ಪಂಚಾಯತ್ ರಾಜ್ ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಕರ್ನಾಟಕದ ಆಡಳಿತಕ್ಕೆ ಹೊಸ ದಿಕ್ಕು ನೀಡಿದ ರಾಮಕೃಷ್ಣ ಹೆಗಡೆ, ಸರಳತೆ, ಸಂವಹನ ಕೌಶಲ ಮತ್ತು ರಾಜಕೀಯ ಪ್ರಭಾವದಿಂದ ವಿಶಿಷ್ಟ ಛಾಪು ಮೂಡಿಸಿದ್ದ ನಾಯಕ. ಮತ್ತೊಂದು ಮಗ್ಗುಲಿನಲ್ಲಿ ಭೂ ಅವ್ಯವಹಾರಗಳು, ಅಕ್ರಮ ಗುತ್ತಿಗೆ, ದೂರವಾಣಿ ಕದ್ದಾಲಿಕೆಗಳ ವಿವಾದಗಳನ್ನೂ ಹೊದ್ದಿದ್ದ ರಾಜಕಾರಣಿ. ಕೆಲವಲ್ಲಿ ಆರೋಪಮುಕ್ತರಾದರು, ಮತ್ತೆ ಕೆಲವು ಬಾಕಿ ಉಳಿದವು. ಹೀಗಾಗಿ ಹೆಗಡೆ ಪರಂಪರೆ ಸುಧಾರಣೆಯ ಜತೆಗೆ ಅಧಿಕಾರ, ನೈತಿಕತೆ ಮತ್ತು ರಾಜಕೀಯ ವಿವಾದಗಳ ಸಂಕೀರ್ಣ ಅಧ್ಯಾಯ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 1926ರ ಆಗಸ್ಟ್ 29ರಂದು ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಜ್ಯೋತಿಷ್ಯ, ಮೂಢನಂಬಿಕೆ, ಹೋಮ-ಹವನಗಳನ್ನ ಸಂಪೂರ್ಣವಾಗಿ ಬದಿಗಿಟ್ಟು ವೈಚಾರಿಕ ಹಾಗೂ ತಾರ್ಕಿಕ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದ ಅವರು, ಕಾರು ಚಾಲಕರನ್ನೂ ನೇಮಿಸಿಕೊಳ್ಳದಷ್ಟು ಸರಳ ವ್ಯಕ್ತಿತ್ವದವರು. ಸ್ವತಃ ತಾವೇ ಕಾರು ಚಾಲನೆ ಮಾಡಿಕೊಂಡು ಸಂಗೀತ ಕಚೇರಿಗಳಿಗೆ ಹೋಗುವುದನ್ನು ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯುವುದನ್ನು ಇಷ್ಟಪಡುತ್ತಿದ್ದರು. ಶಕುಂತಲಾ ಹೆಗಡೆ ಅವರೊಂದಿಗೆ ವಿವಾಹವಾಗಿದ್ದ ಇವರಿಗೆ ಮಮತಾ ಮತ್ತು ಸಮತಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಆರಂಭದಲ್ಲಿ ಕಾಂಗ್ರೆಸ್ ನಾಯಕರಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶ ಪಡೆದ ಅವರು, ನಂತರ ತುರ್ತು ಪರಿಸ್ಥಿತಿಯ ವಿರೋಧ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸದ ನಂತರ ಜನತಾ ಚಳವಳಿಯ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು. 1983ರಲ್ಲಿ ಜನತಾ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಕರ್ನಾಟಕದ ಮೊಟ್ಟಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1984ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷಕ್ಕೆ ಕೇವಲ 4 ಸ್ಥಾನಗಳು ಮಾತ್ರ ಲಭಿಸಿ ದೊಡ್ಡ ಹಿನ್ನಡೆಯಾದಾಗ, ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋದರು. ಆದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಭರ್ಜರಿ ಜಯಗಳಿಸಿ ಅಧಿಕಾರಕ್ಕೆ ಮರಳಿತು. ಅಧಿಕಾರ ವಹಿಸಿಕೊಂಡ ತಕ್ಷಣವೇ ತಮ್ಮ ಮಕ್ಕಳು ಮತ್ತು ಅವರ ಸಂಗಾತಿಗಳು ವಿಧಾನಸೌಧದ ಹತ್ತಿರ ಬರದಂತೆ ಹಾಗೂ ಸರ್ಕಾರದ ಪ್ರಭಾವ ಅಥವಾ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು. ತಮ್ಮ ಸಚಿವ ಸಂಪುಟದ ಮಂತ್ರಿಗಳಿಗೆ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳಲು ಕಠಿಣ ನಿಯಮ ವಿಧಿಸಿದ್ದರು.
