ಕರ್ನಾಟಕ ಸರ್ಕಾರವು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಸಾರಿಗೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಶಾಸನಬದ್ಧ ರಕ್ಷಣೆಗಳನ್ನು ರದ್ದುಗೊಳಿಸಿರುವುದನ್ನು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಸಂಘಟನೆ (ಕೆಐಟಿಯು) ತೀವ್ರವಾಗಿ ಖಂಡಿಸಿದೆ. ಸರ್ಕಾರದ ಈ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಐಟಿ ಯೂನಿಯನ್ ಆಗ್ರಹಿಸಿದೆ.
ಕರ್ನಾಟಕ ಸರ್ಕಾರವು ಇತ್ತೀಚೆಗೆ ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ-2026’ (ಕರ್ನಾಟಕ ಕಾಯ್ದೆ ಸಂಖ್ಯೆ 38, 2026) ಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ತಿದ್ದುಪಡಿಯ ಮೂಲಕ ಮೂಲ ಕಾಯ್ದೆಯಲ್ಲಿದ್ದ ಸೆಕ್ಷನ್ 25(1)(h) ನಿಂದ 25(1)(o) ವರೆಗಿನ ಪ್ರಮುಖ ರಕ್ಷಣಾತ್ಮಕ ನಿಯಮಗಳನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ: ದಿನಕ್ಕೆ 14 ಗಂಟೆ ಕೆಲಸಕ್ಕೆ ಕರ್ನಾಟಕ ಐಟಿ ಕಂಪನಿಗಳಿಂದ ಪ್ರಸ್ತಾಪ; ಉದ್ಯೋಗಿಗಳಿಂದ ಆಕ್ರೋಶ
ಬದಲಾವಣೆಯಲ್ಲಿ ಏನಿದೆ? (ರದ್ದುಗೊಳಿಸಲಾದ ಪ್ರಮುಖ ನಿಯಮಗಳು)
ಸರ್ಕಾರದ ಹೊಸ ತಿದ್ದುಪಡಿಯಿಂದಾಗಿ ಕಂಪನಿಗಳು ರಾತ್ರಿ ವೇಳೆ ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಪಾಲಿಸಬೇಕಿದ್ದ ಕೆಲವು ನಿಯಮಗಳನ್ನು ಸಡಿಲಗೊಳಿಸಿದಂತಾಗಿದೆ. ಕ್ಯಾಬ್ ಅಥವಾ ವಾಹನ ಚಾಲಕರ ಹಿನ್ನೆಲೆ ಪರಿಶೀಲನೆ ಮತ್ತು ಕಡ್ಡಾಯ ಪೊಲೀಸ್ ವೆರಿಫಿಕೇಶನ್, ಉದ್ಯೋಗಿಗಳ ಫೋನ್ ಸಂಖ್ಯೆ, ಇಮೇಲ್ ಹಾಗೂ ಮನೆ ವಿಳಾಸಗಳು ಅನಧಿಕೃತ ವ್ಯಕ್ತಿಗಳಿಗೆ ಸಿಗದಂತೆ ಕಾಯ್ದುಕೊಳ್ಳುವುದು, ಸಾರಿಗೆ ಮಾರ್ಗದಲ್ಲಿ ಮಹಿಳಾ ಉದ್ಯೋಗಿಯನ್ನು ಮೊದಲನೆಯವರಾಗಿ ಪಿಕ್ ಮಾಡುವುದು ಅಥವಾ ಕೊನೆಯವರಾಗಿ ಡ್ರಾಪ್ ಮಾಡುವುದನ್ನು ತಡೆಯುವುದು, ನಿರ್ದಿಷ್ಟ ಸಂದರ್ಭಗಳಲ್ಲಿ ಕ್ಯಾಬ್‌ಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ಕಡ್ಡಾಯವಾಗಿ ನಿಯೋಜಿಸುವುದು, ಪಾಸಣಾಧಿಕಾರಿಗಳಿಂದ ವಾಹನಗಳ ಆಕಸ್ಮಿಕ ಪರಿಶೀಲನೆ (Random checks) ಹಾಗೂ ವಾಹನದ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ‘ಟ್ರಾವೆಲ್ ಡೆಸ್ಕ್’ ಅಥವಾ ‘ಕಂಟ್ರೋಲ್ ರೂಮ್’ ವ್ಯವಸ್ಥೆ ಮಾಡುವುದು, ಆಪತ್ತು ಎದುರಾದಾಗ ಮಹಿಳಾ ಸಿಬ್ಬಂದಿ ತಕ್ಷಣ ನೆರವು ಪಡೆಯಲು ಎಸ್ಒಎಸ್ ಅಥವಾ ಎಮರ್ಜೆನ್ಸಿ ಮೆಕಾನಿಸಂ ಕಲ್ಪಿಸುವುದು ಹೀಗೆ ಹಲವು ನಿಯಮಗಳನ್ನು ಸಡಿಲಗೊಳಿಸಿದಂತಾಗಿದೆ.
ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಕೆಐಟಿಯು ಆಗ್ರಹ
ಈ ಕುರಿತು ಮಾತನಾಡಿರುವ ಕೆಐಟಿಯು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ, “ರಾಜ್ಯದ ಐಟಿ ಮತ್ತು ಐಟಿಇಎಸ್ (IT/ITeS) ವಲಯದಲ್ಲಿ ಲಕ್ಷಾಂತರ ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಸುರಕ್ಷಿತ ಸಾರಿಗೆ ಕಲ್ಪಿಸುವುದು ಕಂಪನಿಗಳ ಕರ್ತವ್ಯ. ಶಾಸನಬದ್ಧ ಸುರಕ್ಷತಾ ನಿಯಮಗಳನ್ನು ತೆಗೆದುಹಾಕುವುದರಿಂದ ಉದ್ಯೋಗದಾತರ (ಮಾಲೀಕರ) ಹೊಣೆಗಾರಿಕೆ ಕಡಿಮೆಯಾಗಿ, ಮಹಿಳಾ ಉದ್ಯೋಗಿಗಳು ಹೆಚ್ಚಿನ ಅಪಾಯ ಎದುರಿಸುವಂತಾಗುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಕಾರ್ಮಿಕ ಇಲಾಖೆಯ ಮೂಲಗಳ ಪ್ರಕಾರ, 10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ದೊಡ್ಡ ಸಂಸ್ಥೆಗಳು ಹಾಗೂ ಕಂಪನಿಗಳಿಗೆ ಈ ನಿಯಮಗಳು ‘ವೃತ್ತಿಪರ ಭದ್ರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ’ (OSH Code) ಅಡಿಯಲ್ಲಿ ಕವರ್ ಆಗಲಿವೆ ಎಂಬ ಸಮಜಾಯಿಷಿ ನೀಡಲಾಗಿದೆ. ಆದಾಗ್ಯೂ, ಕಾರ್ಮಿಕ ಸಂಘಟನೆಗಳು ಇದನ್ನು ಒಪ್ಪದೆ ತಿದ್ದುಪಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿವೆ.





