ತಲತಲಾಂತರದಿಂದ ರಾಮನಗರದಲ್ಲಿಯೇ ಹುಟ್ಟಿ ಬೆಳೆದ ತಮ್ಮನ್ನು ಬಾಂಗ್ಲಾದೇಶಿಯರು ಎಂದು ಕರೆದಿರುವುದು ತೀವ್ರ ನೋವು ತಂದಿದೆ ಎಂದರು. 1995-96ರಲ್ಲಿ ಎಚ್.ಡಿ. ದೇವೇಗೌಡರಿಂದ ಹಿಡಿದು, ಕುಮಾರಸ್ವಾಮಿ, ಅವರ ಪತ್ನಿ ಹಾಗೂ ಮಗನಿಗೂ ಇದೇ ಸಮುದಾಯ ಬೆಂಬಲ ನೀಡಿ, ಅವರನ್ನು ಶಾಸಕ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ಕಾರಣವಾಗಿತ್ತು. ಆದರೆ ಈಗ ಬಿಜೆಪಿಯೊಂದಿಗೆ ಕೈಜೋಡಿಸಿರುವ ಅವರು ತಮ್ಮನ್ನೇ ಬಾಂಗ್ಲಾದೇಶಿಯರು ಎಂದು ಜರಿಯುತ್ತಿರುವುದು ಯಾವ ನೈತಿಕತೆ ಎಂದು ಟಿಪ್ಪು ನಗರದ ನೇರವಾಗಿ ಪ್ರಶ್ನಿಸಿದ್ದಾರೆ.
ರಾಮನಗರದ ಟಿಪ್ಪು ನಗರದಲ್ಲಿ ನಡೆದ ಶಿಬಿರವೊಂದರ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ‘ಬಾಂಗ್ಲಾದೇಶಿ ವಲಸಿಗರು’ ಎಂಬ ಆರೋಪವು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಈ ಶಿಬಿರವು ಕೇವಲ ಸ್ಥಳೀಯ ಕಾರ್ಮಿಕರಿಗೆ ನೆರವಾಗಲು ಆಯೋಜಿಸಲಾಗಿದ್ದೇ ಹೊರತು, ಇದರಲ್ಲಿ ಯಾವುದೇ ವಲಸಿಗರು ಇರಲಿಲ್ಲ ಎಂದು ವಾರ್ಡ್ ನಂಬರ್ 23ರ ಕೌನ್ಸಿಲರ್ ಮತ್ತು ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಫೈರೋಜ್ ಅವರು ‘ಈದಿನ.ಕಾಮ್’ ನೊಂದಿಗೆ ಮಾತನಾಡಿ ವಸ್ತುಸ್ಥಿತಿ ಬಿಚ್ಚಿಟ್ಟಿದ್ದಾರೆ.
ಕುಮಾರಸ್ವಾಮಿ ಅವರು ಆರೋಪಿಸಿದಂತೆ ಈ ಶಿಬಿರವು ಯಾವುದೇ ಛತ್ರದಲ್ಲಿ ನಡೆದಿಲ್ಲ, ಬದಲಾಗಿ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಸಂಜೆ 4 ಗಂಟೆ ಸುಮಾರಿಗೆ ನಡೆಯಿತು. ಹತ್ತಿರದ ರೇಷ್ಮೆ (ಫಿಲೇಚರ್) ಘಟಕಗಳಲ್ಲಿ ಕೆಲಸ ಮಾಡುವ ಬಹುಪಾಲು ಕಾರ್ಮಿಕರು ಹಗಲಿನಲ್ಲಿ ಮನೆಯಲ್ಲಿ ಇರದ ಕಾರಣ, ಬಿಎಲ್ಒ (BLO) ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರಿಗೆ ಎಸ್‌ಐಆರ್ (SIR) ಪ್ರಕ್ರಿಯೆಗೆ ನೋಂದಾಯಿಸಲು ಅನುಕೂಲವಾಗುವಂತೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಇಲ್ಲಿ ಸೇರಿದ್ದವರೆಲ್ಲರೂ ಸ್ಥಳೀಯ ಕಾರ್ಮಿಕರೇ ಆಗಿದ್ದು, ಯಾರಿಗೂ ಬಂಗಾಳಿ ಭಾಷೆ ಬರುವುದಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಫೈರೋಜ್ ಅವರು, ತಲತಲಾಂತರದಿಂದ ರಾಮನಗರದಲ್ಲಿಯೇ ಹುಟ್ಟಿ ಬೆಳೆದ ತಮ್ಮನ್ನು ಬಾಂಗ್ಲಾದೇಶಿಯರು ಎಂದು ಕರೆದಿರುವುದು ತೀವ್ರ ನೋವು ತಂದಿದೆ ಎಂದರು. 