ್ಯಂತ ಪರಿಣಾಮ ಬೀರಬಲ್ಲ ವಿಚಾರ. ಸುಪ್ರೀಂ ಕೋರ್ಟ್ ಈಗಾಗಲೇ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯ ಸಿಂಧುತ್ವವನ್ನು ಎತ್ತಿಹಿಡಿದಿರುವುದರಿಂದ, ಅದರಿಂದ ಉಂಟಾಗಿರುವ ಪಡಿತರ ವಂಚಿತ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಪರಿಹರಿಸಬೇಕು” ಎಂದು ಕೋರಿದ್ದರು.
ಆದರೆ, ನ್ಯಾಯಪೀಠವು ಈ ವಾದವನ್ನು ತಳ್ಳಿಹಾಕಿತು. “ಮತದಾರರ ಪಟ್ಟಿಯ ಪರಿಷ್ಕರಣೆಯ ಸಿಂಧುತ್ವ ಬೇರೆ, ಪಡಿತರ ಸೌಲಭ್ಯ ನಿರಾಕರಣೆಯ ವಿಚಾರವೇ ಬೇರೆ. ಇದು ಸಂಪೂರ್ಣವಾಗಿ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವಾದ್ದರಿಂದ ಸ್ಥಳೀಯ ಹೈಕೋರ್ಟ್‌ನ ವ್ಯಾಪ್ತಿಗೆ ಬರುತ್ತದೆ” ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಚ್ಚಿಬಿದ್ದ ಬೆಂಗಳೂರು | ಲಿವ್-ಇನ್ ಸಂಬಂಧಕ್ಕೆ ವಿರೋಧ; ತಂದೆ, ತಾಯಿ, ತಂಗಿಯನ್ನ ಹತ್ಯೆಗೈದು ಪರಾರಿಯಾದ ಮಗಳು!
ಪಶ್ಚಿಮ ಬಂಗಾಳ ಸರ್ಕಾರದ ಆಹಾರ ಮತ್ತು ಸರಬರಾಜು ಇಲಾಖೆಯು, ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವವರ ಪಡಿತರ ಚೀಟಿಗಳನ್ನು ‘ಅಮಾನ್ಯ’ಗೊಳಿಸಲು ಆದೇಶಿಸಿದೆ. ಮತದಾರರ ಪಟ್ಟಿಯಲ್ಲಿ ‘ಅನುಪಸ್ಥಿತರು’, ‘ಸ್ಥಳಾಂತರಗೊಂಡವರು’, ‘ನಕಲಿ’ ಅಥವಾ ‘ಮೃತಪಟ್ಟವರು’ ಎಂದು ನಮೂದಾಗಿರುವವರ ಪಡಿತರ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ.
ಈ ಪ್ರಕ್ರಿಯೆಯಲ್ಲಿ ಸುಮಾರು 27.16 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಆದರೆ, ತಾಂತ್ರಿಕ ದೋಷಗಳು, ಹೆಸರಿನಲ್ಲಿನ ಅಕ್ಷರ ದೋಷಗಳು ಅಥವಾ ಸರಿಯಾದ ನೋಟಿಸ್ ನೀಡದ ಕಾರಣಕ್ಕೆ ನೈಜ ಮತದಾರರಿಗೂ ತೊಂದರೆಯಾಗಿದೆ ಎಂದು ಪ್ರತಿಪಕ್ಷಗಳು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಇದು ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕ್ರಮ ಎಂಬ ತೀವ್ರ ವಿರೋಧ ವ್ಯಕ್ತವಾಗಿದೆ.




