ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಠಿಣ ಕ್ರಮಗಳು, ನಿಯಮಿತ ಮೇಲ್ವಿಚಾರಣೆ ಮತ್ತು ದೂಷಿತ ಕಾರ್ಖಾನೆಗಳ ವಿರುದ್ಧ ನಿರ್ದೇಶಿತ ಕ್ರಮ ತುಂಬಾ ಅಗತ್ಯವಾಗಿದೆ. ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಿನಲ್ಲಿ ಕೊಪ್ಪಳ ತಾಲೂಕಿನ ಗ್ರಾಮಗಳು ನಿರ್ಜನವಾಗುವುದಲ್ಲದೆ, ಇಲ್ಲಿನ ಜನರು ತಮ್ಮ ಸ್ವಂತ ನೆಲದಲ್ಲೇ ನಿರಾಶ್ರಿತರಾಗುವುದು ಅನಿವಾರ್ಯವಾಗುತ್ತದೆ. ಕೊಪ್ಪಳದ ಈ ಧೂಳು ಸಮಸ್ಯೆ ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇದು ಅಸಮತೋಲಿತ ಅಭಿವೃದ್ಧಿ ಎಚ್ಚರಿಕೆಯ ಸಂಕೇತವಾಗಿದೆ.
ಕೊಪ್ಪಳ ಜಿಲ್ಲೆಯ ಹನ್ನೆರಡು ಗ್ರಾಮಗಳ ದೈತ್ಯ ಸಮಸ್ಯೆಯಾಗಿರುವ ಧೂಳು ಮತ್ತು ಮಾಲಿನ್ಯದ ಹಿಂದೆ ಭಯಾನಕ ಸತ್ಯಗಳು ಅಡಗಿ ಕುಳಿತಿವೆ. ತಾಲೂಕು ಕೇಂದ್ರಕ್ಕೆ ಹತ್ತಿರವಾಗಿರುವ ಹಿರೇಬಗನಾಳ, ಹಳವರ್ತಿ, ಕುಣಿಕೇರಿ, ಗಿಣಿಗೇರ, ಚಿಕ್ಕಬಾಗನಾಳ, ಬೂದಗುಂಪ, ಕಂಬಾಪುರ, ಗೋಳಸಂಗಿ ಸೇರಿದಂತೆ ಸುಮಾರು 12 ಗ್ರಾಮಗಳ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಬಲ್ಡೋಟಾ ಕಂಪೆನಿಯ 24 ದೊಡ್ಡ ಕೆಂಪು-ವರ್ಗದ (Red Category) ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 13 ಸ್ಪಾಂಜ್(ಬೀಡು ಕಬ್ಬಿಣ) ಕಬ್ಬಿಣದ ಘಟಕಗಳು ಅತ್ಯಂತ ಹೆಚ್ಚು ಹೊಗೆ ಹೊರಸೂಸುವ ಮತ್ತು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ. ಈ ಘಟಕಗಳು ನಿರಂತರವಾಗಿ ಕಪ್ಪು ಧೂಳು, ಬೂದಿ, ರಾಸಾಯನಿಕ ಕಣಗಳು ಮತ್ತು ವಿಷಕಾರಿ ಹೊಗೆ ಹೊರಸೂಸುತ್ತಿರುವುದರಿಂದ ಈ ಎಲ್ಲ ಅಂಶಗಳು ಗಾಳಿಯಲ್ಲಿ ಸೇರಿಕೊಳ್ಳುತ್ತಿದ್ದು, ಸುತ್ತಮುತ್ತಲ ಗ್ರಾಮಗಳು ದಿನ-ರಾತ್ರಿ ಧೂಳಿನ ಮೋಡದಲ್ಲಿ ಮುಳುಗಿವೆ.
