ಕನ್ನಡ ಚಿತ್ರರಂಗ ಉಳಿವಿಗೆ ಸರ್ಕಾರದ ನೆರವು ನೀಡಲಿದೆ. ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಹಾಗೆಯೇ, ಘೋಷಣೆ ಮಾಡಿರುವ ಅನುದಾನದ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ಹಣಕಾಸು ಇಲಾಖೆಯನ್ನೂ ಹೊಂದಿರುವ ಡಿಕೆಶಿ ತಿಳಿಸಿದ್ದಾರೆ.
“ಕನ್ನಡ ಚಿತ್ರರಂಗ ಉಳಿವಿಗಾಗಿ ಸಮಗ್ರ ಹೊಸ ಚಲನಚಿತ್ರ ನೀತಿ ಸೇರಿದಂತೆ ಚಲನಚಿತ್ರ ಪ್ರಾಚ್ಯಾಗಾರ (ಆರ್ಕೈವ್) ಸಹಾಯಧನ ಹೆಚ್ಚಳ, ಸರ್ಕಾರದ ಓಟಿಟಿ ವೇದಿಕೆ, ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ, ಏಕಪರದೆ ಚಿತ್ರಮಂದಿರಗಳ ನವೀಕರಣ, ಆಧುನೀಕರಣಕ್ಕೆ ವಿಶೇಷ ನೆರವು, ಚಿತ್ರರಂಗದವರಿಗೆ ಫ್ಲಾಟ್ ನಿರ್ಮಾಣಕ್ಕೆ ಬಿಡಿಎಯಿಂದ ಐದು ಎಕರೆ ಭೂಮಿ” ನೀಡುವಂತೆ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲ ಅವರ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಎತ್ತ ಸಾಗುತ್ತಿದೆ ಕನ್ನಡ ಚಿತ್ರರಂಗ; ಸಿನಿಮಾ ಉಳಿಸಲು ಹೋಮ, ಹವನ – ಪೂಜೆ ನಂತರ ಚಿತ್ರಗಳೆಲ್ಲವೂ ಹೌಸ್‌ಫುಲ್ ಆಗಲಿವೆಯೆ?
ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿಕೆಶಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ತಿಳಿಸಿದ್ದಾರೆ. ಹೊಸ ಚಲನಚಿತ್ರ ನೀತಿ ತರಲು ಚರ್ಚೆ, ಸಹಾಯಧನ ಹೆಚ್ಚಳ, ಪ್ರಾಚ್ಯಾಗಾರ ಪ್ರಾರಂಭಿಸಲು ಈ ವರ್ಷದ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಪ್ರಾರಂಭಿಸಿಲು ಸೂಕ್ತ ಕ್ರಮ, ಚಿತ್ರನಗರಿ ನಿರ್ಮಾಣಕ್ಕೆ ಘೋಷಣೆ ಮಾಡಿರುವ ಅನುದಾನದ ಬಿಡುಗಡೆಯ ಬಗ್ಗೆ ಹಣಕಾಸು ಇಲಾಖೆಯ ಎಸಿಎಸ್ ಅವರನ್ನು ಉಲ್ಲೇಖಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಬಿಡಿಎಯಿಂದ ಐದು ಎಕರೆ ಭೂಮಿ ನೀಡುವ ಕುರಿತಾಗಿ, ‘ಯಾವ ರೀತಿಯಲ್ಲಿ ಸರ್ಕಾರ ಸಹಾಯ ಮಾಡಬಹುದು’ ಎನ್ನುವ ಬಗ್ಗೆಯೂ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮನವಿ ಪತ್ರದಲ್ಲೇನಿದೆ?