ಹೆಗಡೆ ಅವರ ಆಡಳಿತಾವಧಿಯ ಅತ್ಯಂತ ಪ್ರಮುಖ ಹಾಗೂ ಮೈಲಿಗಲ್ಲು ಎನಿಸಿದ ಸಾಧನೆಯೆಂದರೆ ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಸಾಕಾರರೂಪ ನೀಡಿದ ಪಂಚಾಯತ್ ರಾಜ್ ವ್ಯವಸ್ಥೆ. ಪ್ರಜಾಪ್ರಭುತ್ವವನ್ನು ತಳಮಟ್ಟದಿಂದ ಬಲಪಡಿಸುವ ಈ ವ್ಯವಸ್ಥೆಯು ಪ್ರಮುಖವಾಗಿ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ‘ಮಂಡಲ ಅಥವಾ ಗ್ರಾಮ ಪಂಚಾಯತ್’, ‘ತಾಲೂಕು ಪಂಚಾಯತ್’ ಹಾಗೂ ‘ಜಿಲ್ಲಾ ಪರಿಷತ್’ ಅಸ್ತಿತ್ವದಲ್ಲಿರುತ್ತವೆ. ಪ್ರತಿಯೊಂದು ಹಂತದಲ್ಲೂ ಸ್ಥಳೀಯ ಜನರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾದ ಪ್ರತಿನಿಧಿಗಳು ಆಡಳಿತ ಮಂಡಳಿಯನ್ನು ಮುನ್ನಡೆಸುತ್ತಾರೆ.

ಗ್ರಾಮ/ಮಂಡಲ ಪಂಚಾಯತಿ, ಇದು ಪಂಚಾಯತ್ ರಾಜ್ ವ್ಯವಸ್ಥೆಯ ಅತ್ಯಂತ ತಳಮಟ್ಟದ ಹಾಗೂ ಪ್ರಮುಖ ಘಟಕ. ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ಮತ್ತು ಚರಂಡಿ ನಿರ್ವಹಣೆ, ಬೀದಿ ದೀಪಗಳ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಹಾಗೂ ಗ್ರಾಮದ ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳನ್ನು ಇದು ನಿರ್ವಹಿಸುತ್ತದೆ. ಸ್ಥಳೀಯ ಮಟ್ಟದಲ್ಲಿ ಜನರಿಗೆ ಅತಿ ಹತ್ತಿರದಲ್ಲಿರುವ ಸರ್ಕಾರಿ ಅಂಗವಾಗಿ ಇದು ಕೆಲಸ ಮಾಡುತ್ತದೆ.
ತಾಲೂಕು ಪಂಚಾಯತ್ ಅಥವಾ ಮಧ್ಯಂತರ ಹಂತವು ಗ್ರಾಮ ಪಂಚಾಯತ್ಗಳು ಮತ್ತು ಜಿಲ್ಲಾ ಪರಿಷತ್ ನಡುವೆ ಕೊಂಡಿಯಂತೆ ವರ್ತಿಸುತ್ತದೆ. ಗ್ರಾಮ ಪಂಚಾಯತ್ಗಳು ತಯಾರಿಸುವ ಯೋಜನೆಗಳನ್ನು ಕ್ರೋಢೀಕರಿಸಿ, ತಾಲೂಕಿನ ಒಟ್ಟಾರೆ ಅಭಿವೃದ್ಧಿ ನೀಲನಕ್ಷೆಯನ್ನು ಇದು ಸಿದ್ಧಪಡಿಸುತ್ತದೆ. ಅಲ್ಲದೆ, ಸರ್ಕಾರದ ಪ್ರತಿಯೊಂದು ಯೋಜನೆಯ ಮೇಲ್ವಿಚಾರಣೆ ಮಾಡುತ್ತದೆ.
