ಬೆಂಗಳೂರು ಕೇವಲ ಒಂದು ನಗರ ಮಾತ್ರವಲ್ಲ, ಕರ್ನಾಟಕದ ಆರ್ಥಿಕ ಜೀವನಾಡಿ ಕೂಡ. ರಾಜ್ಯದ ಜಿಡಿಪಿಯ ಸಿಂಹಪಾಲು ಬೆಂಗಳೂರಿನದ್ದೇ ಆಗಿದೆ. ಆದ್ದರಿಂದಲೇ, ಕರ್ನಾಟಕ ರಾಜಕಾರಣದಲ್ಲಿ ಅಲಿಖಿತ ನಿಯಮವೊಂದು ಚಾಲ್ತಿಯಲ್ಲಿದೆ; ‘ಯಾರೇ ಅಧಿಕಾರಕ್ಕೆ ಬಂದರೂ, ಯಾವ ಪಕ್ಷ ಗೆದ್ದರೂ, ಬೆಂಗಳೂರು ನಗರಾಭಿವೃದ್ಧಿ ಖಾತೆ ಮತ್ತು ಅದರ ಅಡಿಯಲ್ಲಿ ಬರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅತ್ಯಂತ ಶಕ್ತಿಶಾಲಿ ಮಂತ್ರಿಯ ಪಾಲಾಲುತ್ತದೆ.’ ಇದು ಹಿಂದಿಗೂ, ಇಂದಿಗೂ ವಾಸ್ತವ.
ಬೆಂಗಳೂರಿನ ನಗರ ಆಡಳಿತದ ಇತಿಹಾಸ ಸ್ವಾತಂತ್ರ್ಯೋತ್ತರ ಭಾರತದ 1945ರಿಂದ ಆರಂಭವಾಗುತ್ತದೆ. ಅಂದು ರಚನೆಯಾಗಿದ್ದ ‘ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್’ (ಸಿಐಟಿಬಿ) ಬೆಂಗಳೂರಿನ ಯೋಜಿತ ಅಭಿವೃದ್ಧಿಯ ಮೊದಲ ಪ್ರಯತ್ನವಾಗಿತ್ತು. ಇಂದಿನ ಜಯನಗರ, ರಾಜಾಜಿನಗರ, ಇಂದಿರಾನಗರ ಹಾಗೂ ಕೋರಮಂಗಲಗಳು ಸಿಐಟಿಬಿ ಪ್ರಯತ್ನದಿಂದ ಹುಟ್ಟಿಕೊಂಡವು.
ಸ್ವಾತಂತ್ರ್ಯಾ ನಂತರದಲ್ಲಿ, ಬೆಂಗಳೂರು ಬೆಳೆದಂತೆ ಹೊಸ ಪ್ರಾಧಿಕಾರದ ಅಗತ್ಯಗಳ ಬಗ್ಗೆ ಸರ್ಕಾರಗಳು ಯೋಜಿಸಿದವು. 1976ರ ಜನವರಿ 6ರಂದು ಸಿಐಟಿಬಿ ವಿಸರ್ಜನೆಯಾಗಿ, ಬಿಡಿಎ ಕಾಯ್ದೆಯಡಿ ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ (ಬಿಡಿಎ) ಅಸ್ತಿತ್ವಕ್ಕೆ ಬಂತು. ‘ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯ್ದೆ-1961’ರ ಅಡಿಯಲ್ಲಿ ಬೆಂಗಳೂರು ಮಹಾನಗರ ಪ್ರದೇಶಕ್ಕೆ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಸುವ ಪ್ರಮುಖ ನಿಯಂತ್ರಕ ಸಂಸ್ಥೆಯಾಗಿ ಬಿಡಿಎ ಬೆಳೆಯಿತು. ಬಿಡಿಎ ಅನುಮತಿ ಇಲ್ಲದೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಯಾರೂ ಅಭಿವೃದ್ಧಿ ಕಾರ್ಯ ನಡೆಸಲಾಗದು ಎಂಬ ನಿಯಮವೂ ರೂಪುಗೊಂಡಿತು.
