ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಮುಂದಿನ ಒಂದು ವಾರದ ಅವಧಿಯಲ್ಲಿ ಕರ್ನಾಟಕ ಬಿಡುಗಡೆ ಮಾಡಲಿರುವ ನೀರಿನ ಪ್ರಮಾಣ ಮತ್ತು ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಇತ್ತೀಚಿನ ವರದಿಯನ್ನು ಸಲ್ಲಿಸುವಂತೆ ಆದೇಶಿಸಿ, ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ (ಆಗಸ್ಟ್ 24) ಮುಂದೂಡಿದೆ.
ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ಕಾವೇರಿ ನೀರು: ಪ್ರಾಧಿಕಾರದ ನಿರ್ಧಾರ ಖಂಡಿಸಿದ ಕರವೇ
ತಮಗೆ ಬರಬೇಕಾದ ನಿಗದಿತ ಪಾಲು ಸಿಗುತ್ತಿಲ್ಲ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ಸೂಚಿಸಿದ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ನೀರನ್ನು ಬಿಡಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದೂರಿದೆ.
ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, “ನಮಗೆ ತುಂಬಾ ಕಷ್ಟದ ಪರಿಸ್ಥಿತಿ ಇದ್ದರೂ ಪ್ರಾಧಿಕಾರದ ನಿಯಮ ಪಾಲಿಸಲು ಪ್ರಯತ್ನಿಸುತ್ತೇವೆ” ಎಂದು ತಿಳಿಸಿದರು. ಆರಂಭದ 4-5 ದಿನಗಳಲ್ಲಿ ನೀರಿನ ಪ್ರಮಾಣ 6,000 ಕ್ಯೂಸೆಕ್‌ಗೆ ಇಳಿದಿದ್ದರೂ, ಮುಂದಿನ ದಿನಗಳಲ್ಲಿ ಈ ಕೊರತೆಯನ್ನು ಸರಿದೂಗಿಸಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದ್ದಾರೆ.
ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ CWMA ನೀಡಿರುವ ನಿರ್ದೇಶನವನ್ನು ಪಾಲಿಸುವುದಾಗಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಬಿಳಿಗುಂಡ್ಲುವಿನಲ್ಲಿ ಸಂಗ್ರಹವಾಗಲಿರುವ ನೀರಿನ ನಿಖರ ಮಾಹಿತಿ ಹಾಗೂ ಕರ್ನಾಟಕದ ಜಲಾಶಯಗಳ ಸ್ಥಿತಿಗತಿಯ ವರದಿಯನ್ನು ಆಧರಿಸಿ ಮುಂದಿನ ವಾರ ಸುಪ್ರೀಂ ಕೋರ್ಟ್ ಈ ಅರ್ಜಿಯ ಮರು ವಿಚಾರಣೆ ನಡೆಸಲಿದೆ.




