2026’ಯುವಜನರಲ್ಲಿ ನೈತಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ, ಸೌಹಾರ್ದತೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಉದ್ದೇಶದಿಂದ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ (SYM) ಕರ್ನಾಟಕದ ಇಳಕಲ್ ಘಟಕದ ವತಿಯಿಂದ ನವೆಂಬರ್ 1ರಂದು ‘ಯುವ ಸಾಂಸ್ಕೃತಿಕ ಉತ್ಸವ–2026’ ಆಯೋಜಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಅಂಜುಮನ್-ಎ-ಇಸ್ಲಾಂ ಮೈದಾನದಲ್ಲಿ ಭಾನುವಾರ ಸಂಜೆ 6.30ಕ್ಕೆ ನಡೆಯಲಿರುವ ಈ ಉತ್ಸವದಲ್ಲಿ ದೇಶದ ಖ್ಯಾತ ಗಾಯಕ ಹಾಗೂ ಸಂಗೀತ ಕಲಾವಿದ ಡಾ. ಹೈದರ್ ಸೈಫ್ ಅವರು ವಿಶೇಷ ಆಕರ್ಷಣೆಯಾಗಲಿದ್ದಾರೆ.ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಅಲಿ ಖಾಝಿ ಅವರು ಗಣ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಇದರೊಂದಿಗೆ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷ ಡಾ. ನಸೀಮ್ ಅಹಮದ್, ಬಾಗಲಕೋಟೆಯ ಖಾರಿ ಸಮಿವುಲ್ಲಾ ಖಾದ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಸ್ಥಳೀಯ ಗಣ್ಯರು, ಯುವಜನರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯುವಜನತೆಯಲ್ಲಿ ಸಾಮಾಜಿಕ ಜವಾಬ್ದಾರಿ, ಉತ್ತಮ ವ್ಯಕ್ತಿತ್ವ, ಸೌಹಾರ್ದತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಉತ್ಸವದ ಪ್ರಮುಖ ಆಶಯವಾಗಿದೆ.ಸಾಂಸ್ಕೃತಿಕ ಮತ್ತು ರಚನಾತ್ಮಕ ಚಟುವಟಿಕೆಗಳ ಮೂಲಕ ಯುವಶಕ್ತಿಯನ್ನು ಸಕಾರಾತ್ಮಕ ಕಾರ್ಯಗಳತ್ತ ಮುನ್ನಡೆಸುವ ಉದ್ದೇಶವನ್ನು ಸಂಘಟನೆ ಹೊಂದಿದೆ.
ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಇಳಕಲ್ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಬುದ್ಧಿಜೀವಿಗಳು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮುರ್ತಝಾ ಕಾಕ್ಬಾಲ್, ಇಳಕಲ್ ಘಟಕದ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಹುಣಚಗಿ, ಕಾರ್ಯದರ್ಶಿ ಮುಝಮಿಲ್ ಹಕ್ಕಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.