ಮುಂದೆ, ಇದೇ ಬಿಡಿಎ – ಹಣ ಮತ್ತು ಅಧಿಕಾರದ ಕಾರಣಕ್ಕಾಗಿ ರಾಜಕೀಯ ಮಹತ್ವವನ್ನೂ ಪಡೆಯಿತು. ಕೃಷಿ ಭೂಮಿಯನ್ನು ನಗದು ಹಣವನ್ನಾಗಿ ಬದಲಾಯಿಸುವ, ಟೆಂಡರ್‌ಗಳ ಮೂಲಕ ರಾಜಕೀಯ ನಿಧಿ ಸಂಗ್ರಹಿಸುವ ಮತ್ತು ರಾಜಕೀಯ ಶಕ್ತಿಯನ್ನು ಕೇಂದ್ರೀಕರಿಸುವ ಕೇಂದ್ರವಾಗಿ ಮಾರ್ಪಟ್ಟಿತು. ಬಿಡಿಎ ಅಧಿಕಾರ ಎಷ್ಟಿದೆ ಎಂದರೆ; ಬೆಂಗಳೂರಿನ ಯಾವ ಜಮೀನು ಯಾರಿಗೆ ಹೋಗಬೇಕು, ಯಾವ ಬಡಾವಣೆ ಅಭಿವೃದ್ಧಿಯಾಗಬೇಕು, ಯಾವ ಭೂಮಿ ವಶಪಡಿಸಿಕೊಳ್ಳಬೇಕು, ಯಾವ ಭೂಮಿ ಡಿನೋಟಿಫೈ ಮಾಡಬೇಕು ಎಂಬುದೆಲ್ಲವೂ ಬಿಡಿಎ ಮತ್ತು ಅದರ ಹಿಡಿತ ಹೊಂದಿರುವ ಮಂತ್ರಿಯ ಕೈಯಲ್ಲಿದೆ.
1995ರ ನಂತರ ಬೆಂಗಳೂರು ತಂತ್ರಜ್ಞಾನಕ್ಕೆ ತೆರೆದುಕೊಂಡಂತೆಯಲ್ಲ ನಗರದ ಭೂಮಿಯ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ. ಬೆಲೆ ಕೇಳಿದರೇ ಬೆವರೂರುವ ಪರಿಸ್ಥಿತಿ ಇರುವ ನಗರದಲ್ಲಿ, ಭೂಮಿ ವಶ ಮಾಡಿಕೊಳ್ಳುವ, ಅಭಿವೃದ್ಧಿ ಯೋಜನೆ ರೂಪಿಸುವ, ನಿವೇಶನ ಹಂಚುವ ಅಧಿಕಾರ ಎಷ್ಟು ಬೆಲೆಯದ್ದಿರಬೇಡ?
ಬಿಡಿಎ ರಾಜ್ಯದ ಅತಿ ದೊಡ್ಡ ಭೂ ಅಭಿವೃದ್ಧಿ ಸಂಸ್ಥೆ ಮಾತ್ರವಲ್ಲ, ಶ್ರೀಮಂತ ಸಂಸ್ಥೆಯೂ ಕೂಡ. ಅದರ ವಾರ್ಷಿಕ ಬಜೆಟ್ ಸಾವಿರಾರು ಕೋಟಿ ರೂಪಾಯಿ. ಕಾರ್ನರ್ ನಿವೇಶನ ಹರಾಜಿನ ಮೂಲಕ ಒಂದೇ ವರ್ಷದಲ್ಲಿ 1,422 ಕೋಟಿ ರೂಪಾಯಿ ಸಂಗ್ರಹಿಸಿದ ಉದಾಹರಣೆಯೂ ಬಿಡಿಎಗಿದೆ. ಆದ್ದರಿಂದಲೇ, ಈ ಹಣಕಾಸಿನ ದೈತ್ಯ ಶಕ್ತಿಯೇ ‘ಬಿಡಿಎ’ಯನ್ನು ರಾಜಕೀಯ ಕಾಮಧೇನುವಾಗಿ ಮಾರ್ಪಡಿಸಿದೆ.
ಆದರೆ, ಬೆಂಗಳೂರನ್ನು ಕಾಡುತ್ತಿರುವ ಟ್ರಾಫಿಕ್ ಜಾಮ್, ಕಲುಷಿತ ನೀರು, ಕಣ್ಮರೆಯಾದ ಕೆರೆಗಳು, ಭೂ ಮಾಫಿಯಾಗೂ ಇದೇ ಬಿಡಿಎ ಆಡಳಿತ ವೈಫಲ್ಯವೇ ಕಾರಣ.
