ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ ಆಶಾ ಕಾರ್ಯಕರ್ತೆಯರಿಗೆ ಆಧಾರವಾಗಲಿಲ್ಲ ಸರ್ಕಾರ

Date:

ಆಶಾ ಕಾರ್ಯಕರ್ತೆಯರು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವವರು. ‘ಆಶಾ’ ಎಂದರೆ ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್(Accredited Social Health Activist). ಇವರು ದೇಶದ ಗ್ರಾಮೀಣ ಮತ್ತು ಬಡಜನರ ಆರೋಗ್ಯ ರಕ್ಷಣೆಯಲ್ಲಿ ಮೌನಸೈನಿಕರಂತೆ ಸೇವೆ ಸಲ್ಲಿಸುತ್ತಿರುವ ಮಹಿಳೆಯರು. ಗುಲಾಬಿ ಬಣ್ಣದ ಉಡುಪಿನಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಅರಿವು ಮೂಡಿಸುವ ಈ ಮಹಿಳೆಯರು ಆರೋಗ್ಯ ಕ್ಷೇತ್ರದ ನಿಜವಾದ ಆಧಾರ ಸ್ತಂಭಗಳಾಗಿದ್ದಾರೆ.

- Advertisement -

ಕೇಂದ್ರ ಸರ್ಕಾರವು 2005ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡುವ ಯೋಜನೆ ಆರಂಭಿಸಿತು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಂಡಿತು. ಪ್ರತಿ ಸಾವಿರ ಜನರಿಗೆ ಒಬ್ಬ ಆಶಾ ಕಾರ್ಯಕರ್ತೆ ಹಾಗೂ ನಗರ ಕೊಳಚೆ ಪ್ರದೇಶಗಳಲ್ಲಿ ಪ್ರತಿ 2500 ಜನರಿಗೆ ಒಬ್ಬರು ಆಶಾ ಕಾರ್ಯಕರ್ತೆಯನ್ನು ನೇಮಿಸಲಾಯಿತು. ಇಂದು ದೇಶಾದ್ಯಂತ ಸುಮಾರು 8.5 ಲಕ್ಷಕ್ಕೂ ಅಧಿಕ ಮಂದಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ 2008-09ರಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಪ್ರಸ್ತುತ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಯಲ್ಲಿ ತೊಡಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಆಶಾ ಕಾರ್ಯಕರ್ತೆಯರು ಸಾಮಾನ್ಯವಾಗಿ ಗ್ರಾಮದಲ್ಲೇ ವಾಸಿಸುವ ಮಹಿಳೆಯರಾಗಿದ್ದು, ಕನಿಷ್ಠ 10ನೇ ತರಗತಿ ವಿದ್ಯಾಭ್ಯಾಸ ಹೊಂದಿರಬೇಕು. ಬಡವರು, ವಿಧವೆಯರು, ವಿವಾಹ ವಿಚ್ಛೇದಿತರು ಹಾಗೂ ಸ್ವಾವಲಂಬಿಗಳಾಗಬೇಕೆಂಬ ಉದ್ದೇಶ ಹೊಂದಿರುವ ಮಹಿಳೆಯರು ಈ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಪ ಸಂಭಾವನೆ ಮತ್ತು ಪ್ರೋತ್ಸಾಹಧನದ ಆಧಾರದ ಮೇಲೆ ಇವರು ದಿನಕ್ಕೆ ಅನೇಕ ಗಂಟೆಗಳ ಕಾಲ ಶ್ರಮಿಸುತ್ತಾರೆ.

