ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ ಆಶಾ ಕಾರ್ಯಕರ್ತೆಯರ ಬಾಕಿ ವೇತನ ಹಾಗೂ ಪ್ರೋತ್ಸಾಹ ಧನ ಪಾವತಿಗಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಮಾರ್ಚ್ ರಿಂದ ಮೇ 2026ರ ತಿಂಗಳವರೆಗಿನ ವೇತನ ಹಾಗೂ ಫೆಬ್ರವರಿಯಿಂದ ಮೇ 2026ರ ಅವಧಿಯ ಆಶಾ ಪ್ರೋತ್ಸಾಹ ಧನ ಪಾವತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗಳಿಗೆ K2 SNA SPARSH ಮೂಲಕ ಒಟ್ಟು ₹264,14,04,322 ಅನುದಾನ ಬಿಡುಗಡೆ ಮಾಡಲಾಗಿದೆ.
ರಾಜ್ಯದ ಹಲವೆಡೆ ಆಶಾ ಕಾರ್ಯಕರ್ತೆಯರಿಗೆ ಹಲವು ತಿಂಗಳುಗಳಿಂದ ವೇತನ ಹಾಗೂ ಪ್ರೋತ್ಸಾಹ ಧನ ಪಾವತಿಯಾಗದೇ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಈ ಕುರಿತು ಈದಿನ.ಕಾಮ್ ವಿಶೇಷ ವರದಿ ಪ್ರಕಟಿಸಿ ಸಮಸ್ಯೆಯನ್ನು ಬೆಳಕಿಗೆ ತಂದಿತ್ತು. ಹೋರಾಟಗಳು, ಮನವಿಗಳು ಮತ್ತು ಸಂಘಟನೆಗಳ ಒತ್ತಡದ ನಡುವೆಯೇ ಇದೀಗ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದು ಗಮನಾರ್ಹವಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ ಆಶಾ ಕಾರ್ಯಕರ್ತೆಯರಿಗೆ ಆಧಾರವಾಗಲಿಲ್ಲ ಸರ್ಕಾರ

ಆಶಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿದ್ದು, ಗರ್ಭಿಣಿಯರ ಆರೈಕೆ, ಲಸಿಕಾ ಕಾರ್ಯಕ್ರಮ, ಆರೋಗ್ಯ ಜಾಗೃತಿ, ಮನೆಮನೆ ಭೇಟಿ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, ಕಳೆದ ಹಲವು ತಿಂಗಳುಗಳಿಂದ ವೇತನ ಹಾಗೂ ಪ್ರೋತ್ಸಾಹ ಧನ ವಿಳಂಬವಾಗುತ್ತಿರುವುದು ಅವರ ಜೀವನ ನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.
ವಿಡಿಯೋ ವೀಕ್ಷಿಸಿ:https://youtu.be/3Lk22PKMz88
ಅನುದಾನ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗಳ ಮೂಲಕ ಬಾಕಿ ಪಾವತಿಗಳನ್ನು ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ. ಆಶಾ ಸಂಘಟನೆಗಳು ಕೂಡ ತಕ್ಷಣ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿ, ಮುಂದಿನ ದಿನಗಳಲ್ಲಿ ಇಂತಹ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿವೆ.
- ಬಾಗಲಕೋಟೆ-₹7,93,11,169
- ಬೆಂಗಳೂರು ಗ್ರಾಮಾಂತರ-₹3,27,55,380
- ಬೆಂಗಳೂರು ನಗರ-₹77100000
- ಬೆಳಗಾವಿ-₹16,66,87,678
- ಬಳ್ಳಾರಿ-₹7,50,90,699
- ಬೀದರ್-₹8,11,45,152
- ವಿಜಾಪುರ-₹10,90,03,556
- ಚಾಮರಾಜನಗರ-₹5,48,27,055
- ಚಿಕ್ಕಬಳ್ಳಾಪುರ-₹48,36,40,092
- ಚಿಕ್ಕಮಗಳೂರು-₹6,83,97,656
- ಚಿತ್ರದುರ್ಗ-₹8,26,00,000
- ದಕ್ಷಿಣ ಕನ್ನಡ-₹8,20,00,000
- ದಾವಣಗೆರೆ-₹7,59,59,159
- ಧಾರವಾಡ-₹7,17,05,018
- ಗದಗ್-₹5,50,00,000
- ಕಲಬುರಗಿ-₹12,85,59,613
- ಹಾಸನ್-₹8,06,22,000
- ಹಾವೇರಿ-₹11,49,27,310
- ಕೊಡಗು-₹2,91,99,926
- ಕೋಲಾರ-₹6,45,31,990
- ಕೊಪ್ಪಳ-₹7,62,39,840
- ಮಂಡ್ಯ-₹7,07,45,025
- ಮೈಸೂರು-₹12,33,88,382
- ರಾಯಚೂರು-₹8,66,16,529
- ರಾಮನಗರ-₹6,21,50,828
- ಶಿವಮೊಗ್ಗ-₹11,26,21,683
- ತುಮಕೂರು-₹11,95,91,246
- ಉಡುಪಿ-₹5,49,91,938
- ಉತ್ತರ ಕನ್ನಡ-₹7,43,35,920
- ಯಾದಗಿರಿ-₹10,09,24,412
- ಬಿಬಿಎಂಪಿ-₹12,43,80,000
- ವಿಜಯನಗರ-₹5,76,31,066




