ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೂ ಹನೂರು ಶಾಸಕ ಎಂ ಆರ್ ಮಂಜುನಾಥ್ ಅವರು ಇಂದು ತಲಾ 15 ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ.
ಹನೂರು ತಾಲೂಕಿನ ತೋಮಿಯಾರ್ ಪಾಳ್ಯ ಗ್ರಾಮದ ಕುಮಾರ್, ಗ್ರಾಮದ ಸಮೀಪವಿರುವ ಮರಿಯಮಂಗಲ ಗ್ರಾಮದ ಅಂತೋಣಿ ಸಾಮಿ ಹಾಗೂ ಪೀಟರ್ ಅವರ ಮನೆಗಳಿಗೆ ತೆರಳಿ ಸರ್ಕಾರದಿಂದ 5 ಲಕ್ಷ ರೂ. ಮತ್ತು ವೈಯಕ್ತಿಕವಾಗಿ 10 ಲಕ್ಷ ರೂ. ಸೇರಿಸಿ ತಲಾ 15 ಲಕ್ಷ ರೂ. ಪರಿಹಾರ ವಿತರಿಸಿದ್ದು, ಭಾನುವಾರ ಪ್ರತಿಭಟನಾನಿರತರಿಗೆ ನೀಡಿದ್ದ ಭರವಸೆಯಂತೆ ಶಾಸಕರು ನಡೆದುಕೊಂಡಿದ್ದಾರೆ. ಅಲ್ಲದೆ ಈ ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನೂ ನೀಡಿದರು.
ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೆದ ತಡರಾತ್ರಿ ಶವಗಳನ್ನು ಗ್ರಾಮಕ್ಕೆ ತರಲಾಗಿದೆ. ತೋಮಿಯಾರ್ ಪಾಳ್ಯದ ಚರ್ಚ್ನಲ್ಲಿ ಮೂವರ ಮೃತದೇಹಗಳನ್ನು ಇಡಲಾಗಿದೆ. ಚರ್ಚ್‌ನ ಪಾದ್ರಿ ಕೆ ಚಾರ್ಲ್ಸ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಬಳಿಕ ಕ್ರೈಸ್ತ ಸಂಪ್ರದಾಯದಂತೆ ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಂಚನಾಮೆ ಹೆಸರಲ್ಲಿ ಸಹಿ ಪಡೆದ ಆರೋಪ: ಮೃತಪಟ್ಟ ಪೀಟರ್ ಅವರ ಸಹೋದರಿ(ವೃತ್ತಿಯಲ್ಲಿ ನರ್ಸ್) ಮಾರ್ಗರೆಟ್ ಮಾತನಾಡಿ, “ಪೊಲೀಸರು ಪಂಚನಾಮೆ ಹೆಸರಿನಲ್ಲಿ ನಮ್ಮಿಂದ ಸಹಿ ಪಡೆದು, ನಮಗೆ ತಿಳಿಯದಂತೆ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಿದ್ದಾರೆ. ಶವಗಳನ್ನು ಐಸ್ ಬಾಕ್ಸ್‌ನಲ್ಲೂ ಇಟ್ಟಿರಲಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ತವ್ಯನಿರತ ಕಾನ್‌ಸ್ಟೆಬಲ್‌ಗೆ ಅವಾಚ್ಯ ನಿಂದನೆ, ಹಲ್ಲೆ ಯತ್ನ: ಜೆಡಿಎಸ್ ಮುಖಂಡ ಮಂಜುನಾಥ್ ವಿರುದ್ಧ ಎಫ್‌ಐಆರ್
ಮಾರ್ಟಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಸೆಲ್ವಂ ಮಾತನಾಡಿ, “ರಾಜ್ಯದಲ್ಲಿ 13 ಲಕ್ಷ ಮಂದಿ ಕ್ರಿಶ್ಚಿಯನ್ ಸಮುದಾಯದವರಿದ್ದೇವೆ. ಸಮುದಾಯದ ಪ್ರಮುಖ ನಾಯಕರು ನಮ್ಮ ನೋವಿಗೆ ಸ್ಪಂದಿಸಿಲ್ಲ. ಇದೇ ಘಟನೆ ಬೇರೆ ಪ್ರಭಾವಿ ಸಮುದಾಯಗಳಿಗೆ ಆಗಿದ್ದರೆ ರಾಜ್ಯಾದ್ಯಂತ ದೊಡ್ಡ ಹೋರಾಟವೇ ನಡೆಯುತ್ತಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.