“2011ರಲ್ಲಿ ರೂಪಿಸಿದ್ದ ಚಲನಚಿತ್ರ ನೀತಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಕಳೆದ 15 ವರ್ಷದಲ್ಲಿ ತಂತ್ರಜ್ಞಾನ ವಿಚಾರವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಆದ ಕಾರಣ ಹೊಸ ನೀತಿಯಲ್ಲಿ ಓಟಿಟಿ ಮತ್ತು ಡಿಜಿಟಲ್ ವಿತರಣಾ ವ್ಯವಸ್ಥೆ, ಎಐ ಮತ್ತು ಹೊಸ ತಂತ್ರಜ್ಞಾನ ಬಳಕೆ, ಕನ್ನಡ ಚಿತ್ರರಂಗ ರಕ್ಷಣೆ, ಸಣ್ಣ ಚಿತ್ರಗಳಿಗೆ ಪ್ರೋತ್ಸಾಹ, ಚಿತ್ರಮಂದಿರಗಳ ಉಳಿವು, ಕಲಾವಿದರು ಮತ್ತು ಕಾರ್ಮಿಕರ ಕಲ್ಯಾಣ, ಚಲನಚಿತ್ರ ಶಿಕ್ಷಣ ಮತ್ತು ಆಕ್ರೈವ್, ಜಾಗತಿಕ ಮಾರುಕಟ್ಟೆ ವಿಸ್ತರಣೆ ಬಗ್ಗೆ ಬದಲಾವಣೆ ತರಬೇಕು” ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿದೆ.
“ಪ್ರತಿವರ್ಷ 250ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತದೆ. ಅನೇಕ ಓಟಿಟಿ ವೇದಿಕೆಗಳು ಬಹುರಾಷ್ಟ್ರೀಯ ಕಂಪೆನಿಗಳಾಗಿರುವ ಕಾರಣಕ್ಕೆ ಸಣ್ಣ ಮೊತ್ತದ ಸಿನಿಮಾಗಳು ಎಂದು ಖರೀದಿ ಮಾಡುತ್ತಿಲ್ಲ. ಆದ ಕಾರಣಕ್ಕೆ ಸರ್ಕಾರದಿಂದಲೇ ಸರ್ಕಾರಿ ಓಟಿಟಿ ವೇದಿಕೆ ಪ್ರಾರಂಭಿಸಿ ಕನ್ನಡ ಚಿತ್ರರಂಗದ ಉಳಿವಿಗೆ ಸಹಕಾರಿಯಾಗಬಹುದು” ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ 50 | ಕನ್ನಡ ಚಿತ್ರರಂಗ ಕಂಡ ಏಳುಬೀಳುಗಳೇನು?
“ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಮೂಲಕ ಚಿತ್ರಮಂದಿರಗಳ ಲೈಸೆನ್ಸ್ ನವೀಕರಣಕ್ಕೆ ಏಕಗವಾಕ್ಷಿ ಯೋಜನೆ ತರಬೇಕು. ಅನೇಕ ನಿಯಮಗಳು ಸೆಲ್ಯುಲಾಯ್ಡ್ ಕಾಲಕ್ಕೆ ಹೊಂದಿಕೆಯಾಗುವಂತಿದ್ದು ಡಿಜಿಟಲ್ ಯುಗಕ್ಕೆ ಅನ್ವಯವಾಗುವಂತೆ ಷರತ್ತುಗಳನ್ನು ರೂಪಿಸಬೇಕು” ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹಿಸಿದೆ.
ಹಾಗೆಯೇ, “ಈ ಮೊದಲು 1200 ಚಿತ್ರಮಂದಿರಗಳು ರಾಜ್ಯದಲ್ಲಿದ್ದವು. ಈಗ ಅವುಗಳ ಸಂಖ್ಯೆ 400 ಕ್ಕೆ ಕುಸಿದಿದೆ. ಆದ ಕಾರಣ ಹೊಸ ಬಡಾವಣೆ, ಗ್ರಾಮೀಣ ಪ್ರದೇಶದಲ್ಲಿ ಹೊಸ ಚಿತ್ರಮಂದಿರಗಳನ್ನು ನಿರ್ಮಿಸುವುದಕ್ಕೆ ವಿಶೇಷ ಪ್ರೋತ್ಸಾಹ, ತೆರಿಗೆ, ಮೂಲಸೌಕರ್ಯ ವ್ಯವಸ್ಥೆ ಮಾಡಬೇಕು. ಹಳೆಯ ಏಕ ಪರದೆ ಚಿತ್ರಮಂದಿರಗಳ ನವೀಕರಣ, ಆಧುನೀಕರಣಕ್ಕೆ ನೆರವಿನ ಜೊತೆಗೆ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುವ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದೆ.