ಕೈಗಾರಿಕೆಗಳಿಂದ ಹೊರಸೂಸುವ ವಿಷಕಾರಿ ಹೊರಸೂಸುವಿಕೆ ಮತ್ತು ತ್ಯಾಜ್ಯಗಳು ಕೊಪ್ಪಳ ಪಟ್ಟಣದಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಹಾಲವರ್ತಿ, ಕುಣಿಕೇರಿ, ಕುಣಿಕೇರಿ ತಾಂಡಾ, ಗಿಣಿಗೇರಾ, ಅಲ್ಲನಗರ, ಕಸನಕಂಡಿ, ಚಿಕ್ಕಬಗನಾಳ, ಲಚನಕೇರಿ, ಕಿಡಾಳ, ಬಸಾಪುರ, ಕನಕಪುರ ಮತ್ತು ಇತರ ಅನೇಕ ಹಳ್ಳಿಗಳ ಆರೋಗ್ಯ, ಜೀವನೋಪಾಯ, ಸಾಮಾಜಿಕ ಜೀವನ ಮತ್ತು ಪರಿಸರದ ಮೇಲೆ ತೀವ್ರ ಪರಿಣಾಮ ಬೀರಿವೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಇಂತಹ ಗ್ರಾಮಗಳ ಜನಜೀವನವನ್ನು ಬಲಿಕೊಡಲಾಗುತ್ತಿದೆ.
ಈ ಅತಿಯಾದ ಮಾಲಿನ್ಯದ ಪರಿಣಾಮವಾಗಿ ಸ್ಥಳೀಯ ಜನರ ಆರೋಗ್ಯ ತೀವ್ರವಾಗಿ ಕೆಡುತ್ತಿದೆ. ಸ್ಥಳೀಯರು ಉಸಿರಾಟದ ಸಮಸ್ಯೆ, ದೀರ್ಘಕಾಲದ ಅಸ್ತಮ, ಟಿ.ಬಿ. ಚರ್ಮರೋಗಗಳು, ಕಣ್ಣುಗಳ ತೊಂದರೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೃಷಿ ಭೂಮಿಯ ಮೇಲೆ ಕಪ್ಪು ಧೂಳು ಸೇರಿ ಬೆಳೆಗಳು ಹಾಳಾಗುತ್ತಿವೆ. ಇಳುವರಿ ತೀವ್ರವಾಗಿ ಕುಸಿದಿದ್ದು, ಉಳಿದ ಬೆಳೆಗಳಿಗೂ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ದನ-ಕರುಗಳು ಧೂಳು ಮತ್ತು ವಿಷಕಾರಿ ಆಹಾರದಿಂದ ರೋಗಪೀಡಿತವಾಗುತ್ತಿವೆ. ತಮ್ಮ ಮನೆಗಳಲ್ಲಿ ಕೂಡ ಧೂಳು ತುಂಬುವುದನ್ನು ತಡೆಯಲಾಗುತ್ತಿಲ್ಲ. ಊಟ-ತಿಂಡಿಯಲ್ಲಿಯೂ ಧೂಳು ಸೇರುತ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಕೆಲವು ಕಾರ್ಖಾನೆಗಳಿಗೆ ನೋಟಿಸ್ ನೀಡಿ, ಇತ್ತೀಚೆಗೆ ಎರಡು ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿದ್ದರೂ, ಸಮಸ್ಯೆಯ ಮೂಲಕ್ಕೆ ಇನ್ನೂ ಪರಿಹಾರ ಕಂಡುಬಂದಿಲ್ಲ. ಉದ್ಯಮೀಕರಣದ ಹೆಸರಿನಲ್ಲಿ ಈ ಗ್ರಾಮಗಳ ಜೀವನವನ್ನು ಬಲಿಕೊಡಲಾಗುತ್ತಿದೆ ಎಂಬ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆಂಪು-ವರ್ಗದ ಕೈಗಾರಿಕೆಗಳನ್ನು 60 ಅಥವಾ ಅದಕ್ಕಿಂತ ಹೆಚ್ಚಿನ ಮಾಲಿನ್ಯ ಸೂಚ್ಯಂಕ ಸ್ಕೋರ್‌ನೊಂದಿಗೆ ಹೆಚ್ಚು ಮಾಲಿನ್ಯಕಾರಕ ಘಟಕಗಳಾಗಿ ವರ್ಗೀಕರಿಸಿದೆ, ಇದಕ್ಕೆ ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳು ಬೇಕಾಗುತ್ತವೆ. ಆದಾಗ್ಯೂ, ವಿವಿಧ ಸರ್ಕಾರಿ ಇಲಾಖೆಗಳು ನಡೆಸಿದ ಬಹು ಕ್ಷೇತ್ರ ಭೇಟಿಗಳು, ಕಳೆದ ಮೂರು ದಶಕಗಳಲ್ಲಿ ಈ ಪ್ರದೇಶದಲ್ಲಿ ಸ್ಥಾಪಿಸಲಾದ ಹಲವಾರು ಕೈಗಾರಿಕೆಗಳು ನಿಯಮಗಳನ್ನು ಉಲ್ಲಂಘಿಸಿ ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತಿವೆ. ಆದರೆ ಇಲ್ಲಿಯ ಪಂಚಭೂತಗಳ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಹಿರೇಬಾಗನಾಳ ನಿವಾಸಿ ಮಹೇಶ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಾಂಪ್ರದಾಯಿಕವಾಗಿ ಬೆಳೆಯಲಾಗುವ ದ್ವಿದಳ ಧಾನ್ಯಗಳು, ತರಕಾರಿಗಳಿಂದ ಹಿಡಿದು ಮೆಕ್ಕೆಜೋಳ, ಹತ್ತಿ ಹಾಗೂ ಪಪ್ಪಾಯಿ ಬೆಳೆವರೆಗೆ ಯಾವುದೂ ಉತ್ತಮ ಇಳುವರಿಯನ್ನು ನೀಡಿಲ್ಲ. ಉತ್ತಮ ಬೆಲೆಯನ್ನೂ ಪಡೆದಿಲ್ಲ. ಧೂಳು ಕೃಷಿ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿದೆ. ನಾವು ಬೆಳೆಯುವುದು, ತಿನ್ನುವುದು ಇರಲಿ ಬೆಳೆಗಳ ಎಲೆಗಳು ಮತ್ತು ಉತ್ಪನ್ನಗಳ ಮೇಲೆ ಕಪ್ಪು ಮಸಿ ಕೂತಿರುವುದರಿಂದ ನಾವು ಅದನ್ನು ಕಟಾವು ಮಾಡಲೂ ಸಾಧ್ಯವಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ವರ್ಷ ಕಸನಕಂಡಿಯ ಶರಣಪ್ಪ ಎಂಬುವವರ ಪಪ್ಪಾಯ ಬೆಳೆ ಉತ್ತಮ ಇಳುವರಿ ಬಂದಿದ್ದರೂ, ಅವರ ಆರು ಎಕರೆ ಪಪ್ಪಾಯ ಬೆಳೆ ಸಂಪೂರ್ಣವಾಗಿ ಮಾರಾಟವಾಗದೆ ಹೋಯಿತು. ಏಕೆಂದರೆ ಹಣ್ಣುಗಳ ಮೇಲೆ ಕಪ್ಪು ಮಸಿ ಮೆತ್ತಿಕೊಂಡಿತ್ತು. ನಾನು ಕೂಡ ಮೆಕ್ಕೆ ಜೋಳ ಬೆಳೆದಿದ್ದೆ. ಒಂದು ಎಕರೆಗೆ 30 ಕ್ವಿಂಟಲ್ ಇಳುವರಿ ಬರಬೇಕಿತ್ತು, ಆದರೆ ಕೇವಲ 10 ಕ್ವಿಂಟಲ್ ಬೆಳೆ ಬಂತು. ಅದಕ್ಕೂ ಸರಿಯಾದ ಬೆಲೆ ಇಲ್ಲ, ಕೇಳೋರು ಇಲ್ಲ. ಜೋಳದ ತೆನೆಗಳನ್ನು ನೋಡಿದರೆ ತಿಪ್ಪೆ ಕಸ ಕಂಡಂಗೆ ಆಗುತ್ತೆ…… ಯಾರೂ ತೆಗೆದುಕೊಳ್ಳುವುದಿಲ್ಲ. ಇನ್ನೇನು ಬೆಳೆ ಬೆಳೆದು ತಿನ್ನಬೇಕು ನಾವು ಹೇಳಿ” ಎಂದು ಬೇಸರ ವ್ಯಕ್ತಪಡಿಸಿದರು.