ಆಶಾ ಕಾರ್ಯಕರ್ತೆಯರ ಕೆಲಸ ಕೇವಲ ಆರೋಗ್ಯ ಮಾಹಿತಿ ನೀಡುವುದಷ್ಟೇ ಅಲ್ಲ. ಗರ್ಭಿಣಿಯರ ಆರೈಕೆ, ಸುರಕ್ಷಿತ ಹೆರಿಗೆ, ಶಿಶುಗಳ ಆರೋಗ್ಯ, ಲಸಿಕಾ ಕಾರ್ಯಕ್ರಮ, ಕುಟುಂಬ ಯೋಜನೆ, ಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಗ್ರಾಮ ಸ್ವಚ್ಛತೆ ಮತ್ತು ಆರೋಗ್ಯ ಅರಿವು ಮೂಡಿಸುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಅವರು ಹೊತ್ತಿದ್ದಾರೆ. ಗರ್ಭಿಣಿಯರನ್ನು ನೋಂದಾಯಿಸುವುದರಿಂದ ಹಿಡಿದು, ಹೆರಿಗೆ ನಂತರ ತಾಯಿ ಮತ್ತು ಮಗುವಿನ ಆರೈಕೆ ಮಾಡುವವರೆಗೂ ಅವರ ಪಾತ್ರ ಮಹತ್ವದ್ದಾಗಿದೆ.

ನವಜಾತ ಶಿಶುಗಳಿಗೆ ತಾಯಿಯ ಎದೆಹಾಲಿನ ಮಹತ್ವ ತಿಳಿಸುವುದು, ಮಕ್ಕಳಿಗೆ ವಯೋಮಾನಕ್ಕೆ ತಕ್ಕಂತೆ ಲಸಿಕೆ ಕೊಡಿಸುವುದು, ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವುದು, ತಾಯಿ-ಮಗು ಮರಣದ ಬಗ್ಗೆ ತಕ್ಷಣ ವರದಿ ಸಲ್ಲಿಸುವುದು ಮುಂತಾದ ಜವಾಬ್ದಾರಿಗಳನ್ನು ಆಶಾ ಕಾರ್ಯಕರ್ತೆಯರು ನಿಷ್ಠೆಯಿಂದ ನಿರ್ವಹಿಸುತ್ತಾರೆ. ಗ್ರಾಮ ಮಟ್ಟದಲ್ಲಿ ನಡೆಯುವ ಆರೋಗ್ಯ ಶಿಬಿರಗಳು, ಲಸಿಕಾ ಅಭಿಯಾನಗಳು, ಪೌಷ್ಟಿಕತಾ ಕಾರ್ಯಕ್ರಮಗಳು ಹಾಗೂ ಸ್ವಚ್ಛತಾ ಚಳವಳಿಗಳಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸುತ್ತಾರೆ.

ಮಲೇರಿಯಾ, ಡೆಂಘೀ, ಟಿಬಿ, ಕುಷ್ಠರೋಗ ಮೊದಲಾದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯಲ್ಲಿ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರವಾಗಿದೆ. ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುವುದು, ನೀರು ಸಂಗ್ರಹವಾಗುವ ಸ್ಥಳಗಳ ಪರಿಶೀಲನೆ, ಜನರಿಗೆ ಅರಿವು ಮೂಡಿಸುವುದು ಸೇರಿದಂತೆ ರೋಗ ಲಕ್ಷಣ ಹೊಂದಿದವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅವರ ದೈನಂದಿನ ಕೆಲಸಗಳಲ್ಲಿ ಒಂದಾಗಿದೆ. ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಜನ ಮತ್ತು ಆರೋಗ್ಯ ಇಲಾಖೆಯ ನಡುವೆ ಸೇತುವೆಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರು ಬರುವ ಮೊದಲು ಗ್ರಾಮೀಣ ಆರೋಗ್ಯ ಕ್ಷೇತ್ರದ ಸ್ಥಿತಿ ಆತಂಕಕಾರಿಯಾಗಿತ್ತು. ಶಿಶು ಮರಣ ಪ್ರಮಾಣ, ತಾಯಿ ಮರಣ ಪ್ರಮಾಣ ಮತ್ತು ಅಸುರಕ್ಷಿತ ಮನೆ ಹೆರಿಗೆಗಳ ಪ್ರಮಾಣ ಹೆಚ್ಚಾಗಿತ್ತು. ಆದರೆ ಆಶಾ ಕಾರ್ಯಕರ್ತೆಯರ ಸೇವೆಯಿಂದ ಈ ಸ್ಥಿತಿಯಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. 2005ರ ನಂತರ ತಾಯಿ ಮತ್ತು ಶಿಶು ಮರಣ ಪ್ರಮಾಣವು ಬಹಳಷ್ಟು ಇಳಿಕೆಯಾಗಿದೆ. ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ. ಜನರಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಹೆಚ್ಚುವಂತೆ ಮಾಡಲು ಆಶಾ ಕಾರ್ಯಕರ್ತೆಯರ ಶ್ರಮವೇ ಪ್ರಮುಖ ಕಾರಣವಾಗಿದೆ.

ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ದೇಶವೇ ಮೆಚ್ಚುವಂತಾಯಿತು. ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕಿತರ ಮಾಹಿತಿ ಸಂಗ್ರಹಿಸುವುದು, ಕ್ವಾರಂಟೈನ್ ಮೇಲ್ವಿಚಾರಣೆ, ಹಿರಿಯ ನಾಗರಿಕರ ಆರೋಗ್ಯ ಪರಿಶೀಲನೆ, ಜ್ವರ ಸಮೀಕ್ಷೆ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಅವರು ಫ್ರಂಟ್‌ಲೈನ್ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಿದರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ ಇವರ ಸೇವೆಯನ್ನು ಕೇಂದ್ರ ಆರೋಗ್ಯ ಸಚಿವಾಲಯವೂ ಪ್ರಶಂಸಿಸಿತು.

ಇಷ್ಟೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಆಶಾ ಕಾರ್ಯಕರ್ತೆಯರಿಗೆ ಸಾಕಷ್ಟು ಸವಾಲುಗಳಿವೆ. ನಿಗದಿತ ಸಂಭಾವನೆ ಇಲ್ಲದಿರುವುದು, ಪ್ರೋತ್ಸಾಹಧನ ವಿಳಂಬವಾಗುವುದು, ಅಗತ್ಯ ಸುರಕ್ಷತಾ ಸಾಮಗ್ರಿಗಳ ಕೊರತೆ, ಜನರಿಂದ ಎದುರಾಗುವ ತೊಂದರೆಗಳು, ಕೆಲವೊಮ್ಮೆ ಹಲ್ಲೆಗಳನ್ನೂ ಕೂಡ ಎದುರಿಸಬೇಕಾಗುತ್ತದೆ. ಆದರೂ ಸಮಾಜ ಸೇವೆಯ ಮನೋಭಾವದಿಂದ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.

ಈ ದಿನ.ಕಾಮ್ ಜತೆಗೆ ಮಾತನಾಡಿದ ಪಿ ಎಸ್ ಸಂಧ್ಯಾ ಅವರು, “ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರಿಗೆ ಕಳೆದ ಒಂದು ವರ್ಷದಿಂದ ಪ್ರೋತ್ಸಾಹ ಧನ ಮತ್ತು ಗೌರವ ಧನ ಸರಿಯಾಗಿ ದೊರೆಯುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಪ್ರೋತ್ಸಾಹ ಧನ ಬಾಕಿಯಿದ್ದು, ಕಳೆದ ಎರಡು ತಿಂಗಳಿನಿಂದ ಗೌರವ ಧನವೂ ಬಂದಿಲ್ಲ. ಇದರಿಂದ ಆಶಾ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಹೇಳಿದರು.

“ಇದೇ ವೇಳೆ ಇಎಂಎಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಿರುವ ಪತ್ರದ ಮೂಲಕ ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದ ನಾಲ್ಕು ವಿಧದ ಕೆಲಸಗಳನ್ನು ಏಕಾಏಕಿ ರದ್ದುಪಡಿಸಲಾಗಿದೆ ಎಂದು ಆರೋಪಿಸಿದ ಅವರು, ಈ ಕ್ರಮದಿಂದ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಆರೋಗ್ಯ ಸೇವೆಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಜತೆಗೆ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ₹1,000ದಷ್ಟು ಆರ್ಥಿಕ ನಷ್ಟ ಉಂಟಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆದು, ಹಿಂದಿನಂತೆ ಕಾರ್ಯಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕು. ಬಾಕಿಯಿರುವ ಪ್ರೋತ್ಸಾಹ ಧನ, ಗೌರವ ಧನ, ಎನ್‌ಸಿಡಿ, ಟಿಬಿ ಹಾಗೂ ಟಿಬಿಐ ಸಂಬಂಧಿತ ಹಣವನ್ನು ಕೂಡಲೇ ಪಾವತಿಸಬೇಕು” ಎಂದು ಆಗ್ರಹಿಸಿದರು.