ಜಿಲ್ಲಾ ಮಟ್ಟದ ಅತ್ಯುನ್ನತ ಸಂಸ್ಥೆಯಾದ ಜಿಲ್ಲಾ ಪರಿಷತ್, ಇಡೀ ಜಿಲ್ಲೆಯ ಗ್ರಾಮೀಣಾಭಿವೃದ್ಧಿಯ ಜವಾಬ್ದಾರಿ ಹೊಂದಿರುತ್ತದೆ. ಕೃಷಿ, ನೀರಾವರಿ, ಶಿಕ್ಷಣ, ಸಣ್ಣ ಕೈಗಾರಿಕೆಗಳು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತದೆ. ಅಲ್ಲದೆ, ಸರ್ಕಾರದ ವಿವಿಧ ಅನುದಾನಗಳನ್ನು ಮತ್ತು ತೆರಿಗೆಗಳ ಮೂಲಕ ಸಂಗ್ರಹವಾಗುವ ಆದಾಯವನ್ನು ಮೂರು ಹಂತಗಳ ನಡುವೆ ಸಮರ್ಪಕವಾಗಿ ಹಂಚಿಕೆ ಮಾಡುತ್ತದೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ರಾಜಕೀಯ ವಿಶ್ಲೇಷಕ ಜೇಮ್ಸ್ ಮನರ್ (James Manor) ಮತ್ತು ರಿಚರ್ಡ್ ಕ್ರೂಕ್ (Richard Crook) ಅವರು ರಾಮಕೃಷ್ಣ ಹೆಗಡೆ ಜಾರಿಗೆ ತಂದ ವಿಕೇಂದ್ರೀಕರಣದ ಕುರಿತು ಆಳವಾದ ಅಧ್ಯಯನ ನಡೆಸಿ, ಇದು ಭಾರತದಲ್ಲೇ ಅತ್ಯಂತ ಯಶಸ್ವಿ ಮಾದರಿಯಾಗಿದೆ ಎಂದು ದಾಖಲಿಸಿದ್ದಾರೆ. ಮಂಡಲ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ವ್ಯವಸ್ಥೆಯು ಆಡಳಿತವನ್ನು ನೇರವಾಗಿ ಹಳ್ಳಿಗಳಿಗೆ ಕೊಂಡೊಯ್ದಿರುವುದನ್ನು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಹಾಗೂ ಆಡಳಿತಾತ್ಮಕ ಅಧಿಕಾರವನ್ನು ವಿಕೇಂದ್ರೀಕರಿಸಿದ್ದನ್ನು ತಮ್ಮ ಅಧ್ಯಯನ ವರದಿಗಳಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹೆಗಡೆಯವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರ ಮೂಲಕ ಹೆಗಡೆಯವರು ವಿಕೇಂದ್ರೀಕರಣದ ಕನಸನ್ನು ಸಾಕಾರಗೊಳಿಸಿದರು.
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಖಚಿತಪಡಿಸುವ ಉದ್ದೇಶದಿಂದ ಹೆಗಡೆ ಸರ್ಕಾರ 1984ರಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟುಹಾಕಿತು. ಸಮಾಜದಿಂದ ಕಡೆಗಣಿಸಲ್ಪಟ್ಟ ಮತ್ತು ಅತ್ಯಂತ ಕೆಳಸ್ತರದಲ್ಲಿರುವ ಬಡ ಕುಟುಂಬಗಳ ಆರ್ಥಿಕ ಅಭಿವೃದ್ಧಿ ಹಾಗೂ ಉದ್ಧಾರಕ್ಕಾಗಿ ಅವರು ಅಂತ್ಯೋದಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಇದರೊಂದಿಗೆ, ಸರ್ಕಾರದ ಅಧಿಕಾರ ಅಥವಾ ಸೌಲಭ್ಯಗಳು ಬಡವರ ಬಾಗಿಲಿಗೆ ನೇರವಾಗಿ ತಲುಪುವಂತೆ ಮಾಡಲು ‘ಜನತಾ ದರ್ಶನ’ ಎಂಬ ನವೀನ ಹಾಗೂ ಜನಪರ ಕಾರ್ಯಕ್ರಮ ಪ್ರಾರಂಭಿಸಿದರು. ಇದರಡಿ ಜನಸಾಮಾನ್ಯರು ಮಧ್ಯವರ್ತಿಗಳ ಹಂಗಿಲ್ಲದೆ, ನೇರವಾಗಿ ಮುಖ್ಯಮಂತ್ರಿಯವರ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಮತ್ತು ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು.
