ಒಟ್ಟಾರೆ 74 ಲಕ್ಷದಷ್ಟು ಮತದಾರರಿಗೆ ತೊಂದರೆ ಮುಂದುವರೆಸುತ್ತಿರುವುದಕ್ಕೆ ಮತ್ತು ಕರ್ನಾಟಕದ ಕೋಟ್ಯಾಂತರ ಜನರಿಗೆ ಈ ಪ್ರಕ್ರಿಯೆಯಲ್ಲಿ ನೀಡಿದ ತೊಂದರೆಗೆ ಚುನಾವಣಾ ಆಯೋಗ ಮತ್ತು ಬಿಜೆಪಿ ಪಕ್ಷಗಳು ಕ್ಷಮೆ ಕೇಳಬೇಕೆಂದು ಜಾಗೃತ ಕರ್ನಾಟಕ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಾಗೃತ ಕರ್ನಾಟಕ, “ಮೊಟ್ಟಮೊದಲನೆಯದಾಗಿ – ASDDO ಅಡಿಯಲ್ಲಿ 1 ಕೋಟಿಗೂ ಹೆಚ್ಚು ಮತದಾರರ ಹೆಸರುಗಳು ಡಿಲಿಟ್ ಆಗುತ್ತಿವೆ ಎಂದು ಕಂಡುಬಂದರೂ, ಅರ್ಹ ಮತದಾರರ ಡಿಲಿಷನ್ ಅಷ್ಟೊಂದು ಪ್ರಮಾಣದಲ್ಲಿ ಇಲ್ಲ. ಈ 1 ಕೋಟಿಗೂ ಹೆಚ್ಚು ASDDO deletionನಲ್ಲಿ ಸುಮಾರು 15 ಲಕ್ಷದಷ್ಟು ನೈಜ – ಅರ್ಹ ಮತದಾರರನ್ನು ತೆಗೆದುಹಾಕಲಾಗುತ್ತಿದೆ. ಇದನ್ನು ರಾಜ್ಯಾದ್ಯಂತ ನಾವು ನಡೆಸಿರುವ ಸರ್ವೆಯ ಆಧಾರದಲ್ಲೇ ಹೇಳುತ್ತಿದ್ದೇವೆ. 15 ಲಕ್ಷ ಅರ್ಹ ಮತದಾರರನ್ನು ತೆಗೆದುಹಾಕುವಂತಹ ಒಂದು ಪ್ರಕ್ರಿಯೆಯೂ ನಮಗೆ ಆಘಾತವನ್ನೇ ತರಬೇಕು. ಆದರೆ, ಅರ್ಹ ಮತದಾರರಲ್ಲೇ ಒಂದು ಕೋಟಿ ಮತದಾರರನ್ನು ತೆಗೆದುಹಾಕಲು ಹೊರಟಿದ್ದ ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗದ ಹುನ್ನಾರಕ್ಕೆ ಮೊದಲ ಪೆಟ್ಟು ಬಿದ್ದಿದೆ ಎಂಬುದು ಸಕಾರಾತ್ಮಕ ಸಂಗತಿ ಎಂದು ಹೇಳಿದೆ.
ಇದನ್ನೂ ಓದಿ: ವಿಜಯಪುರ | ಎದ್ದೇಳು ಕರ್ನಾಟಕ ಸಭೆ, ಮತದಾನ ಜಾಗೃತಿಗೆ ಕರೆ
“ಕರ್ನಾಟಕದ ಚುನಾವಣಾ ಆಯೋಗದ ಮೇಲೆ ಬಿದ್ದ ಸತತ ಒತ್ತಡ ಹಾಗೂ ತಳಮಟ್ಟದಲ್ಲಿ ನಡೆದ ನಿರಂತರ ಕೆಲಸದ ಪರಿಣಾಮವಾಗಿ ಇದು ಸಾಧ್ಯವಾಗಿದೆ. ಇನ್ನೂ ಎಷ್ಟೋ ಕಡೆ ಸರಿಯಾದ ರೀತಿಯಲ್ಲಿ ಕೆಲಸ ನಡೆದಿಲ್ಲ ಎಂಬುದೂ ನಿಜ. ಆದರೆ, ಅದಕ್ಕಿಂತ ಹೆಚ್ಚಾಗಿ ಎಸ್‌ಐಆರ್ ಎಂಬ ಪ್ರಕ್ರಿಯೆಯೇ ಜನರನ್ನು ಹೊರಗೆ ಹಾಕಲು ಬೇಕಾದ ರೀತಿಯಲ್ಲಿ ರಚಿತವಾಗಿರುವುದರಿಂದ ಇಷ್ಟು ಜನ ಅರ್ಹ ಮತದಾರರ ಹೆಸರು ಡಿಲಿಟ್ ಆಗುತ್ತಿದೆ” ಎಂದು ತಿಳಿಸಿದೆ.
