‘ರಾಜ್ಯದಲ್ಲಿ 3,600ರಷ್ಟು ಲಂಬಾಣಿ ತಾಂಡಾಗಳಿದ್ದು, ಶೇ 50ರಷ್ಟು ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ. ಈ ಪ್ರಯತ್ನ ನಿಲ್ಲಿಸದಿದ್ದರೆ ಶ್ರೀರಾಮ ಸೇನೆ ಸಂಘಟನೆ ವಿಶೇಷ ಪಡೆ ರಚಿಸಿಕೊಂಡು ಅವರನ್ನು ಒದ್ದು ಓಡಿಸಲಿದೆ’ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ವಿಜಯಪುರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಿಮ್ಮ ಯಾವುದೇ ರೀತಿಯ ಭಜನೆ, ಪ್ರಾರ್ಥನೆ ಚರ್ಚ್ ಒಳಗೆ ಇರಲಿ. ಹೊರಗಡೆ, ತಾಂಡಾಗಳಲ್ಲಿ ಮೋಸಮಾಡಿ ನೀವು ಮಾಡುವ ಕೆಲಸವನ್ನು ಏಸು ಒಪ್ಪುವುದಿಲ್ಲ’ ಎಂದರು.
‘ತಾಂಡಾಗಳ ಬಡತನ, ಅನಕ್ಷರತೆಯನ್ನು ಬಳಸಿಕೊಂಡು, ಅವರಿಗೆ ಆಸೆ ತೋರಿಸಿ ಮಾಡುವ ಮತಾಂತರ ಯತ್ನವನ್ನು ತಕ್ಷಣ ನಿಲ್ಲಿಸಬೇಕು. ನಮ್ಮ ಧರ್ಮ, ನಮ್ಮ ದೇವರು ನಮಗೆಲ್ಲ ಶಾಂತಿ, ಸುಖ ಕೊಡುತ್ತಿದ್ದಾನೆ. ಏನೇನೋ ತಪ್ಪು ಮಾಹಿತಿ ನೀಡಿ ಈ ರೀತಿ ಮತಾಂತರ ಮಾಡುವುದನ್ನು ಸರ್ಕಾರ ಹತ್ತಿಕ್ಕಬೇಕು. ಮತಾಂತರ ನಿಷೇಧ ಕಾಯ್ದೆ ಈಗಲೂ ಜಾರಿಯಲ್ಲಿದ್ದು, ಅದನ್ನು ಪಾಲಿಸಬೇಕು’ ಎಂದು ಮುತಾಲಿಕ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿಗಳ ಅಸ್ತಿಭಾರದ ಮೇಲೆ ಕಟ್ಟಿದ ಅಹಿಂದ ಬಜೆಟ್
‘ಹಿಂದೂ ರಾಷ್ಟ್ರ ಎಂದಾಗ ಇಲ್ಲಿನ ಮುಸ್ಲಿಮರು ಇದ್ದಾರೆ, ಕ್ರೈಸ್ತರು ಇದ್ದಾರೆ, ಅವರ ಗತಿ ಏನು ಎಂದು ಕೇಳುವವರಿದ್ದಾರೆ. ಅವರು ಇಲ್ಲೇ ಇರುತ್ತಾರೆ, ಬಹುಸಂಖ್ಯಾತರ ಆಚರಣೆ, ಸಂಸ್ಕೃತಿಯನ್ನು ಅವರು ಗೌರವಿಸಿದರೆ ಯಾವುದೇ ತೊಂದರೆ ಇರುವುದಿಲ್ಲ’ ಎಂದರು.
‘ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ರಾಜಕೀಯ ಅಧಿಕಾರ ಏಕೆ ತೆಗೆದುಕೊಳ್ಳಬಾರದು? ಇಡೀ ದೇಶದಲ್ಲಿ ರಾಮನ ಪರವಾಗಿ ನಿಂತಿದ್ದೇ ಬಿಜೆಪಿ, ಆರೆಸ್ಸೆಸ್, ವಿಎಚ್‌ಪಿ, ಶ್ರೀರಾಮ ಸೇನೆಯಂತಹ ಸಂಘಟನೆಗಳು. ನಾವು ತ್ಯಾಗ ಮಾಡಿದ್ದೇವೆ. ಕಾಂಗ್ರೆಸ್ ಬಾಬರನ ಪರವಾಗಿ ನಿಂತಿತ್ತು. ರಾಮನ ಹೆಸರು ಎತ್ತಲು ಸಹ ಕಾಂಗ್ರೆಸಿಗರಿಗೆ ಯೋಗ್ಯತೆ ಇಲ್ಲ. ನಾವು ರಾಮರಾಜ್ಯ ಸ್ಥಾಪಿಸುವ ಸಲುವಾಗಿಯೇ ರಾಮನ ಹೆಸರು ಹೇಳುತ್ತೇವೆಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ‘ ಎಂದರು.
‘ನಾವೂ ರಾಮಮಂದಿರ ನಿರ್ಮಿಸುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುವುದು ಬರೀ ಬುರುಡೆ. ಬಜೆಟ್‌ನಲ್ಲಿ ಇದಕ್ಕಾಗಿ ಒಂದು ರೂಪಾಯಿ ಸಹ ನೀಡಿಲ್ಲ. ಮುಸ್ಲಿಮರಿಗೆ, ಕ್ರೈಸ್ತರಿಗೆ ಹಣ ಇಡಲು ನಿಮಗೆ ಸಾಧ್ಯವಿದೆ. ರಾಮನ ದೇವಸ್ಥಾನಕ್ಕೆ ಏಕೆ ಹಣವಿಲ್ಲ’ ಎಂದು ಪ್ರಶ್ನಿಸಿದರು.