ಹೆಗಡೆಯವರ ಸುದೀರ್ಘ ರಾಜಕೀಯ ಬದುಕಿನ ಮತ್ತೊಂದು ಬದಿಯಲ್ಲಿ ಹಲವು ಗಂಭೀರ ಆರೋಪಗಳು, ವಿವಾದಗಳು ಮತ್ತು ತನಿಖೆಗಳೂ ಕಾಣಿಸುತ್ತವೆ. ಇವುಗಳಲ್ಲಿ ಕೆಲವು ಆರೋಪಗಳು ತನಿಖೆಯ ಬಳಿಕ ತಳ್ಳಿಹಾಕಲ್ಪಟ್ಟಿದ್ದರೆ, ಇನ್ನು ಕೆಲವು ಅಂತಿಮ ತೀರ್ಮಾನಕ್ಕೆ ಬರದೇ ಬಾಕಿ ಉಳಿದಿವೆ.
1983ರಲ್ಲಿ ಕಾಂಗ್ರೆಸ್(ಐ) ನಾಯಕ ಎಸ್. ಬಂಗಾರಪ್ಪ, ಹೆಗಡೆಯವರ ಸೋದರ ಸಂಬಂಧಿ ಗಣೇಶ್ ಹೆಗಡೆ ಮುಖ್ಯಮಂತ್ರಿಯವರ ಪ್ರಭಾವ ಬಳಸಿಕೊಂಡು ರಾಜ್ಯದಿಂದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಮತ್ತು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದರು. ಆರೋಪವನ್ನು ಎದುರಿಸುವ ಬದಲು ಹೆಗಡೆಯವರು ಪ್ರತಿಪಕ್ಷದ ಸದಸ್ಯರನ್ನೂ ಒಳಗೊಂಡ ತನಿಖಾ ಸಮಿತಿಯನ್ನು ರಚಿಸುವಂತೆ ವಿಧಾನಸಭಾಧ್ಯಕ್ಷರಿಗೆ ಸೂಚಿಸಿದರು. ಒಂದು ವರ್ಷದ ಬಳಿಕ ಸಮಿತಿ ನೀಡಿದ ವರದಿಯಲ್ಲಿ ಹೆಗಡೆಯವರ ವಿರುದ್ಧದ ಆರೋಪಗಳಿಗೆ ಆಧಾರವಿಲ್ಲ ಎಂದು ಹೇಳಿ ಅವರನ್ನು ಆರೋಪಮುಕ್ತಗೊಳಿಸಲಾಯಿತು.
ಮುಂದಿನ ವರ್ಷವೇ ಅವರ ಕುಟುಂಬದ ಮೇಲೆ ಮತ್ತೊಂದು ಆರೋಪ ಬಂತು. ಪ್ರತಿಪಕ್ಷ ನಾಯಕ ಎ.ಕೆ. ಸುಬ್ಬಯ್ಯ, ಹೆಗಡೆಯವರ ಪುತ್ರ ಭರತ್ ವೈದ್ಯಕೀಯ ಕಾಲೇಜಿನ ಸೀಟು ಕೊಡಿಸುವುದಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಈ ಆರೋಪವನ್ನೂ ಹೆಗಡೆಯವರು ರಾಜಕೀಯವಾಗಿ ಎದುರಿಸುವ ಬದಲು ನ್ಯಾಯಾಂಗ ತನಿಖೆಗೆ ವಹಿಸಿದರು. ನಂತರ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಾಧೀಶರು ಕೇಂದ್ರದಲ್ಲಿ ಅರೆ-ನ್ಯಾಯಾಂಗ ಹುದ್ದೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ತನಿಖೆ ಸ್ಥಗಿತಗೊಂಡು ಪ್ರಕರಣ ಬಾಕಿ ಉಳಿಯಿತು
ಇದನ್ನೂ ಓದಿ: ಕಪ್ಪು ಕನಿಷ್ಠವಲ್ಲ, ಬಿಳುಪು ಶ್ರೇಷ್ಠವಲ್ಲ; ಬಣ್ಣದಾಸೆಗೆ ಬಲಿಯಾಗದಿರಿ!
