ರಾಜ್ಯದಲ್ಲಿ HIV ಸೋಂಕು ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ (KSAPS) ಮನವಿ ಮೇರೆಗೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಚ್ಐವಿ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ಒಳಗೊಂಡ ಸಮಗ್ರ ಆರೋಗ್ಯ ಶಿಬಿರಗಳನ್ನು (Integrated Health Camp – IHC) ನಡೆಸಲುವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಹಾಗೂ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿವೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಪ್ರಕಟಿಸಿರುವ ‘ಸಂಕಲಕ್– ಸ್ಟೇಟಸ್ ಆಫ್ ನ್ಯಾಷನಲ್ ಏಡ್ಸ್ ಅಂಡ್ ಎಸ್ಟಿಡಿ ರೆಸ್ಪಾನ್ಸ್ 2024’ವರದಿ ಪ್ರಕಾರ, ದೇಶದಲ್ಲಿ HIV ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 2.60 ಲಕ್ಷ ಮಂದಿ HIV ಸೋಂಕಿನೊಂದಿಗೆ ಬದುಕುತ್ತಿದ್ದು, ಅವರಲ್ಲಿ 2.05 ಲಕ್ಷಮಂದಿ ಮಾತ್ರ ಆಂಟಿರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 54 ಸಾವಿರ ಮಂದಿ ತಮ್ಮಲ್ಲಿ ಸೋಂಕು ಇರುವುದೇ ತಿಳಿಯದೆ ಬದುಕುತ್ತಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಕೆಎಸ್ಎಪಿಎಸ್ ಅಂಕಿ-ಅಂಶಗಳ ಪ್ರಕಾರ, 18ರಿಂದ 35 ವರ್ಷದ ಯುವಜನರಲ್ಲೇ ಸೋಂಕು ವೇಗವಾಗಿ ಹರಡುತ್ತಿದೆ.2023-24ರಲ್ಲಿ ಈ ವಯೋಮಾನದ ಸೋಂಕಿತರ ಸಂಖ್ಯೆ 44,500 ಇದ್ದರೆ, 2025-26ರಲ್ಲಿ ಅದು 66,600ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರದಿಯಂತೆ, 18ರಿಂದ 25 ವರ್ಷದೊಳಗಿನ 7,000ಕ್ಕೂ ಹೆಚ್ಚು ಯುವಕರಿಗೆ ಎಚ್ಐವಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮತ್ತು ತಪಾಸಣೆ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಕೆಎಸ್ಎಪಿಎಸ್ ವಿಟಿಯು ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದು, ರಾಜ್ಯದ ಎಲ್ಲ ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಚ್ಐವಿ ಪರೀಕ್ಷೆ ಮತ್ತು ಕೌನ್ಸೆಲಿಂಗ್ ಶಿಬಿರಗಳನ್ನು ಆಯೋಜಿಸಲು ಸಹಕಾರ ಕೋರಿದೆ. ಅಲ್ಲದೆ, ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಕೂಡ ಎಲ್ಲ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಚ್ಐವಿ ಕುರಿತು ಜಾಗೃತಿ ಮೂಡಿಸುವಂತೆ ಈಗಾಗಲೇ ರಾಜ್ಯಗಳಿಗೆ ಸೂಚನೆ ನೀಡಿವೆ.
ಇದನ್ನೂ ಓದಿ: 70 ತಾಸು ʼಜೀತʼ ಸೂತ್ರ; ಫ್ರಾನ್ಸ್ನಲ್ಲಿ ಇನ್ಫೋಸಿಸ್ಗೆ ₹1.9 ಕೋಟಿ ದಂಡ!
ಕೆಎಸ್ಎಪಿಎಸ್ ಪ್ರಕಾರ, ‘ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ (MAS)’ ಅಭಿಯಾನದಡಿ ’95-95-99′ ಗುರಿ ಸಾಧಿಸಲು ಒತ್ತು ನೀಡಲಾಗಿದೆ. ಇದರ ಮೊದಲ ಗುರಿಯಾದ ‘First-95’ ಅಂದರೆ, ಶೇ.95ರಷ್ಟು ಜನರಿಗೆ ತಮ್ಮ ಎಚ್ಐವಿ ಸ್ಥಿತಿಯ ಅರಿವು ಮೂಡಿಸುವುದು. ಪ್ರಸ್ತುತ ರಾಜ್ಯದಲ್ಲಿ ಸುಮಾರು 54 ಸಾವಿರ ಸೋಂಕಿತರು ಇನ್ನೂ ಪತ್ತೆಯಾಗದೇ ಇರುವುದರಿಂದ, ಎಚ್ಐವಿ ಪರೀಕ್ಷೆಯ ವ್ಯಾಪ್ತಿಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಲಾಗಿದೆ. ಎರಡನೇ ಗುರಿಯಾಗಿ ಸೋಂಕಿತರನ್ನು ತಕ್ಷಣ ಚಿಕಿತ್ಸೆಗೆ ಸಂಪರ್ಕಿಸುವುದು ಹಾಗೂ ಮೂರನೇ ಗುರಿಯಾಗಿ ಶೇ.99ರಷ್ಟು ವೈರಲ್ ನಿಯಂತ್ರಣ ಸಾಧಿಸುವುದು ನಿಗದಿಯಾಗಿದೆ.
ಇದರ ಜೊತೆಗೆ, ‘Know Your HIV Status’ ಹೆಸರಿನಕ್ಯೂಆರ್ ಕೋಡ್ ಆಧಾರಿತ ‘HIV Self-Risk Assessment Tool’ ಅಭಿವೃದ್ಧಿಪಡಿಸಲಾಗಿದೆ. ಈ ಡಿಜಿಟಲ್ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿ ಗೌಪ್ಯವಾಗಿಯೇ ಉಳಿಸಿಕೊಂಡು, ತಮ್ಮ ವರ್ತನೆ ಹಾಗೂ ಅಪಾಯದ ಅಂಶಗಳ ಆಧಾರದ ಮೇಲೆ ಎಚ್ಐವಿ ಸೋಂಕಿನ ಸಾಧ್ಯತೆಯನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಹೆಚ್ಚುವುದರ ಜೊತೆಗೆ, ಅಗತ್ಯವಿದ್ದರೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಒಳಗಾಗುವಂತೆ ಪ್ರೋತ್ಸಾಹ ಸಿಗಲಿದೆ ಎಂದು ಕೆಎಸ್ಎಪಿಎಸ್ ತಿಳಿಸಿದೆ.