“ಇಷ್ಟೊಂದು ಕಾರ್ಖಾನೆಗಳಿವೆ. ಆದರೆ, ಇಲ್ಲಿಯ ಜನಕ್ಕೆ ಉದ್ಯೋಗ ನೀಡಿಲ್ಲ, ಅಂಥ ಕಾರ್ಖಾನೆಗಳಲ್ಲಿ ನಮ್ಮ ಜನ ಯಾರೂ ಕೂಡ ಕೆಲಸ ಮಾಡುವುದಕ್ಕೆ ಆಗುವುದೂ ಇಲ್ಲ. ಎಲ್ಲರೂ ಉತ್ತರ ಭಾರತದಿಂದ ಬಂದವರು…. ದುಡಿದು ದೊಡ್ಡೊಕ್ಕಲಾಗುತ್ತಿದ್ದಾರೆ. ನಮ್ಮ ಜಮೀನುಗಳಲ್ಲಿ ಉತ್ತಮ ಬೆಳೆ ಬರದೆ, ನಮ್ಮ ಆರೋಗ್ಯ ಸ್ಥಿತಿಯೂ ಸರಿ ಇಲ್ಲದೆ, ಆರ್ಥಿಕ ಮೂಲಗಳಿಲ್ಲದೆ…… ಬದುಕಿಗಾಗಿ, ಈ ಕಾರ್ಖಾನೆಗಳನ್ನೆಲ್ಲ ತೊಲಗಿಸಬೇಕೆಂದು ಹಗಲು ರಾತ್ರಿ ಹೋರಾಟದಲ್ಲಿಯೇ ಮುಳುಗಿದ್ದೇವೆ” ಎಂದರು.
“ಸಣ ಸಣ್ಣ ವಯಸ್ಸಿಗೆ ಸುಮ್ಮನೆ ಬಹುತೇಕರು ಸಾವನ್ನಪ್ಪುತ್ತಿದ್ದಾರೆ. ಕಾರಣಗಳೇ ತಿಳಿಯುತ್ತಿಲ್ಲ. ನನ್ನ ಮಗ ಮೂರು ವರ್ಷದವನು. ಅವನಿಗೆ ಸ್ಟ್ರೋಕ್ ಆಗಿದೆ ಮೇಡಂ….. ಇತ್ತೀಚೆಗೆ ಒಬ್ಬರು ಸ್ಟ್ರೋಕ್‌ನಿಂದ ಮೃತಪಟ್ಟರು…. ಒಬ್ಬರು ಇಬ್ಬರು ಅಂತ ಅಲ್ಲ ರೀ… ಊರಿನ ಜನ ಎಲ್ಲ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮುಂದೆ ಕ್ಯೂ ನಿಂತಿರ್ತರೆ. ಹಣ ಖರ್ಚು ಮಾಡಿ ಸಾಕಾಗಿ, ಈಗ ಹಣವೂ ಇಲ್ಲದೆ ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ಮನೆ ಔಷಧಿಗಳನ್ನು ಅವಲಂಬಿಸಿದ್ದಾರೆ. ಇಲ್ಲದಿದ್ದರೆ ಊರಿನ ನಾಟಿ ವೈದ್ಯರ ಬಳಿ ಹೋಗುತ್ತಾರೆ…. ಗುಣ ಆಗುವುದಾದರೆ ಆಸ್ಪತ್ರೆಗಳಿಗೆ ಹೋಗಿ ಖರ್ಚು ಮಾಡಬಹುದು. ಆದ್ರೆ ಇಲ್ಲಿಯ ಜನ ನಿರಂತರವಾಗಿ ಖಾಯಿಲೆಗಳಿಂದ ನರಳುತ್ತಿದ್ದಾರೆ. ಇದೊಂದು ಬೇರೆ ರೀತಿ ಲೋಕ ಆಗಿ ಮಾರ್ಪಟ್ಟಿದೆ…. ನಮಗೆ ನರಕ ಅಂದೆ ಇದೇ ಏನೋ… ಎನ್ನುವಷ್ಟರ ಮಟ್ಟಿಗೆ ಜೀವನ ಸಾಕಾಗಿದೆ” ಎಂದು ಆಕ್ರಂದನದ ಮಾತುಗಳನ್ನಾಡಿದರು.