ಡಿನೋಟಿಫಿಕೇಷನ್ – ಅಧಿಕಾರ ದುರ್ಬಳಕೆಯ ಮಾರ್ಗ
ಬಿಡಿಎಯನ್ನು ರಾಜಕೀಯ ದುರ್ಬಳಕೆಗೆ ದೂಡುವ ಬಹುಮುಖ್ಯ ಮಾರ್ಗ ‘ಡಿನೋಟಿಫಿಕೇಷನ್’. ಬೆಂಗಳೂರಿನಲ್ಲಿ ನೋಟಿಫಿಕೇಷನ್ ಮತ್ತು ಡಿನೋಟಿಫಿಕೇಷನ್ – ರಾಜಕೀಯ ಚದುರಂಗದ ದಾಳಗಳು. ಸರ್ಕಾರ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ವಶಪಡಿಸಿಕೊಳ್ಳಲು ಅಧಿಸೂಚನೆ (ನೋಟಿಫಿಕೇಷನ್) ಹೊರಡಿಸುತ್ತದೆ. ನಂತರ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಆ ಅಧಿಸೂಚನೆ ವಾಪಸ್ (ಡಿನೋಟಿಫಿಕೇಷನ್) ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗಳ ಬೆನ್ನಲೇ ಆ ಜಮೀನಿನ ಬೆಲೆ ಕೋಟ್ಯಂತರ ರೂಪಾಯಿ ಜಿಗಿಯುತ್ತದೆ.
ಅಂತಹದೊಂದು ಬಹುದೊಡ್ಡ ಪ್ರಕರಣವಾಗಿ ಇಂದಿಗೂ ಜನಮಾನಸದಲ್ಲಿ ಇರುವುದು ಅರ್ಕಾವತಿ ಲೇಔಟ್ ಡಿನೋಟಿಫಿಕೇಷನ್ ಪ್ರಕರಣ. ಈ ಲೇಔಟ್‌ನ 541 ಎಕರೆ ಡಿನೋಟಿಫಿಕೇಶನ್ ಹಗರಣ ಹಲವು ಸರ್ಕಾರಗಳ ಮೇಲೆ ಕೆಸರು ಎರಚಿತು. ಈ ಪ್ರಕರಣ ಮೊದಲು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಆರಂಭವಾಗಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮತ್ತಷ್ಟು ಸಂಕೀರ್ಣವಾಯಿತು ಎಂಬ ಆರೋಪಗಳು ಎದ್ದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನೇತಾರರ ಹೆಸರುಗಳು ಈ ಪ್ರಕರಣದಲ್ಲಿ ತಳುಕುಹಾಕಿಕೊಂಡಿವೆ. ಆ ಸಮಯದಲ್ಲಿ, ಶಾಸಕರು ಮತ್ತು ಸಚಿವರ ಮನೆ ಎದುರು ಲೇಔಟ್‌ನ ಜನರು ಧರಣಿ ನಡೆಸಿದ್ದರು. ಸದನದಲ್ಲಿ ಕೋಲಾಹಲವೂ ಉಂಟಾಗಿತ್ತು. ಆದರೂ, ಈ ಪ್ರಕರಣದ ತನಿಖೆ ಮಾತ್ರ ಇನ್ನೂ ತೆವಳುತ್ತಲೇ ಇದೆ.