“ಇದರೊಂದಿಗೆ, 44 ಲಕ್ಷದಷ್ಟು ಮತದಾರರು ಕರಡು ಮತದಾರರ ಪಟ್ಟಿಯಲ್ಲಿದ್ದರೂ, 2002ರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿಲ್ಲ ಎಂಬ ಕಾರಣಕ್ಕೆ ಮತ್ತು ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂಬ ಕಾರಣಕ್ಕೆ ನೋಟೀಸು ಪಡೆಯಲಿದ್ದಾರೆ. ಅವರೆಲ್ಲರೂ ದಾಖಲೆ ಹಿಡಿದುಕೊಂಡು, ನೋಟಿಸಿಗೆ, ನಿಗದಿತ ದಿನಗಳ ಒಳಗೆ ತಾವು ಭಾರತೀಯ ನಾಗರಿಕರೆಂದು ಸಾಬೀತು ಪಡಿಸಬೇಕಿದೆ” ಎಂದು ಹೇಳಿದೆ.
“ಇದಲ್ಲದೇ ಸುಮಾರು 15 ಲಕ್ಷದಷ್ಟು ಹೊಸ ಮತದಾರರು, ಈ ಹಿಂದಿಗಿಂತ ಕಠಿಣ ಪ್ರಕ್ರಿಯೆಯಲ್ಲಿ ಹೊಸದಾಗಿ ಫಾರಂ ನಂ.6 ಸಲ್ಲಿಸಿ ನೋಂದಾಯಿತರಾಗಬೇಕಿದೆ. ಎಸ್‌ಐಆರ್ ಎಂಬುದು ಪರಿಷ್ಕರಣೆಯೇ ಆಗಿದ್ದಲ್ಲಿ, ಈ 15 ಲಕ್ಷದಷ್ಟು ಮತದಾರರನ್ನೂ ಸೇರಿಸಿಕೊಳ್ಳಬೇಕಿತ್ತು. ಆದರೆ, ಹೆಸರಿಗೆ ಪರಿಷ್ಕರಣೆ ಎಂದು ಹೇಳಿದರೂ, ಜನರನ್ನು ಹೊರಹಾಕುವುದೇ ಪ್ರಧಾನ ಗುರಿಯಾಗಿರುವುದರಿಂದ ಹೊಸ ಮತದಾರರ ನೋಂದಣಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ” ಎಂದು ತಿಳಿಸಿದೆ.
74 ಲಕ್ಷದಷ್ಟು ಮತದಾರರಿಗೆ ತೊಂದರೆ ಮುಂದುವರೆಸುತ್ತಿರುವುದಕ್ಕೆ ಚುನಾವಣಾ ಆಯೋಗ ಮತ್ತು ಬಿಜೆಪಿ ಪಕ್ಷಗಳು ಕ್ಷಮೆ ಕೇಳಬೇಕೆಂದು ಜಾಗೃತ ಕರ್ನಾಟಕ ಆಗ್ರಹಿಸಿದೆ. “ಏಕೆಂದರೆ, ಇದ್ಯಾವುದೂ ಮತದಾರರ ತಪ್ಪಿನಿಂದ ಆಗಿದ್ದಲ್ಲ. ಈ ಎಸ್‌ಐಆರ್ ಪ್ರಕ್ರಿಯೆಯುದ್ದಕ್ಕೂ ಆಯೋಗದ ಹೊಣೆಗೇಡಿತನ ಎದ್ದು ಕಾಣುತ್ತಿತ್ತು. ಎಸ್‌ಐಆರ್ ಎಂಬ ಪ್ರಕ್ರಿಯೆಯೇ exclusionary ಎಂಬುದರ ಆಚೆಗೆ, ಅಗತ್ಯವಿರುವಷ್ಟು ಸಮಯ ಕೊಡದೇ ಇರುವುದು, ಅವಸರವಸರ ಮಾಡಿದ್ದು, ಬಿಎಲ್‌ಓಗಳಿಗೆ ಸರಿಯಾದ ತರಬೇತಿ ಕೊಡದೇ ಇದ್ದದ್ದು, ಜನರಿಗೆ ವಿಸ್ತೃತವಾಗಿ ನೀಡಬೇಕಾದಷ್ಟು ಮಾಹಿತಿ/ತಿಳುವಳಿಕೆ ನೀಡದೇ ಇದ್ದದ್ದು, 2002ರ ಮ್ಯಾಪಿಂಗ್ ಆಗದೇ ಇದ್ದರೂ ಅರ್ಜಿ ಕೊಟ್ಟುಬಿಡಿ ಎಂದು ಹೇಳಿದ್ದು, ಬೆಂಗಳೂರು ನಗರದಲ್ಲೇ 