ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಜೋಡು ಕೆರೆಯನ್ನು ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ಹಿನ್ನೆಲೆಯಲ್ಲಿ, ಕೆರೆಯ ಮಧ್ಯದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ 50ಕ್ಕೂ ಹೆಚ್ಚು ಕುಟುಂಬಗಳನ್ನು ಪಟ್ಟಣದಿಂದ ಸುಮಾರು 4 ಕಿಲೋಮೀಟರ್ ದೂರದ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಸ್ಥಳಾಂತರಗೊಂಡ ಅಲೆಮಾರಿ ಕುಟುಂಬಗಳು ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿವೆ.

ವರ್ಷಗಳ ಹಿಂದೆ ಜೋಡು ಕೆರೆಗಳ ಮಧ್ಯಭಾಗದಲ್ಲಿ ವಾಸಿಸುತ್ತಿದ್ದ ಅಲೆಮಾರಿ ಸಮುದಾಯದ ಸಮಸ್ಯೆಗಳ ಕುರಿತು ಈದಿನ.ಕಾಮ್ ವರದಿ ಪ್ರಕಟಿಸಿತ್ತು. ಆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಇದೀಗ ಕೆರೆ ಅಭಿವೃದ್ಧಿ ಕಾಮಗಾರಿಗಾಗಿ ಅಲ್ಲಿದ್ದ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೆ ಅಲೆಮಾರಿಗಳ ಬದುಕು ಮಾತ್ರ ಬದಲಾಗಿಲ್ಲ.
ಸ್ಥಳಾಂತರಿತ ಪ್ರದೇಶವು ಕಲ್ಲು ಗಣಿಗಾರಿಕೆ ಪ್ರದೇಶ ಹಾಗೂ ಸ್ಮಶಾನದ ಸಮೀಪದಲ್ಲಿದ್ದು, ಅಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಬೀದಿ ದೀಪ ಸೇರಿದಂತೆ ಯಾವುದೇ ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಶೌಚಾಲಯದ ಕೊರತೆಯಿಂದ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಬಯಲನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ, ಅಲೆಮಾರಿ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಪೌಷ್ಟಿಕಾಂಶ ಸೇವೆಗಳು ಸಹ ದೂರವಾಗಿವೆ. ಸ್ಥಳಾಂತರಿತ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರವಿಲ್ಲದ ಕಾರಣ ಮಕ್ಕಳು ಎರಡು-ಮೂರು ಕಿಲೋಮೀಟರ್ ದೂರ ಸಂಚರಿಸಬೇಕಾಗಿದ್ದು, ಇದರಿಂದ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಜೀವನೋಪಾಯಕ್ಕಾಗಿ ಪಟ್ಟಣವನ್ನೇ ಅವಲಂಬಿಸಿದ್ದ ಕುಟುಂಬಗಳಿಗೆ ಸ್ಥಳಾಂತರದಿಂದ ಉದ್ಯೋಗದ ಮೇಲೂ ಪರಿಣಾಮ ಬಿದ್ದಿದೆ. ಪಟ್ಟಣದಿಂದ ದೂರ ವಾಸಿಸುವುದರಿಂದ ದೈನಂದಿನ ಕೆಲಸಗಳಿಗೆ ತೆರಳುವುದು ಕಷ್ಟಕರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಸರ್ಕಾರವು ಈ ಕುಟುಂಬಗಳಿಗೆ ಕೇವಲ ನಿವೇಶನವನ್ನು ಮಾತ್ರ ಒದಗಿಸಿದ್ದು, ಮನೆಗಳನ್ನು ನಿರ್ಮಿಸಿ ಕೊಟ್ಟಿಲ್ಲ. ಪರಿಣಾಮವಾಗಿ ಹಲವರು ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಶಾಶ್ವತ ಮನೆಗಳ ನಿರ್ಮಾಣದ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಜತೆ ಮಾತನಾಡಿದ ಅಲೆಮಾರಿ ಸಮುದಾಯದ ದುರ್ಗಮ್ಮ, “ಇಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆಯಿಲ್ಲ. ಕೆಲವೆಡೆ ಮಾತ್ರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನಮ್ಮ ಮಕ್ಕಳಿಗೆ ಅಂಗನವಾಡಿ ಸೌಲಭ್ಯವೂ ಇಲ್ಲ. ಸರ್ಕಾರ ಇಲ್ಲಿ ಅಂಗನವಾಡಿ ನಿರ್ಮಿಸಿದರೆ ಮಕ್ಕಳ ಶಿಕ್ಷಣ ಹಾಗೂ ಪೌಷ್ಟಿಕಾಂಶದ ಸಮಸ್ಯೆ ನಿವಾರಣೆಯಾಗಲಿದೆ” ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಥಣಿ ತಾಲೂಕು ಸಮಿತಿ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಮಾತನಾಡಿ, “ಅಲೆಮಾರಿಗಳ ಅಭಿವೃದ್ಧಿಯ ಬಗ್ಗೆ ಸರ್ಕಾರ ಮಾತನಾಡುತ್ತಿದೆಯಾದರೂ, ಅವರನ್ನು ಸ್ಥಳಾಂತರಿಸಿರುವ ಪ್ರದೇಶದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೇ ಇಲ್ಲ. ಮಹಿಳೆಯರು ಇನ್ನೂ ಬಯಲು ಶೌಚವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಮಕ್ಕಳಿಗೆ ಶಿಕ್ಷಣ ಸೌಲಭ್ಯವೂ ಸಮರ್ಪಕವಾಗಿ ದೊರೆಯುತ್ತಿಲ್ಲ. ತಕ್ಷಣ ಅಂಗನವಾಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಸ್ಥಳೀಯ ಶಾಸಕ ಲಕ್ಷ್ಮಣ ಸವದಿಯವರು ಹಾಗೂ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಅಥಣಿಯ ಸೌಂದರ್ಯ ಹೆಚ್ಚಿಸಲು ಜೋಡು ಕೆರೆ ಅಭಿವೃದ್ಧಿಪಡಿಸುವುದು ಸ್ವಾಗತಾರ್ಹ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳಾಂತರಗೊಂಡ ಅಲೆಮಾರಿ ಕುಟುಂಬಗಳ ಮೂಲಭೂತ ಹಕ್ಕುಗಳು ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಅವರಿಗೆ ವಸತಿ, ಕುಡಿಯುವ ನೀರು, ರಸ್ತೆ, ಶೌಚಾಲಯ, ಅಂಗನವಾಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಮತ್ತು ಮಾನವೀಯತೆ ಎರಡಕ್ಕೂ ಸಮಾನ ಆದ್ಯತೆ ನೀಡಬೇಕಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



