ಕಲ್ಯಾಣ ಕರ್ನಾಟಕದಲ್ಲಿ ಎಲ್ ನಿನೊ ಪರಿಣಾಮ ಭೀಕರ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವತಿಯಿಂದ ಮಂಗಳವಾರ ನಗರದ ಹುಮನಾಬಾದ್ ರಿಂಗ್‌ರೋಡ್‌ನಲ್ಲಿ ರಸ್ತೆ ತಡೆ ಚಳವಳಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ, ಸಮರ್ಪಕ ಮಳೆಯ ಕೊರತೆಯಿಂದ ಮುಂಗಾರು ಬಿತ್ತನೆ ಕುಂಠಿತವಾಗಿದ್ದು, ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ತೀವ್ರ ಹಾನಿಗೊಳಗಾಗಿವೆ ಎಂದು ತಿಳಿಸಲಾಗಿದೆ.
ರೈತರು ಸಾಲ ಮಾಡಿ ಬೀಜ ಮತ್ತು ರಸಗೊಬ್ಬರ ಖರೀದಿಸಿ ಬಿತ್ತನೆ ನಡೆಸಿದರೂ ಮಳೆ ಕೈಕೊಟ್ಟ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ರೈತರ ಆತ್ಮಹತ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ಮಹಾರಾಷ್ಟ್ರದ ಉಜನಿ ಅಣೆಕಟ್ಟಿನಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಬೇಕು, ಹಿಂಗಾರು ಬಿತ್ತನೆಗೆ ಉಚಿತ ಬೀಜ ಮತ್ತು ರಸಗೊಬ್ಬರ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ ಅಥವಾ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಲಾಗಿದೆ.
ಇದೇ ವೇಳೆ ಬರಪೀಡಿತ ಪ್ರದೇಶ ಘೋಷಿಸಿ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡುವುದು, ಒಣಗಿದ ಕಬ್ಬಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ಬಾಕಿ ಬೆಳೆ ವಿಮೆ ಹಣ ಹಾಗೂ ಬೆಳೆ ಕಟಾವು ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವುದು, ರೈತರ ಆತ್ಮಹತ್ಯೆಗೀಡಾದ ಕುಟುಂಬಗಳಿಗೆ ಪರಿಹಾರ, ಜಾನುವಾರುಗಳಿಗೆ ಗೋಶಾಲೆ ತೆರೆಯುವುದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವುದು ಸೇರಿದಂತೆ 15 ಬೇಡಿಕೆಗಳನ್ನು ಮನವಿಯಲ್ಲಿ ಸರ್ಕಾರದ ಮುಂದಿಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ರೈತ ಸಂಘ ಆಗ್ರಹ
ಸಂಘಟನೆಯು ಮುಂಬರುವ ದಿನಗಳಲ್ಲಿ ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆಗಳನ್ನು ನಡೆಸುವುದಾಗಿ ಎಚ್ಚರಿಸಿದೆ.





