ಮಂಗಳೂರಿನ ಎಂಆರ್ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ ಯುವ ಕಾರ್ಮಿಕ ಮನೀಶ್ ಕರ್ಕಡ (23) ಅವರ ಕುಟುಂಬಕ್ಕೆ ಒಟ್ಟು ₹1.20 ಕೋಟಿ ಮೊತ್ತದ ಭಾರಿ ಪರಿಹಾರವನ್ನು ನೀಡುವುದಾಗಿ ಕಂಪನಿಯು ಅಧಿಕೃತವಾಗಿ ಪ್ರಕಟಿಸಿದೆ. ಎಂಆರ್ಪಿಎಲ್ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ನಲ್ಲಿ ಬುಧವಾರ ಈ ಅನಾಹುತ ಸಂಭವಿಸಿತ್ತು. ಕಾರ್ಮಿಕನ ಹಠಾತ್ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಆಡಳಿತ ಮಂಡಳಿಯು, ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬದ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದೆ.
ಮಾನವೀಯ ನೆಲೆಯಲ್ಲಿ ಮತ್ತು ಕಾರ್ಮಿಕ ಕಲ್ಯಾಣದ ದೃಷ್ಟಿಯಿಂದ ಈ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದ್ದು, ಯಾವುದೇ ಹಣದಿಂದ ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ ಎಂಬುದನ್ನು ಎಂಆರ್ಪಿಎಲ್ ಸ್ಪಷ್ಟಪಡಿಸಿದೆ. ಮೃತರ ಕುಟುಂಬಕ್ಕೆ ಕಂಪನಿಯ ವತಿಯಿಂದ ನೇರವಾಗಿ ₹90 ಲಕ್ಷಗಳ ಆರ್ಥಿಕ ನೆರವು ನೀಡಲಾಗುತ್ತದೆ. ಇದರೊಂದಿಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಯೋಜನೆಯಡಿ ₹10 ಲಕ್ಷ ಹಾಗೂ ವರ್ಕ್ಮೆನ್ ಕಾಂಪೆನ್ಸೇಷನ್ ಪಾಲಿಸಿ ಅಡಿಯಲ್ಲಿ ಅಂದಾಜು ₹20 ಲಕ್ಷ ಸೇರಿದಂತೆ ಒಟ್ಟು ₹1.20 ಕೋಟಿ ಪರಿಹಾರ ಮೊತ್ತವನ್ನು ಕುಟುಂಬದ ಕೈಸೇರಿಸಲಾಗುವುದು ಎಂದು ತಿಳಿಸಲಾಗಿದೆ.
ಇನ್ನುಮುಂದೆ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕರಿಗೂ ‘ಮೆಡಿಕ್ಲೇಮ್ ವಿಮೆ’ ಒದಗಿಸುವ ಕುರಿತು ಕಂಪನಿಯು ಮಹತ್ವದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ. ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಸಂಬಂಧ ದಕ್ಷಿಣ ಕನ್ನಡ ಲೋಕಸಭಾ ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಎಲ್ಲರೊಂದಿಗೆ ಚರ್ಚಿಸಿ ಈ ವಿಮಾ ವ್ಯವಸ್ಥೆಯನ್ನು ಅಂತಿಮಗೊಳಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರಸ್ತಾವಿತ ಮೆಡಿಕ್ಲೇಮ್ ವಿಮಾ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಕಾನೂನು ಹಾಗೂ ಸಾಂಸ್ಥಿಕ ಪ್ರಕ್ರಿಯೆಗಳನ್ನು ಮುಂಬರುವ ನಾಲ್ಕು ವಾರಗಳ ಒಳಗಾಗಿ ಯಶಸ್ವಿಯಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಎಂಆರ್ಪಿಎಲ್ ವ್ಯಕ್ತಪಡಿಸಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾಯಂ ಮತ್ತು ಗುತ್ತಿಗೆ ಸಿಬ್ಬಂದಿಯ ಸುರಕ್ಷತೆ, ಆರೋಗ್ಯ ಹಾಗೂ ಅವರ ಕುಟುಂಬದ ಕ್ಷೇಮಾಭಿವೃದ್ಧಿಗೆ ಕಂಪನಿಯು ಸದಾ ಬದ್ಧವಾಗಿದೆ. ಭವಿಷ್ಯದಲ್ಲೂ ಬಾಧಿತ ಕುಟುಂಬಕ್ಕೆ ಬೇಕಾಗುವ ಎಲ್ಲ ರೀತಿಯ ನೆರವು ಹಾಗೂ ಸಹಕಾರವನ್ನು ಮುಂದುವರಿಸುವುದಾಗಿ ಎಂಆರ್ಪಿಎಲ್ ತನ್ನ ಪ್ರಕಟಣೆಯಲ್ಲಿ ಪುನರುಚ್ಚರಿಸಿದೆ.




