ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3 ರೂ. ಏರಿಕೆ ಮಾಡಿದ ಬೆನ್ನಲ್ಲೇ, ಅದರ ನೇರ ಆಘಾತ ಕರ್ನಾಟಕದ ಸಾರಿಗೆ ವಲಯದ ಮೇಲೆ ಬಿದ್ದಿದೆ. ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟವು ರಾಜ್ಯಾದ್ಯಂತ ಸಂಚರಿಸುವ ಎಲ್ಲ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು 20% ಹೆಚಚಿಸುವುದಾಗಿ ಘೋಷಿಸಿದೆ. ಪ್ರಯಾಣಿಕರ ಜೇಬಿಗೆ ಮತ್ತೊಂದು ರೀತಿಯಲ್ಲಿ ಕತ್ತರಿ ಬಿದ್ದಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರಿಗೆ ಉದ್ಯಮವನ್ನು ಉಳಿಸಿಕೊಳ್ಳಲು ದರ ಏರಿಕೆ ಅನಿವಾರ್ಯವೆಂದು ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಹೇಳಿಕೊಂಡಿದ್ದಾರೆ.
“ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ, ಕಳೆದ ಕೆಲವು ತಿಂಗಳುಗಳಿಂದ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ 40% ಕುಸಿದಿದೆ. ಈಗಾಗಲೇ ಉದ್ಯಮವು ಆದಾಯವಿಲ್ಲದೆ ನಷ್ಟದಲ್ಲಿದೆ. ಈಗ, ಇಂಧನ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಸಂಘ ಹೇಳಿದೆ.
“ಕೇವಲ ಡೀಸೆಲ್ ಮಾತ್ರವಲ್ಲದೆ, ಬಸ್ ಬಿಡಿಭಾಗಗಳು, ಟೈರ್‌ಗಳು ಹಾಗೂ ಇನ್ಶೂರೆನ್ಸ್ ಪ್ರೀಮಿಯಂ ದರಗಳೂ ಸಹ ಗಣನೀಯವಾಗಿ ಹೆಚ್ಚಿರುವುದು ಪ್ರಯಾಣ ದರ ಏರಿಕೆಗೆ ಮತ್ತೊಂದು ಕಾರಣವಾಗಿದೆ” ಎಂದು ಸಂಘ ವಾದಿಸಿದೆ.
ಈ ದರ ಏರಿಕೆಯು ಪ್ರಮುಖವಾಗಿ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸ್ಲೀಪರ್ ಮತ್ತು ಐಷಾರಾಮಿ ಬಸ್‌ಗಳಲ್ಲಿ ತಕ್ಷಣದಿಂದಲೇ ಅನ್ವಯವಾಗಲಿದೆ. ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮತ್ತು ಮೈಸೂರಿಗೆ ಸಂಚರಿಸುವ ಬಸ್‌ಗಳ ದರದಲ್ಲಿ ಕನಿಷ್ಠ 100 ರೂ.ನಿಂದ 300 ರೂ. ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ವಾರಾಂತ್ಯ ಮತ್ತು ಮುಂಬರುವ ಹಬ್ಬದ ದಿನಗಳಲ್ಲಿ ಈ ದರ ಮತ್ತಷ್ಟು ದುಬಾರಿಯಾಗುವ ಆತಂಕವೂ ಪ್ರಯಾಣಿಕರಲ್ಲಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಖಾಸಗಿ ಬಸ್‌ಗಳ ಈ ಏಕಪಕ್ಷೀಯ ದರ ಏರಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ಸಂಪರ್ಕ ಕಡಿಮೆ ಇರುವುದರಿಂದ, ಅಲ್ಲಿನ ಜನರು ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದರ ಹೆಚ್ಚಿಸಿರುವುದು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯಾಗಿದೆ.
ಈ ಮಧ್ಯೆ, ಸಾರಿಗೆ ಇಲಾಖೆಯು ಖಾಸಗಿ ಬಸ್ ಮಾಲೀಕರು ನಿಯಮಾವಳಿಗಳನ್ನು ಮೀರಿ ಸಾರ್ವಜನಿಕರಿಂದ ಅತಿಯಾದ ದರ ವಸೂಲಿ ಮಾಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಆರ್‌ಟಿಒ ಅಧಿಕಾರಿಗಳ ಮೂಲಕ ನಿಗಾ ಇಡಲಾಗುವುದು ಎಂದು ಎಚ್ಚರಿಕೆ ನೀಡಿದೆ.