2002ರ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್‌ಸೈಟಿನಲ್ಲೇ ಹಾಕದೇ ಇದ್ದದ್ದು, ಕೆಲವು ಕಡೆಗಳಲ್ಲಿ ಎನ್ಯುಮರೇಷನ್ ಫಾರಂ ತಲುಪಿಸದೇ ಇದ್ದದ್ದು ಇಂತಹ ಹಲವಾರು ತಪ್ಪುಗಳು ನಡೆದಿವೆ. ಅವಸರ ಮಾಡಿ, ಬಿಎಲ್‌ಓಗಳ ಮೇಲೆ ಒತ್ತಡ ಹಾಕಿದ್ದರಿಂದಲೇ ಬೆಂಗಳೂರಿನಂತಹ ನಗರದಲ್ಲಿ ಶಿಫ್ಟೆಡ್ ಅಲ್ಲದವರನ್ನೂ ಶಿಫ್ಟೆಡ್ ಎಂದು ಹಾಕಿರುವುದು ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಆಗುವುದು ಬಹಳ ಸಾಮಾನ್ಯವಾಗಿದ್ದು, ಅಂಥವರಿಗೆ ಸೂಕ್ತ ನಿರ್ದೇಶನವನ್ನು ಪರಿಣಾಮಕಾರಿಯಾಗಿ ಆಯೋಗ ನೀಡಲಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ಕಲಬುರಗಿ | ಅ.5ರಿಂದ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ
“ಜಾಗೃತ ಕರ್ನಾಟಕ ಮತ್ತು ಇನ್ನೂ ಹಲವಾರು ಸಂಘಟನೆಗಳು, ಗುಂಪುಗಳು, ವ್ಯಕ್ತಿಗಳು ಇವೆಲ್ಲವನ್ನೂ ಸರಿಪಡಿಸಲು ಸತತ ಪ್ರಯತ್ನ ಮಾಡಿದ್ದೇವೆ. ಪದೇ ಪದೇ ಆಯೋಗಕ್ಕೆ ದೂರು ಕೊಟ್ಟಿದ್ದೇವೆ; ಬದಲಾವಣೆಗಳಿಗೆ ಕಾರಣವಾಗಿದ್ದೇವೆ. ಬದಲಾವಣೆ ಮಾಡಿಕೊಳ್ಳಲು ಸಿದ್ಧವಿರದೇ ಇದ್ದಾಗ ಪ್ರತಿಭಟಿಸಿ ಬಂಧನಕ್ಕೂ ಗುರಿಯಾಗಿದ್ದೇವೆ” ಎಂದು ತಿಳಿಸಿದೆ.
“ಆದರೆ, ರಾಜ್ಯದ ಎಲ್ಲಾ ಜಿಲ್ಲೆಗಳ (ಸುಮಾರು 195 ವಿಧಾನಸಭಾ ಕ್ಷೇತ್ರಗಳ) ಬಿಎಲ್‌ಎಗಳ ತರಬೇತಿಯಲ್ಲಿ ಜಾಗೃತ ಕರ್ನಾಟಕವನ್ನು ಪ್ರಧಾನವಾಗಿ ತೊಡಗಿಸಿ ಪ್ರಜಾಪ್ರಭುತ್ವ ಉಳಿಸುವ ಈ ಮಹತ್ವದ ಕೆಲಸದ ಭಾಗವಾಗಲು ಅವಕಾಶ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ನಾವು ಅಭಿನಂದಿಸಬಯಸುತ್ತೇವೆ. ಒಂದಷ್ಟು ಕಡೆ ಸರಿಯಾಗಿ ಕೆಲಸ ಆಗದೇ ಇರುವುದು ನಿಜವಾದರೂ, ಬಹುತೇಕ ಕಡೆ ತಳಮಟ್ಟದಲ್ಲಿ ಬಹಳ ಸಕ್ರಿಯವಾಗಿ ಸಾವಿರಾರು ಜನ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅವರೆಲ್ಲರ ಶ್ರಮದಿಂದಲೂ – ಬಿಜೆಪಿಯ ಅಪೇಕ್ಷೆಗಿಂತ ಕಡಿಮೆ ಪ್ರಮಾಣದ ಡಿಲಿಷನ್ ಆಗಿದೆ” ಎಂದಿದೆ.