ಇನ್ನು, ಬಿಡಿಎ ಅಧಿಕಾರ ಮತ್ತು ರಾಜಕಾರಣದ ಬಗ್ಗೆ ಮಾತನಾಡುವಾಗ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಟ್ಟುಬಿಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರಾಭಿವೃದ್ಧಿ ಮತ್ತು ಬಿಡಿಎ ಯಡಿಯೂರಪ್ಪ ಬತ್ತಳಿಕೆಯಲ್ಲಿಯೇ ಇದ್ದವು. ಅವರು ಬೆಂಗಳೂರಿನ ಪ್ರಮುಖ ಲೇಔಟ್‌ಗಳಲ್ಲಿ ಭೂಮಿಯನ್ನು ತಮ್ಮ ಕುಟುಂಬ ಮತ್ತು ಆಪ್ತರಿಗೆ ಹಂಚಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಸ್ವತಃ ಯಡಿಯೂರಪ್ಪ ಅವರೇ ವಿಧಾನಸಭೆಯಲ್ಲಿ ಮಾತನಾಡುತ್ತಾ, “ಯಾವ ದಾಖಲೆಯೂ ಇಲ್ಲದ ಬಿಡಿಎ ನಿವೇಶನಗಳಿವೆ. ಅಧಿಕಾರಿಗಳು ಹಣ ಕೊಟ್ಟರೆ ಮಾತ್ರ ತೋರಿಸುತ್ತಾರೆ. ಶಾಸಕರಿಗೂ, ನನಗೂ ತೋರಿಸುವುದಿಲ್ಲ” ಎಂದು ಹೇಳುವು ಮೂಲಕ, ತಮ್ಮದೇ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದರು.
ಬೃಹತ್ ಮೂಲಸೌಕರ್ಯ ಕಾಮಗಾರಿಗಳು ಮತ್ತು ಟೆಂಡರ್‌ಗಳು
ಬೆಂಗಳೂರಿನಲ್ಲಿ ನಡೆಯುವ ರಸ್ತೆ ವೈಟ್‌ಟಾಪಿಂಗ್, ಫ್ಲೈಓವರ್‌ಗಳ ನಿರ್ಮಾಣ, ಅಂಡರ್‌ಪಾಸ್‌ಗಳು ಹಾಗೂ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಬಜೆಟ್ ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳು. ಈ ಕಾಮಗಾರಿಗಳ ಟೆಂಡರ್‌ಗಳನ್ನು ತಮಗೆ ಬೇಕಾದ ಗುತ್ತಿಗೆದಾರರಿಗೆ ನೀಡುವುದು ಮತ್ತು ಅದರಲ್ಲಿ ನಿಗದಿತ ಶೇಕಡಾವಾರು ಕಮಿಷನ್ ಪಡೆಯುವುದು ಒಂದು ಬಹಿರಂಗ ಸತ್ಯ. ರಾಜಕೀಯ ಪಕ್ಷಗಳ ಚುನಾವಣಾ ನಿಧಿಗೆ ಬೆಂಗಳೂರಿನ ಗುತ್ತಿಗೆದಾರರೇ ಪ್ರಮುಖ ಮೂಲವೂ ಆಗಿದ್ದಾರೆ.
ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್
ಜೊತೆಗೆ, ಬಿಡಿಎ ಬಡಾವಣೆಗಳಲ್ಲಿ ಪ್ರಮುಖ ವಾಣಿಜ್ಯ ಉದ್ದೇಶಗಳಿಗೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ನಾಗರಿಕ ಸೌಲಭ್ಯ (Civic Amenity – CA) ನಿವೇಶನಗಳ ಹಂಚಿಕೆಯಲ್ಲಿ ಭಾರಿ ರಾಜಕೀಯ ಪ್ರಭಾವ ಇರುತ್ತದೆ. ಅತಿ ಕಡಿಮೆ ದರದಲ್ಲಿ ಸಿಗುವ ಈ ಸೈಟ್‌ಗಳನ್ನು ರಾಜಕಾರಣಿಗಳು ತಮ್ಮ ಆಪ್ತರಿಗೆ ಮಾರಿಕೊಳ್ಳುತ್ತಾರೆ. ಹಣದ ಜೊತೆಗೆ ಪ್ರಭಾವವನ್ನೂ ಬೆಳೆಸಿಕೊಳ್ಳುತ್ತಾರೆ.
ಬಿಡಿಎ ವ್ಯಾಪ್ತಿ ಮತ್ತು ಹಣ
ಮತ್ತೊಂದು ವಿಚಾರವೆಂದರೆ, ಬಿಡಿಎ ಕೇವಲ ಒಂದು ಸಂಸ್ಥೆ ಮಾತ್ರವಲ್ಲ. ಅದರ ಅಡಿ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ ಹಾಗೂ ನಮ್ಮ ಮೆಟ್ರೋ ಮೊದಲಾದ ದೈತ್ಯ ಸಂಸ್ಥೆಗಳ ನಿಯಂತ್ರಣವೂ ಇದೆ. ‘ಒಂದೇ ಖಾತೆ ನೂರಾರು ಯೋಜನೆ, ಕೋಟ್ಯಂತರ ಹಣ’ – ಇದು ಬಿಡಿಎಗಿರುವ ಅಲಿಖಿತ ಉಪಶೀರ್ಷಿಕೆ. ಬಿಡಿಎ ಅಡಿಯಲ್ಲಿ ಮೇಲಿನ ಎಲ್ಲ ಸಂಸ್ಥೆಗಳ ಹಣ, ಯೋಜನೆ ಮತ್ತು ಹಣಕಾಸಿನ ಮೇಲ್ವಿಚಾರಣೆ ನಡೆಸುತ್ತದೆ. ಇಂತಹ ಸರ್ವಾಂತರ್ಯಾಮಿ ಅಧಿಕಾರವನ್ನು ಪ್ರಭಾವಿ ರಾಜಕಾರಣಿಗಳು ಬಿಡುವರೇ?
ಡಿ.ಕೆ. ಶಿವಕುಮಾರ್ ಆಕಾಂಕ್ಷೆ – ಕೃಷ್ಣ ಬೈರೇಗೌಡರ ಬೇಡಿಕೆ
ಬಿಜೆಪಿ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯೇ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ತಮ್ಮ ಬತ್ತಳಿಕೆಯಲ್ಲಿ ಉಳಿಸಿಕೊಳ್ಳುವುದು ವಾಡಿಕೆಯಂತೆ ನಡೆಯುತ್ತದೆ. ಅಂತೆಯೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಖಾತೆಗಾಗಿ ಕಿತ್ತಾಟವೇ ನಡೆಯುತ್ತದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಪೋರ್ಟ್‌ಫೋಲಿಯಾ ಹಂಚಿಕೆ ಬಗ್ಗೆ ತೀವ್ರ ಲಾಬಿ ನಡೆದಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ದಕ್ಕಿತು. ಇದು ಕೇವಲ ಆಕಸ್ಮಿಕವಲ್ಲ. ರಾಜ್ಯ ರಾಜಕಾರಣದಲ್ಲಿ ಬಿಡಿಎ ಮೇಲ್ವಿಚಾರಣೆ ಯಾರ ಕೈಯಲ್ಲಿ ಇರಬೇಕು ಎಂಬುದರ ನಿರ್ಧಾರ ಅಧಿಕಾರ ರಾಜಕಾರಣ ಭಾಗವಾಗಿದ್ದದ್ದು.
ಈಗ, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಮತ್ತು ಅದರ ಅಡಿಯ ಬಿಡಿಎ ಮತ್ತು ಬಿಎಂಆರ್‌ಡಿಎಲ್‌ಅನ್ನು ತಮ್ಮ ವಶದಲ್ಲೇ ಉಳಿಸಿಕೊಳ್ಳುವ ಇರಾದೆ ಇತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್, ‘ಯಾವುದೇ ಕಾರಣಕ್ಕೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಾವು ಇಟ್ಟುಕೊಳ್ಳುವಂತಿಲ್ಲ’ ಎಂದು ಡಿ.ಕೆ ಶಿವಕುಮಾರ್‌ಗೆ ತಾಕೀತು ಮಾಡಿದೆ. ಆದ್ದರಿಂದ, ಈ ಖಾತೆಯನ್ನು ಸಚಿವ ಕೃಷ್ಣ ಬೈರೇಗೌಡರಿಗೆ ನೀಡಲಾಗಿದೆ. ಇದರ ಹಿಂದೆ, ಬೆಂಗಳೂರು ವ್ಯಾಪ್ತಿಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ, ಉತ್ತಮ ರೀತಿಯಲ್ಲಿ ಕೆಲಸ ಮಾಡುವ, ಕೆಲಸಗಳೊಂದಿಗೆ ಜನರನ್ನು ಸೆಳೆದು ಸರ್ಕಾರಕ್ಕೆ ಖ್ಯಾತಿ ತರುವ ಉದ್ದೇಶ ಮತ್ತು ಬಿಡಿಎಯನ್ನು ಈಗಲಾದರೂ ಸ್ವಚ್ಛಗೊಳಿಸಬೇಕೆಂಬ ಕಾಂಗ್ರೆಸ್ ಉನ್ನತ ನಾಯತ್ವದ್ದು.
