ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU) ಮಾರ್ಚ್ 25 ರಿಂದ 27ರವರೆಗೆ ಆಯೋಜನೆಗೊಂಡಿದ್ದ ಆರ್‌ಎಸ್‌ಎಸ್ ಸಂಬಂಧಿತ ‘ಏಕಾತ್ಮ ಮಾನವ ದರ್ಶನ – ಭಾರತದ ವಿಶ್ವದೃಷ್ಟಿ’ ಕುರಿತ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ನಡೆಸುವುದು ಎಷ್ಟು ಸರಿ ಎಂದು ಹಲವು ಮಂದಿ ಪ್ರಶ್ನಿಸಿದ್ದರು. ಈ ನಡುವೆ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜಕೀಯ ಅಥವಾ ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂಬ ನಿಯಮಗಳ ನಡುವೆಯೂ RSS ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ವಿಶ್ವವಿದ್ಯಾಲಯದ ಉಪಕುಲಪತಿಗಳು ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮೈಸೂರಿನ ಮುಕ್ತ ವಿವಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ: ಮುಂದೂಡಲು ಸರ್ಕಾರ ನೋಟಿಸ್
“ವಿಶ್ವವಿದ್ಯಾಲಯದ ಸಭಾಂಗಣಗಳನ್ನು ನಿಗದಿತ ಶುಲ್ಕ ಪಾವತಿಸಿ ಯಾವುದೇ ಸಂಘಟನೆಗಳು ಕಾರ್ಯಕ್ರಮ ನಡೆಸಲು ಅವಕಾಶವಿದೆ” ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿಕೊಂಡಿದ್ದಾರೆ. ಹಾಗೆಯೇ, “ಆರೆಸ್ಸೆಸ್ ಒಂದು ಶಿಸ್ತುಬದ್ಧ ಸಂಘಟನೆಯಾಗಿದ್ದು, ಅದು ರಾಷ್ಟ್ರೀಯತೆಯ ವಿಚಾರಗಳನ್ನು ಪ್ರಚಾರ ಮಾಡುತ್ತದೆ. ಆದ್ದರಿಂದ ಅದಕ್ಕೆ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ” ಎಂಬ ನಿಲುವು ತಾಳಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಹಿಂದೆ ಬೇರೆ ಬೇರೆ ಸಂಘಟನೆಗಳಿಗೂ ಇಂತಹ ಅವಕಾಶ ನೀಡಲಾಗಿತ್ತು ಎಂದು ಸಮರ್ಥನೆಗಿಳಿದಿದ್ದಾರೆ.
ಸದ್ಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. “ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಂದು ನಿರ್ದಿಷ್ಟ ಸಿದ್ಧಾಂತದ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ” ಎಂದು ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಶ್ವವಿದ್ಯಾಲಯದ ಸ್ವಾಯತ್ತತೆ ಮತ್ತು ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಬರುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಹೇಳಿವೆ.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ರಾಯಚೂರು ವಿವಿ ಕುಲಪತಿ ಮುಖ್ಯ ಅತಿಥಿ!
ಇನ್ನು ಈ ವಿಚಾರದಲ್ಲಿ ಈಗಾಗಲೇ ವಿಧಾನ ಪರಿಷತ್‌ನಲ್ಲಿ ವಿಷಯ ಪ್ರಸ್ತಾಪವಾಗಿದೆ. ಉನ್ನತ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯಗಳು) ಸರ್ಕಾರದ ಉಪ ಕಾರ್ಯದರ್ಶಿ ಎನ್. ಕುಮಾರ್ ಅವರು ಮುಕ್ತ ವಿವಿ ಕುಲಪತಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.
“ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ವಿವಿಯ ಲೋಗೋ ಬಳಸಲಾಗಿದೆ ಹಾಗೂ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ವಿವಿಯೇ ಭರಿಸುತ್ತಿದೆ ಎಂದು ತಿಳಿದುಬಂದಿದೆ. ವಿವಿಯು ಆಂತರಿಕ ಸಂಪನ್ಮೂಲದ ಕೊರತೆ ಎದುರಿಸುತ್ತಿರುವಾಗ ಇಂತಹ ಖಾಸಗಿ ಕಾರ್ಯಕ್ರಮಗಳಿಗೆ ವಿವಿಯ ಹಣ ಬಳಕೆ ಸೂಕ್ತವಲ್ಲ. ಅಲ್ಲದೆ, ಘನತೆವೆತ್ತ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖಾ ಸಚಿವರನ್ನು ಆಹ್ವಾನಿಸದಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆ” ಎಂದು ನೋಟಿಸ್‌ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.