1985ರಲ್ಲಿ ರೆಕ್ಟಿಫೈಡ್ ಸ್ಪಿರಿಟ್ ರಫ್ತು ಪ್ರಕರಣದ ಮತ್ತೊಂದು ವಿವಾದದಲ್ಲಿ ಸಿಲುಕಿದರು. ಬಂಗಾರಪ್ಪ ಅವರು ಹೆಗಡೆ ಸರ್ಕಾರದ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ₹99 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದರು. ಹೆಗಡೆಯವರು ಈ ಆರೋಪದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದರು. ತನಿಖೆಯ ಅಂತಿಮ ವರದಿ ಸರ್ಕಾರವನ್ನು ಆರೋಪಮುಕ್ತಗೊಳಿಸಿತು.
ಅದೇ ವರ್ಷ ನಡೆದ ಅರಕ್ ಬಾಟ್ಲಿಂಗ್ ಗುತ್ತಿಗೆ ಪ್ರಕರಣ ಹೆಗಡೆಯವರಿಗೆ ಹೆಚ್ಚು ರಾಜಕೀಯ ಮುಜುಗರ ತಂದಿತು. ಹೆಗಡೆ ಸರ್ಕಾರ ನೀಡಿದ್ದ ಗುತ್ತಿಗೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತು. ಸರ್ಕಾರದ ನಿರ್ಧಾರವನ್ನು ಕೋರ್ಟ್ ತೀವ್ರವಾಗಿ ಟೀಕಿಸಿತು. ಈ ಬೆನ್ನಲ್ಲೇ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೇವಲ ಒಂದು ವಾರದಲ್ಲೇ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಮರಳಿದರು. ಹೀಗಾಗಿ ಈ ಪ್ರಕರಣ ಹೆಗಡೆಯವರು ತೋರಿಸುತ್ತಿದ್ದ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿತು.
1987ರ ಎನ್ಜಿಇಎಫ್ ವ್ಯವಹಾರ ಕೂಡ ವಿವಾದಕ್ಕೆ ಕಾರಣವಾಯಿತು. ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿನ ರಾಜ್ಯದ ಪಾಲನ್ನು ಪಶ್ಚಿಮ ಜರ್ಮನಿಯ ಎಇಜಿ ಟೆಲಿಫಂಕೆನ್ಗೆ ಅನುಕೂಲವಾಗುವ ರೀತಿಯಲ್ಲಿ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್(ಐ) ಆರೋಪಿಸಿತು. ಹೆಗಡೆಯವರು ನ್ಯಾಯಾಂಗ ತನಿಖೆಗೆ ಬದಲಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿದರು. ಅವರೇ ತಂದಿದ್ದ ಲೋಕಾಯುಕ್ತದ ತನಿಖೆಯಲ್ಲಿ ಅವರ ವಿರುದ್ಧ ಆರೋಪ ಸಾಬೀತಾಗಲಿಲ್ಲ.
