ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಫ್ರಾನ್ಸ್‌ನ ಎವಿಯನ್-ಲೆ-ಬೆನ್‌ನಲ್ಲಿ ನಡೆದ ಭೇಟಿಯ ವೇಳೆ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರು ಯಾವುದೇ ಪ್ರಶ್ನೆ ಕೇಳದಂತೆ ಭಾರತ ಅಮೆರಿಕಕ್ಕೆ ಮನವಿ ಮಾಡಿತ್ತು ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೊ ಗೋರ್ ಬಹಿರಂಗಪಡಿಸಿದ್ದಾರೆ.
ಜೂನ್ 17ರಂದು ಜಿ7 ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಹಾಗೂ ಟ್ರಂಪ್ ಭೇಟಿಯಾಗಿದ್ದರು. ಭೇಟಿಗೂ ಮುನ್ನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಮೆರಿಕದ ಅಧಿಕಾರಿಗಳಿಗೆ ಈ ಮನವಿಯನ್ನು ಮಾಡಿತ್ತು. ಉಭಯ ನಾಯಕರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಬಹುದು, ಆದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂಬುದು ಭಾರತದ ನಿಲುವಾಗಿತ್ತು ಎಂದು ಗೋರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋರ್, ಈ ವಿಚಾರವನ್ನು ಟ್ರಂಪ್ ಅವರಿಗೆ ತಾವು ತಿಳಿಸಿದ್ದಾಗಿ ಹೇಳಿದರು. “ಭಾರತದವರು ಯಾವುದೇ ಪ್ರಶ್ನೆಗಳನ್ನು ಬಯಸುವುದಿಲ್ಲ” ಎಂದು ಟ್ರಂಪ್‌ಗೆ ತಿಳಿಸಿದಾಗ, ಅವರು ಒಪ್ಪಿಕೊಂಡಿದ್ದರು. ಆದರೆ ಮೋದಿ-ಟ್ರಂಪ್ ಸಭೆ ಆರಂಭವಾದ ಬಳಿಕ ಮಾಧ್ಯಮದವರು ಒಳಬಂದಾಗ, ಟ್ರಂಪ್ ಸ್ವತಃ “ಯಾವುದೇ ಪ್ರಶ್ನೆಗಳಿವೆಯೇ?” ಎಂದು ಕೇಳಿದರು. ಇದಾದ ಬಳಿಕ ಸುಮಾರು 45 ನಿಮಿಷಗಳ ಕಾಲ ಪ್ರಶ್ನೋತ್ತರ ಸಂವಾದ ನಡೆಯಿತು ಎಂದು ಗೋರ್ ವಿವರಿಸಿದ್ದಾರೆ.
ಈ ಬೆಳವಣಿಗೆ ಪ್ರಧಾನಿ ಮೋದಿ ಅವರು ಭಾರತವೂ ಸೇರಿದಂತೆ ವಿದೇಶ ಪ್ರವಾಸಗಳ ವೇಳೆ ಯಾವುದೇ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸದಿರುವ ವಿಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಬೆಳಕಿಗೆ ಬಂದಿದೆ.
ಮೇ 18ರಂದು ನಾರ್ವೆಯ ಓಸ್ಲೋದಲ್ಲಿ ಪ್ರಧಾನಿ ಮೋದಿ ಹಾಗೂ ನಾರ್ವೆ ಪ್ರಧಾನಿ ಜೊನಾಸ್ ಗಹ್ರ್ ಸ್ಟೋರ್ ಭೇಟಿಯ ಬಳಿಕವೂ ಇದೇ ರೀತಿಯ ಬೆಳವಣಿಗೆ ನಡೆದಿತ್ತು. ಇಬ್ಬರೂ ನಾಯಕರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಶ್ನೆಗಳಿಗೆ ಅವಕಾಶ ನೀಡುವಂತೆ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಮನವಿ ಮಾಡಿದ್ದರು. ಆದರೆ ಮೋದಿ ಪ್ರಶ್ನೆಗಳಿಗೆ ಉತ್ತರಿಸದೆ ಮುಖ ತಿರುಗಿಸಿ ನಿರ್ಗಮಿಸಿದ್ದರು.