“2025-26 ರಲ್ಲಿ ಸರ್ಕಾರ ಚಲನಚಿತ್ರಗಳ ಆಕ್ರೈವಿಂಗ್ ಕಾರ್ಯಕ್ಕೆ 3 ಕೋಟಿ ರೂಪಾಯಿ ಘೋಷಣೆ ಮಾಡಿತ್ತು. ಇದರ ಬಗ್ಗೆ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. 1934ರಿಂದ 2010ರವರೆಗೆ ಸೆಲ್ಯುಲಾಲ್ಡ್ ನಲ್ಲಿ ಚಿತ್ರೀಕರಣಗೊಂಡ 3 ಸಾವಿರಕ್ಕೂ ಹೆಚ್ಚು ಚಿತ್ರಗಳಿವ. ಇದರಲ್ಲಿ ಅನೇಕ ಅಪರೂಪದ ಚಿತ್ರಗಳು ಹಾಳಾಗುತ್ತಿವೆ ಅದಕ್ಕೆ ಈ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಬೇಕು” ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿದೆ.
“2022ರಿಂದ ಬಾಕಿ ಉಳಿದಿರುವ ಎಲ್ಲಾ ರಾಜ್ಯ ಪ್ರಶಸ್ತಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. 2026 ರಿಂದ ಪ್ರತಿ ವರ್ಷ ನಿಯಮಿತವಾಗಿ ಪ್ರಶಸ್ತಿಗಳನ್ನು ನೀಡಬೇಕು. ಏಪ್ರಿಲ್ 24 ಡಾ. ರಾಜಕುಮಾರ್ ಅವರ ಜನ್ಮದಿನದಂದು ಪ್ರಶಸ್ತಿ ವಿತರಣೆ ಮಾಡಬೇಕು” ಎಂದು ಆಗ್ರಹಿಸಿದೆ.
“ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಚಿತ್ರ ನಗರಿಗೆ ಶಂಕುಸ್ಥಾಪನೆ ನೆರವೇರಿಸಬೇಕು ಜೊತೆಗೆ ಘೋಷಣೆ ಮಾಡಿರುವ 500 ಕೋಟಿ ಅನುದಾನ ಬಿಡುಗಡೆ ಮಾಡಿಕೊಡಬೇಕು. ಚಲನಚಿತ್ರಗಳಿಗೆ ನೀಡುವ 10 ಲಕ್ಷ ಸಹಾಯಧನ ಮೊತ್ತವನ್ನು ಹೆಚ್ಚಿಸಬೇಕು” ಎಂದು ಮನವಿ ಮಾಡಿದೆ.
“ಹೊಂಬಾಳೆ ಫಿಲಂಸ್ ಸಂಸ್ಥೆಯವರು ಕಡಿಮೆ ದರದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕ ಸದಸ್ಯರುಗಳಿಗೆ ವಸತಿ ಫ್ಲಾಟ್ ಗಳನ್ನು ನಿರ್ಮಿಸಿಕೊಡಲಾಗುತ್ತದೆ ಅದಕ್ಕಾಗಿ ಬಿಡಿಎ ವತಿಯಿಂದ ಐದು ಎಕರೆ ಭೂಮಿ ಮಂಜೂರು ಮಾಡಿ ಕೊಡಬೇಕು” ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿ ಪತ್ರದಲ್ಲಿ ತಿಳಿಸಲಾಗಿದೆ.