1988ರ ದೂರವಾಣಿ ಕದ್ದಾಲಿಕೆ ಪ್ರಕರಣ ಅವರ ರಾಜಕೀಯ ಬದುಕಿನ ಅತ್ಯಂತ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿತು. ತಮ್ಮ ರಾಜಕೀಯ ವಿರೋಧಿಗಳ ನಡುವಿನ ಸಂಪರ್ಕವನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಅಜಿತ್ ಸಿಂಗ್ ಮತ್ತು ದೇವೇಗೌಡರ ನಡುವಿನ ದೂರವಾಣಿ ಸಂಭಾಷಣೆಯ ವಿವರಗಳು ಬಹಿರಂಗಗೊಂಡವು. ಇದಕ್ಕೆ ಪ್ರತಿಯಾಗಿ ಹೆಗಡೆ ಸರ್ಕಾರವೇ ಪ್ರತಿಪಕ್ಷ ನಾಯಕರು, ತಮ್ಮದೇ ಪಕ್ಷದ ಕೆಲ ಮುಖಂಡರು ಮತ್ತು ಪತ್ರಕರ್ತರು ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳ ದೂರವಾಣಿಗಳನ್ನು ಕದ್ದಾಲಿಕೆ ಮಾಡಿಸುತ್ತಿತ್ತು ಎಂಬ ಆರೋಪಗಳು ಮತ್ತು ದಾಖಲೆಗಳು ಹೊರಬಂದವು. ಅವರ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದ ಕೆಲವು ಭೂ ವ್ಯವಹಾರಗಳು ನಂತರ ದೊಡ್ಡ ರಾಜಕೀಯ ಚರ್ಚೆಯಾಗಿ ಮಾರ್ಪಟ್ಟವು. ಇವುಗಳಲ್ಲಿ ರೇವಜಿತು, ಮಧುವನ ಮತ್ತು ಎನ್ಆರ್ಐ ಹೌಸಿಂಗ್ ವ್ಯವಹಾರಗಳು ಪ್ರಮುಖವಾಗಿದ್ದವು.
ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿದ್ದ ಬೆಲೆಬಾಳುವ ಜಮೀನಿನ ವ್ಯವಹಾರದಲ್ಲಿ ಹೆಗಡೆಯವರ ಕುಟುಂಬದ ಹೆಸರು ಕೇಳಿಬಂತು. ‘ರೇವಜಿತು ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್’ ಸಂಸ್ಥೆಯಲ್ಲಿ ಹೆಗಡೆಯವರ ಅಳಿಯ ಮನು ನಿಚಾನಿ ಅವರ ಸಹೋದರಿ ಶೋಭಾ ಮಖಿಜಾ ಪಾಲುದಾರರಾಗಿರುವುದನ್ನು ಮುಂದಿಟ್ಟುಕೊಂಡು, ಈ ವ್ಯವಹಾರದಲ್ಲಿ ಹೆಗಡೆ ಕುಟುಂಬದ ಪ್ರಭಾವವಿದೆ ಎಂಬ ಆರೋಪ ಮಾಡಲಾಯಿತು.
ಹೆಗಡೆಯವರು ಇದನ್ನು ನಿರಾಕರಿಸಿದರು. ರೇವಜಿತು ಸಂಸ್ಥೆಯಲ್ಲಿ ಮಖಿಜಾ ಅವರು ಅನೇಕ ಪಾಲುದಾರರಲ್ಲಿ ಒಬ್ಬರು ಮಾತ್ರ. ಅವರು ಸ್ವತಂತ್ರವಾಗಿ ವ್ಯವಹಾರ ನಡೆಸುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಸರ್ಕಾರಕ್ಕೂ ಈ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು. ಆದರೆ ಅಂದಿನ ಕಂದಾಯ ಸಚಿವ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಜಮೀನಿನ ಮೌಲ್ಯವನ್ನು ಕಡಿಮೆ ತೋರಿಸಿ ಸ್ಟಾಂಪ್ ಡ್ಯೂಟಿ ತಪ್ಪಿಸಲು ಯತ್ನಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂತು. ಮೂಲ ಮಾಲೀಕರ ವಿರುದ್ಧ ಕ್ರಮಕ್ಕೆ ಆದೇಶಿಸಲಾಯಿತು. ಆದರೆ ಖರೀದಿದಾರರಲ್ಲಿ ಒಬ್ಬರಾಗಿದ್ದ ಶೋಭಾ ಮಖಿಜಾ ವಿರುದ್ಧ ಕ್ರಮ ಕೈಗೊಳ್ಳಲಾಗಲಿಲ್ಲ.
