ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾ (GBF) ಸಂಘಟನೆಯ ಅಧ್ಯಕ್ಷರಾಗಿ ಮಂಗಳೂರು ಮೂಲದ ಉದ್ಯಮಿ, ಯುವ ನಾಯಕ ಡೆನಿಸ್ ಡಿಸಿಲ್ವಾ ಆಯ್ಕೆಯಾಗಿದ್ದಾರೆ. ಮೇ 23ರಂದು ನವದೆಹಲಿಯಲ್ಲಿ ನಡೆದ ಸಂಘಟನೆಯ ರಾಷ್ಟ್ರಮಟ್ಟದ ವಾರ್ಷಿಕ ಸಭೆಯಲ್ಲಿ ಅವರು ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಡೆನಿಸ್ ಡಿಸಿಲ್ವಾ ಅವರೊಂದಿಗೆ, ಉಪಾಧ್ಯಕ್ಷರಾಗಿ ಶಿಲ್ಲಾಂಗ್ನ ಬಾರ್ನಬಾಸ್ ನಾಂಗ್ಬಹ್, ಪ್ರಧಾನ ಕಾರ್ಯದರ್ಶಿಯಾಗಿ ದೆಲಿಯ ಜೋಸ್ ಕುರಿಯನ್ ಯೋಹನ್ನಾನ್, ಕಾರ್ಯದರ್ಶಿಯಾಗಿ ದೆಹಲಿಯ ಅಡ್ವೊ. ಪಿ. ಐ. ಜೋಸ್, ಖಜಾಂಚಿಗಳಾಗಿ ಬೆಂಗಳೂರಿನ ಮ್ಯಾಥ್ಯೂ ಈಪನ್ ಮತ್ತು ರಾಹುಲ್ ಜಾರ್ಜ್, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ದೆಹಲಿಯ ಫಾ. ಟೋಮಿ ಜೋಸೆಫ್ ಮತ್ತು ಅಸಿರ್ವಾಥಂ ಡಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದೇ ವೇಳೆ, ‘Collaboration Over Competition‘ (ಸ್ಪರ್ಧೆಗಿಂತ ಸಹಯೋಗ) ಎಂಬ ವಿಷಯದಡಿ ಉದ್ಯಮಶೀಲತೆ, ನಾಯಕತ್ವ, ನೆಟ್ವರ್ಕಿಂಗ್ ಹಾಗೂ ಸಮುದಾಯ ಸಬಲೀಕರಣ ಕುರಿತು ಸಮ್ಮೇಳನವೂ ನಡೆದಿದೆ. ಸಮ್ಮೇಳನದಲ್ಲಿ ಭಾರತದ ವಿವಿಧ ರಾಜ್ಯಗಳ ನೂರಾರು ಕ್ರೈಸ್ತ ಉದ್ಯಮಿಗಳು, ವ್ಯವಹಾರ ನಾಯಕರು, ವೃತ್ತಿಪರರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲದೆ, Catholic Bishops’ Conference of India (CBCI) ಯ ಕಾರ್ಯದರ್ಶಿ, GBFನ ಮುಖ್ಯ ಪೋಷಕ ಆರ್ಚ್ಬಿಷಪ್ ಅನಿಲ್ ಜೆ. ಟಿ. ಕೌಟೊ ಅವರು ಅಧ್ಯಕ್ಷತೆ ವಹಿಸಿದ್ದರು. ಭಾರತದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ, YMCA ರಾಷ್ಟ್ರೀಯ ಅಧ್ಯಕ್ಷ ನ್ಯಾ. ಕುರಿಯನ್ ಜೋಸೆಫ್ ಅವರು ಮುಖ್ಯ ಅತಿಥಿಯಾಗಿ ಭಾಗವಸಿದ್ದರು. National Council of Churches in India (NCCI) ಯ ಪ್ರಧಾನ ಕಾರ್ಯದರ್ಶಿ ಅಸಿರ್ ಎಬೆನೆಜರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ಚ್ಬಿಷಪ್ ಅನಿಲ್ ಜೆ. ಟಿ. ಕೂಟೋ, “ಕ್ರೈಸ್ತ ಯುವಕರು ಹಾಗೂ ಮಹಿಳೆಯರು ಉದ್ಯಮಶೀಲತೆ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕ್ರೈಸ್ತ ಉದ್ಯಮಶೀಲತೆ ಕೇವಲ ಲಾಭಕೇಂದ್ರಿತವಾಗಿರದೆ, ಸೇವೆ, ಪರಿವರ್ತನೆ, ನೈತಿಕ ಮೌಲ್ಯಗಳು ಹಾಗೂ ಸಮುದಾಯದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡ ಮೌಲ್ಯಾಧಾರಿತ ಉದ್ಯಮಶೀಲತೆಯಾಗಿ ರೂಪಗೊರ್ಳಳಬೇಕು” ಎಂದು ಹೇಳಿದ್ದಾರೆ.
ನ್ಯಾ. ಕುರಿಯನ್ ಜೋಸೆಫ್ ಮಾತನಾಡಿ, “ಇಂದಿನ ಸಮಾಜದಲ್ಲಿ ನೈತಿಕ ಮತ್ತು ಮೌಲ್ಯಾಧಾರಿತ ಉದ್ಯಮ ನಾಯಕತ್ವದ ಅಗತ್ಯವಿದೆ. ಯುವಜನರ ಉದ್ಯಮಶೀಲತೆ, ನಾಯಕತ್ವ ಹಾಗೂ ಕೌಶಲ್ಯಾಭಿವೃದ್ಧಿಗಾಗಿ GBF ಮತ್ತು National Council of YMCAs of India ನಡುವೆ ಭವಿಷ್ಯದಲ್ಲಿ ಉತ್ತಮ ಸಹಕಾರ ಸಾಧ್ಯ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“CBCI ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ GBF ಸಂಸ್ಥೆಯು ಆರ್ಥಿಕವಾಗಿ ಬಲಿಷ್ಠ ಉದ್ಯಮ ವಲಯ ನಿರ್ಮಿಸುವ ಉದ್ದೇಶ ಹೊಂದಿರುವ ಜಾಗತಿಕ ಕ್ರೈಸ್ತ ಉದ್ಯಮಿಗಳ ಮತ್ತು ವೃತ್ತಿಪರರ ವೇದಿಕೆಯಾಗಿದೆ. ಈ ಸಂಸ್ಥೆ ಉದ್ಯಮಶೀಲತೆ ಪ್ರೋತ್ಸಾಹ, ಸ್ಟಾರ್ಟ್ಅಪ್ ಬೆಂಬಲ, ಮಾರ್ಗದರ್ಶನ, ನೆಟ್ವರ್ಕಿಂಗ್, ಮಹಿಳಾ ಸಬಲೀಕರಣ, ನಾಯಕತ್ವ ಅಭಿವೃದ್ಧಿ ಹಾಗೂ ಮೌಲ್ಯಾಧಾರಿತ ಉದ್ಯಮ ನಾಯಕತ್ವಕ್ಕೆ ಆದ್ಯತೆ ನೀಡುತ್ತಿದೆ” ಎಂದು ನೂತನ ಅಧ್ಯಕ್ಷ ಡೆನಿಸ್ ಡಿಸಿಲ್ವಾ ಹೇಳಿದ್ದಾರೆ.




