ರಾಜ್ಯ ಸರ್ಕಾರವು ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತದ ಮೇಲೆ ಶೇ.50ರಷ್ಟು ವಿನಾಯಿತಿ ಘೋಷಿಸಿದೆ. ವಾಹನ ಸವಾರರು ಜೂನ್ 21ರಿಂದ ಜುಲೈ 10ರವರೆಗೆ ಈ ವಿನಾಯಿತಿಯ ಲಾಭವನ್ನು ಪಡೆದು ದಂಡ ಪಾವತಿಸಲು ಅವಕಾಶ ನೀಡಲಾಗಿದೆ.
2023ರಲ್ಲಿ ಒಟ್ಟು ಮೂರು ಬಾರಿ, 2025ರಲ್ಲಿ ಎರಡು ಬಾರಿ ಸಂಚಾರ ದಂಡ ಪಾವತಿಗೆ ರಿಯಾಯಿತಿ ನೀಡಲಾಗಿತ್ತು. ಇದೀಗ ಆರನೇ ಬಾರಿಗೆ ರಿಯಾಯಿತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ: ಮತ್ತೆ ಶೇ.50ರಷ್ಟು ರಿಯಾಯಿತಿ, ಸೆಪ್ಟೆಂಬರ್ 9ರವರೆಗೆ ಅವಕಾಶ
2026ರ ಮೇ ತಿಂಗಳಿಗೂ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತ ಮತ್ತು ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ದಂಡವನ್ನು ರಿಯಾಯಿತಿ ದರದಲ್ಲಿ ಪಾವತಿಸಬಹುದಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ದಂಡ ಸಂಗ್ರಹಣೆಯನ್ನು ಯಶಸ್ವಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಗರದ 12 ಸ್ಥಳಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಆರಂಭಿಸಿದ್ದಾರೆ. ಈ ಕೌಂಟರ್‌ಗಳಲ್ಲಿ ವಾಹನ ಸವಾರರು ದಂಡ ಪಾವತಿಸಬಹುದಾಗಿದೆ.
ರಾಜ್ಯದಲ್ಲೀಗ ಸುಮಾರು 5.05 ಕೋಟಿ ಸಂಚಾರ ನಿಯಮ ಉಲಂಘನೆ ಪ್ರಕರಣಗಳು ಬಾಕಿಯಿವೆ. ಅಂದರೆ ಒಟ್ಟಾಗಿ 2,727 ಕೋಟಿ ರೂ. ದಂಡ ಪಾವತಿಯಾಗಬೇಕಿದೆ. ಬೆಂಗಳೂರಿನಲ್ಲೇ 3.37 ಕೋಟಿ ಸಂಚಾರ ನಿಯಮ ಉಲಂಘನೆ ಪ್ರಕರಣಗಳು ಬಾಕಿಯಿದೆ. ಅಂದರೆ 1,843 ಕೋಟಿ ರೂ. ದಂಡ ಬಾಕಿಯಿದೆ.