ಮೈಸೂರಿನ ಮಧುವನದಲ್ಲಿದ್ದ ಸುಮಾರು 67 ಎಕರೆ ಜಮೀನಿನ ವ್ಯವಹಾರವೂ ಹೆಗಡೆ ಸರ್ಕಾರದ ವಿರುದ್ಧದ ಆರೋಪಗಳಿಗೆ ಕಾರಣವಾಯಿತು. ರಿಯಲ್ ಎಸ್ಟೇಟ್ ಉದ್ಯಮಿ ಸಿ.ವಿ.ಎಲ್. ಶಾಸ್ತ್ರಿ ನೇತೃತ್ವದ ಗುಂಪು ಈ ಜಮೀನನ್ನು ಪಡೆದುಕೊಂಡಿತ್ತು. ನಗರ ಭೂಮಿತಿ ಕಾಯ್ದೆಯಿಂದ ವಿನಾಯಿತಿ ಪಡೆಯಲು ಅವರು ಸರ್ಕಾರವನ್ನು ಸಂಪರ್ಕಿಸಿದ್ದರು. ಈ ವಿನಾಯಿತಿಯನ್ನು ನೀಡುವಲ್ಲಿ ಹೆಗಡೆಯವರು ವಿಶೇಷ ಆಸಕ್ತಿ ತೋರಿಸಿದ್ದರು ಮತ್ತು ಅದರ ಹಿಂದೆ ಹಣಕಾಸಿನ ಲಾಭವಿತ್ತು ಎಂಬ ಆರೋಪ ಕೇಳಿಬಂತು. ಬಳಿಕ ಜಮೀನು ಖೋಡೇ ಕುಟುಂಬಕ್ಕೆ ಮಾರಾಟವಾಗಿರುವುದೂ ಅನುಮಾನಗಳಿಗೆ ಕಾರಣವಾಯಿತು.
ಆದರೆ ಹೆಗಡೆಯವರ ವಿವರಣೆ ಬೇರೆಯಿತ್ತು. ಕಡತದಲ್ಲಿ ಅರ್ಹತೆ ಕಂಡ ಹಿನ್ನೆಲೆಯಲ್ಲಿ ತಾವು “may be considered” ಎಂದು ಸಾಮಾನ್ಯ ರೀತಿಯಲ್ಲೇ ಟಿಪ್ಪಣಿ ಮಾಡಿದ್ದಾಗಿ ಅವರು ಹೇಳಿದ್ದರು. ಜಮೀನಿನ ಮಾಲೀಕರ ಪರಿಚಯವೂ ಇರಲಿಲ್ಲ ಮತ್ತು ಮುಂದೆ ಆ ಜಮೀನು ಯಾರಿಗೆ ಮಾರಾಟವಾಗಲಿದೆ ಎಂಬ ಮಾಹಿತಿಯೂ ತಮಗಿರಲಿಲ್ಲ ಎಂದರು. ಆದರೂ ಕಡತ ಅಸಾಮಾನ್ಯ ವೇಗದಲ್ಲಿ ಮುಂದುವರಿದಿತ್ತು.
