ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ಆಘಾತಕಾರಿ ಬೆಳವಣಿಗೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ರಾಜ್ಯ ಘಟಕ ಸಜ್ಜಾಗಿದೆ. ಅಡ್ಡ ಮತದಾನದ ಸತ್ಯಾಸತ್ಯತೆಯನ್ನು ಹೊರತರಲು ಅತಿ ಶೀಘ್ರದಲ್ಲೇ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ತುರ್ತು ಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, “ಈ ಜ್ವಲಂತ ಸಮಸ್ಯೆಯ ಕುರಿತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ. ನಾವೆಲ್ಲರೂ ದೇವರ ಮೇಲೆ ಅಪಾರ ನಂಬಿಕೆ ಉಳ್ಳವರಾಗಿದ್ದು, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸಭೆ ನಡೆಸುವ ಮೂಲಕ ಸ್ವಂತ ತಾಯಿಗೆ ದ್ರೋಹ ಬಗೆದ ಶಾಸಕರು ಯಾರು ಮತ್ತು ಅದರ ಹಿಂದಿರುವ ಅಸಲಿ ಸತ್ಯವೇನು ಎಂಬುದು ಇಡೀ ನಾಡಿಗೆ ಮನವರಿಕೆಯಾಗಬೇಕಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವಿರುದ್ಧ ಕೇಳಿಬರುತ್ತಿರುವ ತೀವ್ರ ಟೀಕೆಗಳನ್ನು ತಾವು ಗಮನಿಸಿರುವುದಾಗಿ ಹೇಳಿದ ವಿಜಯೇಂದ್ರ, “ಈ ಅಡ್ಡ ಮತದಾನದ ಘಟನೆಯನ್ನು ನನ್ನ ಮನಸಾಕ್ಷಿ ಯಾವುದೇ ಕಾರಣಕ್ಕೂ ಒಪ್ಪುತ್ತಿಲ್ಲ. ಇದೇ ಘಟನೆಯನ್ನು ನೆಪವಾಗಿಟ್ಟುಕೊಂಡು ಕೆಲವರು ನಾಯಕತ್ವದ ಮೇಲೆ ಪರೋಕ್ಷ ದಾಳಿ ನಡೆಸಲು ಮತ್ತು ರಾಜಕೀಯ ಕುತಂತ್ರ ಹೂಡಲು ಯತ್ನಿಸುತ್ತಿದ್ದಾರೆ. ಆದ್ದರಿಂದ, ಪಕ್ಷದ ಗೌರವವನ್ನು ಉಳಿಸಲು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೆಮ್ಮದಿ ನೀಡಲು ಈ ಇಡೀ ಪ್ರಹಸನದ ಸತ್ಯವನ್ನು ಸಾರ್ವಜನಿಕರ ಮುಂದೆ ಇಡುವುದು ಅನಿವಾರ್ಯವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: BJP ಜತೆಗೆ ಮೈತ್ರಿ: ಅಳಿವಿನ ಹಾದಿ ತಲುಪಿತೇ ಜೆಡಿಎಸ್?
“ನಮ್ಮದು ಶಿಸ್ತಿನ ರಾಷ್ಟ್ರೀಯ ಪಕ್ಷ. ನಾವೆಲ್ಲರೂ ಶಾಸಕರಾಗಿ ಗೆದ್ದು ವಿಧಾನಸೌಧ ಪ್ರವೇಶಿಸಲು ಪಕ್ಷದ ಆಶೀರ್ವಾದ ಹಾಗೂ ಲಕ್ಷಾಂತರ ಕಾರ್ಯಕರ್ತರ ಹಗಲಿರುಳಿನ ಪರಿಶ್ರಮ ಕಾರಣವಾಗಿದೆ. ಇವತ್ತು ಮತದಾರರು ನರೇಂದ್ರ ಮೋದಿ ಅವರ ಮುಖ ನೋಡಿ ನಮಗೆ ಮತ ಹಾಕಿದ್ದಾರೆಯೇ ಹೊರತು, ನಮ್ಮ ವೈಯಕ್ತಿಕ ಯೋಗ್ಯತೆಯಿಂದಲ್ಲ. ನಮ್ಮ ಯೋಗ್ಯತೆಯನ್ನು ಒಂದು ಕಡೆ ಬದಿಗಿಟ್ಟು ಯೋಚಿಸಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ, ಅಡ್ಡ ಮತದಾನದ ಆಳ-ಅಗಲವನ್ನು ಪರಿಶೀಲಿಸಲು ಬಿಜೆಪಿ ಪ್ರತ್ಯೇಕ ‘ಸತ್ಯಶೋಧನಾ ಸಮಿತಿ’ಯನ್ನು ರಚಿಸಿದೆ. ಈ ಸಮಿತಿಯಲ್ಲಿ ಸಿ.ಟಿ.ರವಿ, ಮಹೇಶ್ ಟೆಂಗಿನಕಾಯಿ ಹಾಗೂ ಮಾಜಿ ಸಚಿವ ಮಹೇಶ್ ಇದ್ದು, ಇವರು ಶಾಸಕರ ನಡವಳಿಕೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡಲಿದ್ದಾರೆ.