ಕೊಪ್ಪಳದ ಕೆ ಬಿ ಗೋನಾಳ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೊಪ್ಪಳ ಪಟ್ಟಣಕ್ಕೆ ಕಾರ್ಖಾನೆಗಳೇ ಬೇಡವೆಂದು 207 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಕಳೆದ ಅಕ್ಟೋಬರ್‌ನಲ್ಲಿ ಆರಂಭವಾದ ಹೋರಾಟ ಈಗಲೂ ನಡೆಯುತ್ತಿದೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲೀ ಇತ್ತ ತಿರುಗಿ ನೋಡಿಲ್ಲ. ಹೀಗೇ ಆದರೆ ಕೊಪ್ಪಳ ಮತ್ತು ಭಾಗ್ಯ ನಗರ ಸಂಪೂರ್ಣವಾಗಿ ಸ್ಮಶಾನವಾಗುತ್ತದೆ. ಇಲ್ಲಿ ಜನವಸತಿ ಪ್ರದೇಶಗಳು ನಿರ್ನಾಮವಾಗುತ್ತವೆ” ಎಂದು ಹೇಳಿದರು.
“ಮೂರು ದಶಕಗಳ ಹಿಂದೆಯೇ 4,600 ಕೋಟಿ ಹೂಡಿಕೆಯಲ್ಲಿ ಕಾರ್ಖಾನೆಗಳನ್ನು ಆರಂಭಿಸಿದರು. ಅದರಿಂದ ಶೇ.60ರಷ್ಟು ಕೊಪ್ಪಳ ತಾಲೂಕು ಈಗಾಗಲೇ ಮುಳುಗಿ ಹೋಗಿದೆ. ಇದೀಗ 54 ಸಾವಿರ ಕೋಟಿ ಹೂಡಿಕೆ ಮಾಡಿ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ. 22 ಹಳ್ಳಿಗಳು ಇದರ ದುಷ್ಪರಿಣಾಮವನ್ನು ಎದುರಿಸುತ್ತಿವೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ವೃದ್ಧರು ಮೂಲೆ ಹಿಡಿಯುತ್ತಿದ್ದಾರೆ….. ಕಟುಂಬಸ್ಥರೆಲ್ಲರೂ ನಿರಂತರವಾಗಿ ಖಾಯಿಲೆಗಳಿಂದ ನರಳುವಂತಾಗಿದೆ. ಹೀಗೆ ಮುಂದುವರೆದರೆ ನಾವುಗಳ್ಯಾರೂ ಇಲ್ಲಿ ಬದುಕಿದ್ದೆವು ಎನ್ನುವ ಗುರುತೂ ಕೂಡ ಉಳಿಯುವುದಿಲ್ಲ…. ಅಂತ ಪರಿಸ್ಥಿತಿ ಇದೆ” ಎಂದರು.
“ಇಲ್ಲಿ ಪವರ್ ಮತ್ತು ಸ್ಪಾಂಜ್ ಕಂಪೆನಿ(ಬೀಡು ಕಬ್ಬಿಣ)ಗಳಿಂದ ಬಹುತೇಕ ತೊಂದರೆ ಉಂಟಾಗುತ್ತಿದೆ. ಪವರ್ ಕಂಪೆನಿಯಲ್ಲಿ ಕಲ್ಲಿದ್ದಲನ್ನು ಸುಟ್ಟ ಮೇಲೆ ಶಾಖೋತ್ಪನ್ನದ ವೇಳೆ ಹಾರು ಬೂದಿ ಹೊರಸೂಸುತ್ತದೆ. ಇದು ವಾತಾವರಣದಲ್ಲೆಲ್ಲ ಹರಡಿ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಮನೆಗಳ ಮೇಲೆ ಕೂರುತ್ತದೆ, ಊಟ ತಿಂಟಿಯನ್ನೂ ಕೂಡ ಆ ಧೂಳಿನ ಕಣಗಳ ಜತೆಗೆ ಸೇವಿಸುತ್ತಿದ್ದೇವೆ. ಮನೆಯಲ್ಲಿ ಕಾಲಿಟ್ಟರೆ, ಸುಡುಗಾಡಲ್ಲಿ ನಡೆದಾಡಿ ಬಂದಂರೆ ಕಾಲುಗಳೆಲ್ಲವೂ ಕಪ್ಪು ಮಸಿಯಿಂದ ಕೂಡಿರುತ್ತವೆ. ಮಕ್ಕಳು ಮನೆಯಲ್ಲೆಲ್ಲ ಒದ್ದಾಡಿಕೊಂಡು ಆಟವಾಡುವುದರಿಂದ ಮೈಕೈಯಲ್ಲ ಕರಿ ಮಸಿ ಆಗಿರುತ್ತದೆ… ಸಣ್ಣ ಮಕ್ಕಳಿಗೆಲ್ಲ ಅಸ್ತಮಾ, ಸ್ಟ್ರೋಕ್ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಇಷ್ಟು ದಿನಗಳಿಂದ ಹೋರಾಟ ಮಾಡಿದರೂ ಕೂಡ, ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತಿದೆ. ಅಧಿಕಾರಿಗಳು ಅವರ ತಾಳಕ್ಕೆ ಕುಣಿಯುತ್ತಿದ್ದಾರೆ…..” ಎಂದು ಆಕ್ರೋಶದಿಂದ ದೂರಿದರು.