ಇದನ್ನೂ ಓದಿ: ‘ಟಾಕ್ಸಿಕ್’ ಮೇಲೆ ಸಿನಿಪ್ರಿಯರ ಬೇಸರ; ಅಬ್ಬರದ ದೃಶ್ಯಗಳ ನಡುವೆ ಕಳೆದುಹೋದ ಕಥೆ, ಮಹಿಳಾ ಧ್ವನಿ
ಬೆಂಗಳೂರಿನಲ್ಲಿ ಸುಮಾರು 110 ಎಕರೆ ಜಮೀನನ್ನು ಎನ್ಆರ್ಐ ಹೌಸಿಂಗ್ ಅಸೋಸಿಯೇಷನ್ಗೆ ಹಂಚಿಕೆ ಮಾಡಲಾಗಿತ್ತು. ಜಮೀನಿನ ಮೌಲ್ಯ ಮತ್ತು ಹಂಚಿಕೆ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳೆದ್ದವು. ಈ ಸಂಸ್ಥೆಯ ಹಿಂದೆ ಬೆನಾಮಿ ಹಿತಾಸಕ್ತಿಗಳಿವೆ ಮತ್ತು ಜಮೀನು ಹಂಚಿಕೆಯ ನಂತರ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡ ಸಂಸ್ಥೆಯೊಂದಿಗೆ ಹೆಗಡೆಯವರ ಅಳಿಯನ ಕುಟುಂಬಕ್ಕೆ ವ್ಯವಹಾರಿಕ ಸಂಪರ್ಕವಿದೆ ಎಂಬ ಆರೋಪಗಳು ಕೇಳಿಬಂದವು. ಒಂದೇ ಸಂಸ್ಥೆಗೆ ಗರಿಷ್ಠ 20 ಎಕರೆ ಜಮೀನು ಹಂಚಿಕೆ ಮಾಡಬಹುದೆಂಬ ನಿಯಮವನ್ನು ವಿಶೇಷ ನಿರ್ಣಯದ ಮೂಲಕ ಬದಿಗೊತ್ತಲಾಗಿದೆ ಎಂಬ ಆಕ್ಷೇಪವೂ ಇತ್ತು. ಹೆಗಡೆಯವರು ಈ ಆರೋಪಗಳನ್ನೂ ನಿರಾಕರಿಸಿದರು. ಎನ್ಆರ್ಐ ಹೂಡಿಕೆಯನ್ನು ಉತ್ತೇಜಿಸುವುದು ಸಚಿವ ಸಂಪುಟದ ನೀತಿ ನಿರ್ಧಾರವಾಗಿತ್ತು. ತಮ್ಮ ಕುಟುಂಬಕ್ಕೂ ಸಂಬಂಧಿತ ಸಂಸ್ಥೆಗಳಿಗೂ ಯಾವುದೇ ವ್ಯವಹಾರಿಕ ಸಂಪರ್ಕವಿಲ್ಲ ಎಂದು ಅವರು ಹೇಳಿದರು. ಆದರೆ ದಾಖಲೆಗಳ ಆಧಾರದ ಮೇಲೆ, ಬಿಡಿಎ ತನ್ನ ಸಾಮಾನ್ಯ ನಿಯಮಗಳನ್ನು ಮೀರಿ 110 ಎಕರೆ ಜಮೀನು ಹಂಚಿಕೆ ಮಾಡಿರುವುದು ಪ್ರಶ್ನೆಗೆ ಕಾರಣವಾಗಿತ್ತು. ಇದೇ ಅವಧಿಯಲ್ಲಿ ಜಾರಿ ನಿರ್ದೇಶನಾಲಯವೂ ಸಂಬಂಧಿತ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಹೆಗಡೆಯವರ ನಿಜವಾದ ರಾಜಕೀಯ ಪರಂಪರೆ ಬಹುಶಃ ಈ ಎರಡೂ ಮುಖಗಳ ನಡುವೆಯೇ ಇದೆ. ಸುಧಾರಣೆಗಳನ್ನು ಜಾರಿಗೆ ತರುವ ದೂರದೃಷ್ಟಿಯ ನಾಯಕನಾಗಿದ್ದ ಅವರು, ಅಧಿಕಾರದ ಸಂಕೀರ್ಣತೆ ಮತ್ತು ರಾಜಕೀಯ ವಿವಾದಗಳಿಂದ ಮುಕ್ತರಾಗಿರಲಿಲ್ಲ. ಕರ್ನಾಟಕದ ಆಡಳಿತ ವ್ಯವಸ್ಥೆಗೆ ಅವರು ನೀಡಿದ ಶಾಶ್ವತ ಕೊಡುಗೆಗಳನ್ನು ಗುರುತಿಸುವುದರ ಜೊತೆಗೆ, ಅವರ ಆಡಳಿತದ ಸುತ್ತ ಎದ್ದ ಪ್ರಶ್ನೆಗಳನ್ನೂ ಮುಕ್ತವಾಗಿ ಪರಿಶೀಲಿಸುವುದೇ ಅವರ ರಾಜಕೀಯ ಬದುಕನ್ನು ಸಮಗ್ರವಾಗಿ ಅರ್ಥೈಸುವ ದಾರಿ.