1995-96ರಲ್ಲಿ ಎಚ್.ಡಿ. ದೇವೇಗೌಡರಿಂದ ಹಿಡಿದು, ಕುಮಾರಸ್ವಾಮಿ, ಅವರ ಪತ್ನಿ ಹಾಗೂ ಮಗನಿಗೂ ಇದೇ ಸಮುದಾಯ ಬೆಂಬಲ ನೀಡಿ, ಅವರನ್ನು ಶಾಸಕ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ಕಾರಣವಾಗಿತ್ತು. ಆದರೆ ಈಗ ಬಿಜೆಪಿಯೊಂದಿಗೆ ಕೈಜೋಡಿಸಿರುವ ಅವರು ತಮ್ಮನ್ನೇ ಬಾಂಗ್ಲಾದೇಶಿಯರು ಎಂದು ಜರಿಯುತ್ತಿರುವುದು ಯಾವ ನೈತಿಕತೆ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಕೇವಲ ರಾಜಕೀಯ ದುರುದ್ದೇಶದಿಂದ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಬಿಎಲ್ಒಗಳು ಮನೆಮನೆಗೆ ಭೇಟಿ ನೀಡಿದಾಗ ಸಿಗದ ಜನರಿಗೆ ಅನುಕೂಲ ಕಲ್ಪಿಸಲು ಫಾರ್ಮ್ ವಿತರಿಸುತ್ತಿದ್ದ ಸಣ್ಣ ಗುಂಪಿನ ವಿಡಿಯೋವನ್ನು ಜೂಮ್ ಮಾಡಿ, ಬೇರೆಯದೇ ದೇಶದಿಂದ ಬಂದವರು ಎಂದು ಬಿಂಬಿಸುತ್ತಿರುವುದು ಖಂಡನೀಯ. ಈ ಬಗ್ಗೆ ಆಯಾ ವಾರ್ಡ್‌ನ ಜನರನ್ನು ಕೇಳಿದ್ದರೆ ಸತ್ಯಾಸತ್ಯತೆ ತಿಳಿಯುತ್ತಿತ್ತು, ಆದರೆ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಅವರ ಈ ಹೇಳಿಕೆಯ ವಿರುದ್ಧ ರಾಮನಗರದ ಬೀಡಿ ಕಟ್ಟುವ ಮಹಿಳಾ ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆಕ್ರೋಶ ಮಡುಗಟ್ಟಿದೆ. ತಮ್ಮನ್ನು ವಲಸಿಗರೆಂದು ಬಿಂಬಿಸಿದ ಹೇಳಿಕೆಯನ್ನು ಖಂಡಿಸಿ ಕಾರ್ಮಿಕರ ಸಂಘದ ಮಹಿಳೆಯರು ವಿಡಿಯೋ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸುತ್ತಿದ್ದಾರೆ. ಜೆಡಿಎಸ್ ನಾಯಕರ ಈ ನಡೆಯ ವಿರುದ್ಧ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಸ್ಥಳೀಯರು ನಿರ್ಧರಿಸಿದ್ದು, ಈಗಾಗಲೇ ಇತ್ತೀಚಿನ ಚುನಾವಣೆಯಲ್ಲಿ ಅವರಿಗೆ ತಮ್ಮ ಉತ್ತರವನ್ನು ನೀಡಿದ್ದೇವೆ ಎಂದು ಫೈರೋಜ್ ಎಚ್ಚರಿಸಿದ್ದಾರೆ.
ಈ ಆಧಾರರಹಿತ ಆರೋಪಗಳ ವಿರುದ್ಧ ಮುಂದಿನ ದಿನಗಳಲ್ಲಿ ಸಮುದಾಯದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಹಾಗೂ ಹೋರಾಟದ ಹಾದಿಯನ್ನು ತುಳಿಯುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ನೈಜ ವಿಡಿಯೋ ಹಾಗೂ ಫೋಟೋಗಳನ್ನು ಕಲೆಹಾಕಲಾಗುತ್ತಿದ್ದು, ರಾಜಕೀಯ ಪ್ರೇರಿತ ಸುಳ್ಳುಗಳನ್ನು ಬಯಲಿಗೆಳೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಫೈರೋಜ್ ತಿಳಿಸಿದರು.