ಇದನ್ನೂ ಓದಿದ್ದೀರಾ? ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಕಾಯ್ದೆಗೆ ಬಿಡಿಗಾಸಿನ ಬೆಲೆ ನೀಡದ ಸರ್ಕಾರದ ನಡೆ ಖಂಡನೀಯ
“ಕೊಪ್ಪಳದ ಈ ಹನ್ನೆರಡು ಗ್ರಾಮಗಳು ಇಂದು ಉದ್ಯಮೀಕರಣದ ಹೆಸರಿನಲ್ಲಿ ಭಾರೀ ಬೆಲೆ ತೆರುತ್ತಿವೆ. ಕಪ್ಪು ಧೂಳು ಕೇವಲ ಪರಿಸರದ ಸಮಸ್ಯೆಯಲ್ಲ, ಅದು ನೂರಾರು ಕುಟುಂಬಗಳ ಆರೋಗ್ಯ, ಕೃಷಿ, ಉಸಿರು ಮತ್ತು ಭವಿಷ್ಯವನ್ನು ನಿಧಾನವಾಗಿ ಹೀರಿ ತಿನ್ನುತ್ತಿರುವ ದೈತ್ಯ ಸಮಸ್ಯೆಯಾಗಿದೆ. ರಾಷ್ಟ್ರೀಯ ಮಾಧ್ಯಮಗಳು ಬೆಳಕು ಚೆಲ್ಲಿದ್ದರೂ, ಸ್ಥಳೀಯ ಜನರ ನರಳಾಟಕ್ಕೆ ಮಾತ್ರ ಕೊನೆ ಇಲ್ಲದಂತಾಗಿದೆ.
ಈಗ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಠಿಣ ಕ್ರಮಗಳು, ನಿಯಮಿತ ಮೇಲ್ವಿಚಾರಣೆ ಮತ್ತು ದೂಷಿತ ಕಾರ್ಖಾನೆಗಳ ವಿರುದ್ಧ ನಿರ್ದೇಶಿತ ಕ್ರಮ ತುಂಬಾ ಅಗತ್ಯವಾಗಿದೆ. ಇಲ್ಲದಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೊಪ್ಪಳ ತಾಲೂಕಿನ ಗ್ರಾಮಗಳು ನಿರ್ಜನವಾಗುವುದಲ್ಲದೆ, ಇಲ್ಲಿನ ಜನರು ತಮ್ಮ ಸ್ವಂತ ನೆಲದಲ್ಲೇ ನಿರಾಶ್ರಿತರಾಗುವುದು ಅನಿವಾರ್ಯವಾಗುತ್ತದೆ. ಕೊಪ್ಪಳದ ಈ ಧೂಳು ಸಮಸ್ಯೆ ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇದು ಅಸಮತೋಲಿತ ಅಭಿವೃದ್ಧಿ ಎಚ್ಚರಿಕೆಯ ಸಂಕೇತವಾಗಿದೆ.