ಇದಾದ ಬಳಿಕ ಲಿಂಗ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ ಭಾರತ 157ನೇ ಸ್ಥಾನದಲ್ಲಿದೆ ಎಂದು ಟೀಕಿಸಿದ್ದರು.
ಮೇ 16ರಂದು ನೆದರ್‌ಲ್ಯಾಂಡ್ಸ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಅಲ್ಲಿನ ಪ್ರಧಾನಿ ರಾಬ್ ಜೆಟ್ಟನ್ ಭೇಟಿಯ ಬಳಿಕವೂ ಇದೇ ವಿಚಾರವನ್ನು ಪತ್ರಕರ್ತರೊಬ್ಬರು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇಂತಹ ಭೇಟಿಗಳ ಬಳಿಕ ಎರಡೂ ದೇಶಗಳ ಪ್ರಧಾನಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದು ನೆದರ್‌ಲ್ಯಾಂಡ್ಸ್‌ನ ಸಂಪ್ರದಾಯವಾಗಿದ್ದು, ಭಾರತದಲ್ಲಿ ಏಕೆ ಹಾಗೆ ನಡೆಯುತ್ತಿಲ್ಲ ಎಂದು ಡಿ ವೋಕ್ಸ್‌ಕ್ರಾಂಟ್ ಪತ್ರಿಕೆಯ ಪತ್ರಕರ್ತ ಅಶ್ವಂತ್ ನಂದ್‌ರಾಮ್ ಪ್ರಶ್ನಿಸಿದ್ದರು.
ಜುಲೈ 11ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲೂ ಪ್ರಧಾನಿ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸದಿರುವ ಕುರಿತು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ರುದ್ರೇಂದ್ರ ಟಂಡನ್, ಪ್ರಧಾನಿ ಮೋದಿ ಅವರು ಭಾರತದ ಗ್ರಾಮೀಣ ಮತದಾರರೊಂದಿಗೆ ನೇರವಾಗಿ ಸಂವಹನ ನಡೆಸುವ “ಕಲೆಯನ್ನು ಪರಿಪೂರ್ಣಗೊಳಿಸಿದ್ದಾರೆ” ಎಂದು ಉತ್ತರಿಸಿದ್ದರು.
ಇದನ್ನೂ ಓದಿ: ಟ್ರಂಪ್‌ಗೆ ಭಯಪಡುವ ಮೋದಿ, ಅಂಬಾನಿ-ಅದಾನಿಯ ‘ರಿಮೋಟ್ ಕಂಟ್ರೋಲ್’ನಲ್ಲಿದ್ದಾರೆ: ರಾಹುಲ್ ಗಾಂಧಿ
ಈ ನಡುವೆ, ಜೂನ್ 17ರಂದು ಮೋದಿ-ಟ್ರಂಪ್ ಭೇಟಿಯ ವೇಳೆ ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ ವಾಣಿಜ್ಯ ಹಡಗಿನ ಮೇಲಿನ ದಾಳಿಯಲ್ಲಿ ಭಾರತೀಯ ನಾವಿಕರು ಮೃತಪಟ್ಟಿದ್ದ ವಿಚಾರವೂ ಚರ್ಚೆಗೆ ಬಂದಿತ್ತು. ಮೋದಿ ಅವರು ಸಂಘರ್ಷದ ಸಂದರ್ಭದಲ್ಲಿ ನಾಗರಿಕ ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ್ದರು. ಆದರೆ ಮಾಧ್ಯಮ ಸಂವಾದದಲ್ಲಿ ಟ್ರಂಪ್ ನಾವಿಕ ವೃತ್ತಿಯ ಅಪಾಯಗಳನ್ನು “ಕಠಿಣ ವೃತ್ತಿ” ಎಂದು ಬಣ್ಣಿಸಿ ಘಟನೆಗೆ ಹೆಚ್ಚಿನ ಮಹತ್ವ ನೀಡದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.
ಅದೇ ವೇಳೆ, ಭಾರತಕ್ಕೆ ಯಾವುದೇ ದೇಶದಿಂದ ದಾಳಿ ಎದುರಾದರೂ ಅಮೆರಿಕ ಬೆಂಬಲ ನೀಡಲಿದೆ ಎಂದು ಟ್ರಂಪ್ ಹೇಳಿದ್ದರು. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವೂ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಹಿ ಹಾಕುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದರು.