“ಈಗ 74 ಲಕ್ಷದಷ್ಟು ಮತದಾರರಿಗೆ ಹೆಚ್ಚು ಸಮಸ್ಯೆಯಾಗದಂತೆ ವೋಟರ್ ಲಿಸ್ಟ್ ಒಳಗೆ ಸೇರಿಕೊಳ್ಳಲು ಆಯೋಗವು ಪ್ರಕ್ರಿಯೆಯನ್ನು ರೂಪಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಅದಕ್ಕಾಗಿ ಈ ಪ್ರಕ್ರಿಯೆಯನ್ನು 6 ತಿಂಗಳ ಕಾಲ ವಿಸ್ತರಿಸಬೇಕು. ಈಗಲೂ ಸಹ ಪ್ರತಿ ಮನೆಗೆ ಬಿಎಲ್ಒಗಳು ಅಥವಾ ಇತರ ಅಧಿಕಾರಿಗಳು ಹೋಗಬೇಕು. ನಿಮ್ಮ ಹೆಸರು ಡ್ರಾಪ್ಟ್ ಪಟ್ಟಿಯಲ್ಲಿ ಇದೆಯೇ? ಇಲ್ಲದಿದ್ದರೆ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸುವುದು ನಿಮ್ಮದೇ ಜವಾಬ್ದಾರಿಯಾಗಿರುತ್ತದೆ. ಡಿಲೀಟ್ ಮಾಡುವಾಗ – ನೋಟೀಸ್ ಕೊಡುವಾಗ ತೋರಿದ ಹುಮ್ಮಸ್ಸಿನ ಎರಡು ಪಟ್ಟು ವಾಪಸ್ ಸೇರಿಸುವಾಗಲೂ ತೋರಿಸಬೇಕು ಅಲ್ಲವೇ” ಎಂದು ಪ್ರಶ್ನಿಸಿದೆ.
“ಜಾಗೃತ ಕರ್ನಾಟಕವು 180ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್ಎಗಳಿಗೆ ತರಬೇತಿ ನೀಡಿದ್ದಲ್ಲದೇ, ಮತದಾರರ ಮಾರ್ಗದರ್ಶಿ ಮತ್ತು ಹತ್ತಾರು ವಿಡಿಯೋಗಳ ಮೂಲಕ ಎನ್ಯುಮರೇಷನ್ ಫಾರ್ಮ್ ತುಂಬುವುದು ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರಿಗೂ ನೀಡಿದೆವು. ಚುನಾವಣಾ ಆಯೋಗಕ್ಕೆ ಹಲವಾರು ಪತ್ರ ನೀಡಿದೆವು, ಸಮಯ ವಿಸ್ತರಿಸಲು ಆಗ್ರಹ ಮಾಡಿದೆವು. ಎಎಸ್‌ಡಿಓ ಪಟ್ಟಿಯಲ್ಲಿ ಹೆಸರಿದೆಯೇ ಇಲ್ಲವೇ ಎಂದು ಚೆಕ್ ಮಾಡಲು ಸುಲಭ ಸಾಫ್ಟ್ವೇರ್ ರಚಿಸಿದೆವು. ಈಗ ಆಗಸ್ಟ್ 24ಕ್ಕೆ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಲಿದ್ದು ನಿಮ್ಮ ಹೆಸರು ಕರಡು ಪಟ್ಟಿಯಲ್ಲಿದೆಯೇ ಎಂದು ಸುಲಭವಾಗಿ ತಿಳಿದುಕೊಳ್ಳಲು ಮತ್ತೊಂದು ಸಾಫ್ಟ್ವೇರ್‌ಅನ್ನು ಆಗಸ್ಟ್ 27ರ ಹೊತ್ತಿಗೆ ಬಿಡುಗಡೆ ಮಾಡಲಿದ್ದೇವೆ.. ಪಟ್ಟಿಯಲ್ಲಿ ನಿಮ್ಮ ಹೆಸರಿರದಿದ್ದರೆ, ಅಂತಹವರಿಗೆ ದಾಖಲೆ ಸಹಾಯ ಮತ್ತು ಹೊಸದಾಗಿ ಅರ್ಜಿ ಹಾಕಲು ಸಹಾಯ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ ಜೊತೆಗೂಡಿ ಕೆಲಸ ಮಾಡುತ್ತೇವೆ. ಯಾವ ಪಕ್ಷದವರೇ ಆಗಿರಲಿ, ಎಲ್ಲರ ಮತದಾನದ ಹಕ್ಕು ಕಾಪಾಡುವುದು ನಮ್ಮ ಉದ್ದೇಶ. ಸಂವಿಧಾನ ಮತ್ತು ಪ್ರಜಾತಂತ್ರ ಉಳಿಸುವುದು ನಮ್ಮ ಧ್ಯೇಯವಾಗಿದೆ” ಎಂದು ಸಂಚಾಲಕ ಮುತ್ತುರಾಜು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆದಂ ಖಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




