ಉತ್ತರ ಕನ್ನಡ: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ನೀಡಿರುವ ಮುನ್ಸೂಚನೆಯಂತೆ, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮೇ 17ರಿಂದ 18ರವರೆಗೆ ಭಾರಿ ಗಾಳಿ ಹಾಗೂ ಮಿಂಚು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರುವ ಸಾಧ್ಯತೆ ಇರುವುದರಿಂದ ಮೀನುಗಾರರು ಈ ದಿನಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ, ನೀರಿನ ಪ್ರದೇಶಗಳು ಮತ್ತು ಸಮುದ್ರಕ್ಕೆ ಇಳಿಯುವುದನ್ನು ಮಾಡಬಾರದು ಎಂದು ತಿಳಿಸಲಾಗಿದೆ. ಮಳೆಯ ಜೊತೆಗೆ 40ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಅಪಾಯಕಾರಿ ಮರಗಳ ಸಮೀಪವಿರುವ ಮನೆಗಳಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಜೋಯಿಡಾ | ಹಾವು ಕಡಿದು ಗೋವಾ ಕಾಂಗ್ರೆಸ್ ಉಪಚುನಾವಣಾ ಅಭ್ಯರ್ಥಿ ಡಾ. ಕೇತನ್ ಭಾಟಿಕರ್ ದುರ್ಮರಣ
ಜೊತೆಗೆ, ಮರಗಳ ಕೆಳಗೆ ಆಶ್ರಯ ಪಡೆಯದಂತೆ ಎಚ್ಚರಿಸಲಾಗಿದೆ. ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ತೆರಳದಂತೆ ಪಾಲಕರು ವಿಶೇಷ ಗಮನ ಹರಿಸಬೇಕು ಎಂದು ತಿಳಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ 24×7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ಸಂಖ್ಯೆ 08382-229857 ಅಥವಾ ಮೊಬೈಲ್ ಸಂಖ್ಯೆ 9483511015 ಅನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