ಆದರೆ, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ನೀಡಿದ ಡಿ.ಕೆ ಶಿವಕುಮಾರ್, ಬಿಡಿಎ ಮತ್ತು ಬಿಎಂಆರ್‌ಡಿಎಲ್‌ಅನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಪರಿಣಾಮ, ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿಯೂ ಸಂಪುಟ ಬದಲಾವಣೆ ವೇಳೆ ಉತ್ತಮ ಖಾತೆ ಸಿಗದಿರುವುದು, ‘ಇದು ತಮಗೆ ಸಿಕ್ಕ ಬಡ್ತಿಯೋ ಅಥವಾ ಹಿಂಬಡ್ತಿಯೋ’ ಎಂಬ ಗೊಂದಲ ಕೃಷ್ಣ ಬೈರೇಗೌಡರಲ್ಲಿದೆ.
ಅಸಲಿಗೆ, ಬೆಂಗಳೂರು ನಗರಾಭಿವೃದ್ಧಿ ಎಂದರೆ – ಬಿಡಿಎ. ಬಿಡಿಎ ಎಂದರೆ ಬೆಂಗಳೂರು ನಗರಾಭಿವೃದ್ಧಿ ಎಂಬುದು ಜನಜನಿತವಾದ ವಿಚಾರ. ಹೀಗಿದ್ದೂ, ಬಿಡಿಎ ಇಲ್ಲದೆ, ಬೆಂಗಳೂರನ್ನು ಅಭಿವೃದ್ಧಿ ಮಾಡುವುದಾದರೂ ಹೇಗೆ? ಸದ್ಯಕ್ಕೆ, ಬೆಂಗಳೂರು ನಗರಾಭಿವೃದ್ಧಿ ಮೂಲ ಖಾತೆಯಿಂದ ಬಿಡಿಎಯನ್ನು ಹೊರಗಿಟ್ಟು, ಇಡೀ ಖಾತೆಯನ್ನೇ ಹಲ್ಲಿಲ್ಲದ ಹಾವನ್ನಾಗಿಸಿರುವ ಡಿ.ಕೆ ಶಿವಕುಮಾರ್ ವಿರುದ್ಧ ಕೃಷ್ಣ ಬೈರೇಗೌಡರ ಅಸಮಾಧಾನ ದೆಹಲಿಯಲ್ಲಿ ಹೊಗೆಯಾಡುತ್ತಿದೆ.
ಬಿಡಿಎಯನ್ನು ತಮ್ಮ ಖಾತೆಯಿಂದ ಹೊರಗಿಟ್ಟಿರುವುದರ ವಿರುದ್ಧ ಕೃಷ್ಣ ಬೈರೇಗೌಡರು ದೆಹಲಿ ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಅಡಿಯಲ್ಲಿಯೇ ಬಿಡಿಎ ಮತ್ತು ಬಿಎಂಆರ್‌ಡಿಎಲ್‌ಅನ್ನು ಮರಳಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕೃಷ್ಣ ಬೈರೇಗೌಡರ ಖಾತೆ ವಿಚಾರ ಏನಾಗಲಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ. ಆದರೆ, ಬಿಡಿಎ ಎಲ್ಲಿಯವರೆಗೆ ಹಣದ ಕಾಮಧೇನು ಆಗಿ ಉಳಿದಿರುತ್ತದೆಯೋ, ಅಲ್ಲಿಯವರೆಗೆ ಬೆಂಗಳೂರು ಕನಸಿನ ನಗರವಾಗಿ ಅಭಿವೃದ್ಧಿ ಹೊಂದಲಾರದು. ಬಿಡಿಎ – ನಿಜ ಅರ್ಥದಲ್ಲಿ ನಗರವನ್ನು ಅಭಿವೃದ್ಧಿ ಮಾಡುವ ಸಂಸ್ಥೆಯಾಗಿ ಉಳಿಯಬೇಕು ಎಂದರೆ, ರಾಜಕೀಯ ಇಚ್ಛಾಶಕ್ತಿ ಮಾತ್ರ ಸಾಲದು, ತ್ಯಾಗದ ಮನೋಭಾವವೂ ಬೇಕು.




