ಶಿರಸಿ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಗಿಡ ನೆಡುವ ಹಾಗೂ ನಡುತೋಪು ಯೋಜನೆಗಳ ಕುರಿತು ಸಾರ್ವಜನಿಕವಾಗಿ ಸಂಪೂರ್ಣ ಮಾಹಿತಿ ಬಹಿರಂಗಪಡಿಸುವಂತೆ ಆಗ್ರಹಿಸಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅರಣ್ಯ ಕಚೇರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಜೂನ್ 1ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಅವರಿಗೆ ಸಲ್ಲಿಸಿದ್ದ ಆರು ಪ್ರಶ್ನೆಗಳ ಮನವಿಗೆ 30 ದಿನಗಳ ಗಡುವು ಜೂನ್ 30ರಂದು ಪೂರ್ಣಗೊಂಡಿದ್ದರೂ ಯಾವುದೇ ಸ್ಪಷ್ಟ ಉತ್ತರ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಇಲಾಖೆಯ ಸ್ಪಷ್ಟನೆಗಾಗಿ ಅರಣ್ಯ ಕಚೇರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಅರಣ್ಯ ಇಲಾಖೆಯ ಗಿಡ ನೆಡುವ ಕಾರ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ಹಾಗೂ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಯೋಜನೆಗಳ ಬಗ್ಗೆ ಪಾರದರ್ಶಕ ಮಾಹಿತಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಮನವಿ ಸಲ್ಲಿಸಲಾಗಿತ್ತು. ಆದರೆ, ಇಲಾಖೆ ಮಾಹಿತಿ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ನಾಡಬಾಂಬ್ ಪ್ರಕರಣ ಭೇದಿಸಿದ ಪೋಲಿಸರು; ಮೂವರು ಬಂಧನ, ಜೀವಂತ ಬಾಂಬ್ ವಶ
ನಡುತೋಪು ಯೋಜನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅಧಿನಿಯಮ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಕಾಮಗಾರಿಯ ವೆಚ್ಚ, ಗುತ್ತಿಗೆದಾರರ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಪ್ರಕಟಿಸದಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆನರಾ ವೃತ್ತದಲ್ಲಿ ಕಳೆದ ಮೂರು ವರ್ಷಗಳು ಹಾಗೂ ಪ್ರಸಕ್ತ ವರ್ಷದ ನಡುತೋಪು ಯೋಜನೆಗಳ ಸಂಪೂರ್ಣ ವಿವರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ನೆಡಲಾದ ಗಿಡಗಳ ಸಂಖ್ಯೆ, ವ್ಯಾಪ್ತಿ ಹಾಗೂ ವೆಚ್ಚದ ಮಾಹಿತಿ, ಜೊತೆಗೆ ಗಿಡ ನೆಡುವ ಪ್ರದೇಶಗಳಲ್ಲಿ ಸೂಚನಾ ಫಲಕಗಳಲ್ಲಿ ಗುತ್ತಿಗೆದಾರರ ಹೆಸರು ಮತ್ತು ಕಾಮಗಾರಿ ಮೊತ್ತವನ್ನು ಪ್ರಕಟಿಸದಿರುವ ಕಾರಣವನ್ನು ಸಾರ್ವಜನಿಕವಾಗಿ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿವರ್ಷ ಇಲಾಖೆ ಸಾವಿರಾರು ಹೊಂಡಗಳನ್ನು ತೋಡಿ ಗಿಡಗಳನ್ನು ನೆಟ್ಟಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಿದ್ದರೂ, ಸ್ಥಳದಲ್ಲಿ ನೆಟ್ಟ ಹಾಗೂ ಬದುಕಿರುವ ಗಿಡಗಳು ಕಾಣುತ್ತಿಲ್ಲ. ಆದರೆ ವೆಚ್ಚದ ವಿವರ ಮಾತ್ರ ದಾಖಲೆಗಳಲ್ಲಿ ಇದೆ. ಬದುಕಿಗಾಗಿ ಅರಣ್ಯವನ್ನು ಅವಲಂಬಿಸಿರುವ ಅರಣ್ಯವಾಸಿಗಳ ಮೇಲೆ ಕ್ರಮ ಕೈಗೊಳ್ಳುವ ಇಲಾಖೆ, ತನ್ನ ಕಾಮಗಾರಿಗಳ ಲೆಕ್ಕಾಚಾರದಲ್ಲಿ ಪಾರದರ್ಶಕತೆ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಸಮರ್ಪಕ ಹಾಗೂ ಸ್ಪಷ್ಟ ಮಾಹಿತಿ ಸಿಗದಿದ್ದರೆ ಅರಣ್ಯವಾಸಿಗಳು ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ರವೀಂದ್ರ ನಾಯ್ಕ ಎಚ್ಚರಿಸಿದ್ದಾರೆ.




