ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ತಪ್ಪಾಗಿ ಬಿತ್ತರಿಸಿದ್ದಕ್ಕಾಗಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಸುದ್ದಿ ಸಂಸ್ಥೆಯು ಖರ್ಗೆ ಅವರಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಕ್ಷಮಾಪಣೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “PTI ಕ್ಷಮೆ ಕೇಳಿದೆ. ಆದರೆ, ತಪ್ಪು ಸುದ್ದಿ ಪ್ರಕಟದಿಂದ ಈಗಾಗಲೇ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ವಿಪಕ್ಷದ ನಾಯಕ ಆರ್. ಅಶೋಕ್ ಅವರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಕುರಿತು ಆಗಸ್ಟ್ 3ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, “ನನ್ನ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ 25 ದಿನಗಳ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧವಿದ್ದರೆ ಅದನ್ನು ಪರಿಗಣಿಸುತ್ತೇನೆ”* ಎಂದಿದ್ದರು. ಆದರೆ, ಸುದ್ದಿ ಸಂಸ್ಥೆ PTI ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ‘ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ನೀಡಿದ ಹೇಳಿಕೆ’ ಎಂಬಂತೆ ವರದಿ ಮಾಡಿತ್ತು.
ಪಿಟಿಐ ಪ್ರಕಟಿಸಿದ್ದ ತಪ್ಪು ಅರ್ಥವುಳ್ಳ ಸುದ್ದಿಯ ವಿರುದ್ಧ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘ತಮ್ಮ ಹೇಳಿಕೆಯು ಬಿಜೆಪಿಯ ರಾಜಕೀಯವನ್ನು ಉದ್ದೇಶಿಸಿದ್ದೇ ಹೊರತು ವಿದ್ಯಾರ್ಥಿ ಅಥವಾ ಉದ್ಯೋಗಾಕಾಂಕ್ಷಿಗಳನ್ನಲ್ಲ ‘ ಎಂದು ಸ್ಪಷ್ಟಪಡಿಸಿದ್ದರು.
ಈ ಬಳಿಕ, ಖರ್ಗೆ ಅವರಿಗೆ ಪತ್ರ ಬರೆದ ಪಿಟಿಐ ದೃಶ್ಯ ಮಾಧ್ಯಮ ವಿಭಾಗದ ಸಂಪಾದಕ ಶಾಝಿ ಝಮಾನ್, “ನಮ್ಮ ಕಡೆಯಿಂದ ಸಂಭವಿಸಿದ ಮಾನವ ದೋಷದಿಂದ (ಹ್ಯೂಮನ್ ಎರರ್) ನಿಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಪ್ಪನ್ನು ಸರಿಪಡಿಸಲಾಗಿದ್ದು, ಈ ವಿಚಾರದಲ್ಲಿ ಸಂಬಂಧಪಟ್ಟ ಸಿಬ್ಬಂದಿಯಿಂದ ವಿವರಣೆ ಪಡೆಯುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ಸಂಸ್ಥೆಯು ಕ್ಷಮೆ ಕೋರಿ ಬರೆದ ಪತ್ರವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಹಾನಿ ಈಗಾಗಲೇ ಆಗಿದೆ. ನಿಮ್ಮ ಕ್ಷಮೆಯಾಚನೆಯಿಂದ ಏನು ಪ್ರಯೋಜನ? ಈ ತಪ್ಪು ಮಾಹಿತಿಯನ್ನು ರಾಜಕೀಯ ಪಕ್ಷಗಳು ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮಗಳ ಕಂಟೆಂಟ್ ಕ್ರಿಯೇಟರ್‌ಗಳು ವ್ಯಾಪಕವಾಗಿ ವೈರಲ್ ಮಾಡಿದ್ದಾರೆ. ತಪ್ಪು ಮಾಹಿತಿ ಹರಡಿದ ಬಳಿಕ ಆದ ಹಾನಿಯನ್ನು ಯಾರು ಸರಿಪಡಿಸುತ್ತಾರೆ? ಎಷ್ಟು ಮಂದಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯ? ಭಾರತದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮ ಕಾಣೆಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
The damage has already been done, @PTI_News. What is the use of your apology?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 4, 2026
This misinformation wasn’t amplified only by political parties. It has also been picked up and spread by independent content creators across social media, including @lakhshya_speaks.
Who is going to… https://t.co/G44subNb5B pic.twitter.com/6xWl6w3hl1
ಇದೇ ವೇಳೆ ಇಂಗ್ಲಿಷ್ ಸಾಹಿತಿ ಜೋನಾಥನ್ ಸ್ವಿಫ್ಟ್ ಅವರ, ‘ಸುಳ್ಳು ವೇಗವಾಗಿ ಹರಡುತ್ತದೆ; ಸತ್ಯ ಅದರ ಹಿಂದೆ ಬರುತ್ತದೆ. ಸತ್ಯ ತಲುಪುವಷ್ಟರಲ್ಲಿ ಸುಳ್ಳು ತನ್ನ ಪರಿಣಾಮ ಬೀರಿರುತ್ತದೆ’ ಎಂಬ ಮಾತುಗಳನ್ನು ಉಲ್ಲೇಖಿಸಿರುವ ಖರ್ಗೆ, ಮಾಧ್ಯಮಗಳ ಜವಾಬ್ದಾರಿಯನ್ನು ನೆನಪಿಸಿದ್ದಾರೆ.
ಅಲ್ಲದೆ, ಇಂತಹ ತಪ್ಪು ಮಾಹಿತಿ ಹರಡಿದ ಸುದ್ದಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.



