ಸಿಬಿಎಸ್ಇ 12ನೇ ತರಗತಿ ಪರೀಕ್ಷಾ ಫಲಿತಾಂಶದ ಮೌಲ್ಯಮಾಪನದಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಪ್ರಧಾನಿಯವರಿಗೆ ಯಾವುದೇ ಉತ್ತರಗಳಿಲ್ಲ, ಹೊಣೆಗಾರಿಕೆಯೂ ಇಲ್ಲ ಮತ್ತು ನಾಚಿಕೆಯೂ ಇಲ್ಲ” ಎಂದು ಅವರು ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದೇಶಾದ್ಯಂತ ಸುಮಾರು 18.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ರಾಹುಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಿಬಿಎಸ್ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಗುತ್ತಿಗೆಯನ್ನು ‘ಕೋಎಂಟ್’ ಎಂಬ ಕಂಪನಿಗೆ ನೀಡಲಾಗಿದ್ದು, ಇದೊಂದು “ಉದ್ದೇಶಪೂರ್ವಕ ಸಂಚು” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇದೇ ಕಂಪನಿಯು 2019 ರಲ್ಲಿ ತೆಲಂಗಾಣದಲ್ಲಿ ‘ಗ್ಲೋಬರೇನಾ’ ಎಂಬ ಹೆಸರಿನಲ್ಲಿ ಇದೇ ರೀತಿಯ ಭಾರಿ ಅವಾಂತರ ಸೃಷ್ಟಿಸಿತ್ತು. ಕಂಪನಿಯ ಹೆಸರು ಬದಲಾಗಿದೆಯೇ ಹೊರತು ಅದರ ಹಿಂದಿನ ಕೆಟ್ಟ ಉದ್ದೇಶ ಮುಂದುವರಿದಿದೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಸಿಬಿಎಸ್ಇ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು ವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಸಿಬಿಎಸ್ಇ ಗುತ್ತಿಗೆಯನ್ನು ‘ಕೋಎಂಟ್’ ಕಂಪನಿಗೆ ಯಾರ ನಿರ್ದೇಶನದ ಮೇರೆಗೆ ನೀಡಲಾಯಿತು? ಗುತ್ತಿಗೆ ನೀಡುವಾಗ ಯಾವ ನಿಯಮಗಳನ್ನು ಗಾಳಿಗೆ ತೂರಲಾಗಿದೆ? ಈ ಕಂಪನಿಯು ಈ ಹಿಂದೆ ವಿವಾದಕ್ಕೆ ಸಿಲುಕಿದ್ದರೂ, ಹಿನ್ನೆಲೆ ಪರಿಶೀಲನೆ ನಡೆಸಲು ಸಿಬಿಎಸ್ಇ ಏಕೆ ವಿಫಲವಾಯಿತು ಮತ್ತು ಆ ಕಂಪನಿಯ ಆಡಳಿತ ಮಂಡಳಿಗೂ ಮೋದಿ ಸರ್ಕಾರಕ್ಕೂ ಇರುವ ನೈಜ ಸಂಬಂಧವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಜೈಸಲ್ಮೇರ್ನಲ್ಲಿ ನೀರಿಲ್ಲದೆ ನೂರಾರು ಹಸುಗಳ ಸಾವು; ವೋಟಿಗಷ್ಟೇ ಗೋಮಾತೆ ಜಪ ಸಾಕೇ?
ಮೌಲ್ಯಮಾಪನ ವ್ಯವಸ್ಥೆಯ ದೋಷಗಳಿಗೆ 17 ವರ್ಷದ ವೇದಾಂತ್ ಶ್ರೀವಾಸ್ತವ ಎಂಬ ವಿದ್ಯಾರ್ಥಿಯ ಪ್ರಕರಣವೇ ಒಂದು ಸ್ಪಷ್ಟ ಸಾಕ್ಷಿ. ಆತನಿಗೆ ಭೌತಶಾಸ್ತ್ರದಲ್ಲಿ ಅತಿ ಕಡಿಮೆ ಅಂಕ ಬಂದಿದ್ದರಿಂದ ಉತ್ತರ ಪತ್ರಿಕೆಯ ಪ್ರತಿಯನ್ನು ಪಡೆದುಕೊಂಡಾಗ, ಅಲ್ಲಿರುವ ಕೈಬರಹ ತನ್ನದಲ್ಲ ಎಂದು ದೂರಿದ್ದ. ನ್ಯಾಯ ಕೇಳಿದ ಆತನನ್ನು ಬಿಜೆಪಿ ಐಟಿ ಸೆಲ್ ‘ಪಾಕಿಸ್ತಾನಿ’, ‘ಸೊರೊಸ್ ಏಜೆಂಟ್’ ಹಾಗೂ ‘ದೇಶದ್ರೋಹಿ’ ಎಂದು ನಿಂದಿಸಿ ಟ್ರೋಲ್ ಮಾಡಿದೆ. ಸಂತ್ರಸ್ತ ಬಾಲಕನಿಗೆ ಸಹಾಯ ಮಾಡುವ ಬದಲು ನಿಂದಿಸುತ್ತಿರುವುದು ತೀವ್ರ ಅಸಮಾಧಾನದ ಸಂಗತಿ ಎಂದು ಹೇಳಿದ್ದಾರೆ.
ಈ ಹಗರಣದ ಹಿಂದಿರುವ ನೈಜ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ತಕ್ಷಣವೇ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಬೇಕು ಮತ್ತು ನಿಷ್ಪಕ್ಷಪಾತವಾದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅಭಯ ನೀಡಿರುವ ಅವರು, “ಯುವ ಒಡನಾಡಿಗಳೇ, ನಿಮ್ಮ ಕಠಿಣ ಶ್ರಮವನ್ನು ಕದಿಯಲು ಯಾರಿಗೂ ಸಾಧ್ಯವಿಲ್ಲ, ನಾವು ಈ ಸಂಚಿನ ಮೂಲವನ್ನು ಭೇದಿಸಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುತ್ತೇವೆ” ಎಂದು ದೃಢವಾದ ಭರವಸೆ ನೀಡುವ ಮೂಲಕ ವಿದ್ಯಾರ್ಥಿಗಳ ಬೆಂಬಲಕ್ಕೆ ದನಿಯಾಗಿ ನಿಂತಿದ್ದಾರೆ.