‘ಸಮಸ್ತ’ ಆ್ಯಪ್ ಮೂಲಕ ಪ್ರತಿಯೊಂದು ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುವಂತೆ ಆಶಾ ಕಾರ್ಯಕರ್ತೆಯರ ಮೇಲೆ ಹೆಚ್ಚುವರಿ ಒತ್ತಡ ಹೇರುತ್ತಿರುವುದು ಸೇರಿದಂತೆ ಎಲ್ಲ ಸಮಸ್ಯೆಗಳ ವಿರುದ್ಧ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿದು, ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು” ಎಂದು ಪಿ ಎಸ್ ಸಂಧ್ಯಾ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷೆ ಭಾಗ್ಯ ಮಾತನಾಡಿ, “ಆಶಾ ಕಾರ್ಯಕರ್ತೆಯರ ಬದುಕು ಹೋರಾಟದ ನಡುವೆ ಸಾಗುತ್ತಿದೆ. ಗೌರವ ಧನ, ಪ್ರೋತ್ಸಾಹ ಧನ ಬೇಕೆಂದರೆ ಬೀದಿಗಿಳಿದು ಹೋರಾಟ ಮಾಡಬೇಕು. ಕೆಲಸ ಮಾಡುತ್ತ ತಿಂಗಳುಗಟ್ಟಲೆ ಹಣ ಸಿಗದಿದ್ದರೆ ಮತ್ತೆ ಪ್ರತಿಭಟನೆ ಮಾಡಬೇಕು. ಇದೇ ನಮ್ಮ ಬದುಕಾಗಿದೆ. ಸರ್ಕಾರಗಳಿಗೆ ನಮ್ಮ ಅಳು ಕೇಳಿಸುತ್ತಿಲ್ಲ, ನಮ್ಮ ಕಷ್ಟ ಅರ್ಥವಾಗುತ್ತಿಲ್ಲ” ಎಂದು ಹೇಳಿದರು.

“ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸದಿದ್ದರೆ ಸರ್ಕಾರದ ಗಮನಕ್ಕೂ ಬರುವುದಿಲ್ಲವೆಂಬ ಪರಿಸ್ಥಿತಿ ಇದೆ. ನಾವು ಏನು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ಆಗಾಗ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ತಿಳಿಸುವ ದುಃಸ್ಥಿತಿ ಬಂದೊದಗಿದೆ” ಎಂದು ಕಿಡಿಕಾರಿದರು.

“ತಿಂಗಳಿಗೆ ಕೇವಲ ₹7 ಸಾವಿರ ಸಂಬಳ ಬರುತ್ತದೆ. ಅದನ್ನೂ ಪಡೆಯಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 18 ವರ್ಷಗಳ ಹಿಂದೆ ಎರಡು ಗಂಟೆ ಕೆಲಸ ಎಂದು ಹೇಳಿ ನೇಮಕ ಮಾಡಿಕೊಂಡ ಸರ್ಕಾರ, ಈಗ ದಿನದ 24 ಗಂಟೆಯೂ ದುಡಿಸಿಕೊಳ್ಳುತ್ತಿದೆ. ಸಾವುನೋವು, ಬಾಣಂತಿ ಆರೈಕೆ, ಮಕ್ಕಳ ಆರೋಗ್ಯ, ಕ್ಯಾನ್ಸರ್ ರೋಗಿಗಳ ಸೇವೆ ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೂ ನಮ್ಮ ಕೆಲಸಕ್ಕೆ ಮಾನ್ಯತೆ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಸರ್ಕಾರ ₹10,000 ಗೌರವ ಧನ ನೀಡುವುದಾಗಿ ಘೋಷಿಸಿದ್ದರೂ ಈವರೆಗೆ ಜಾರಿಗೆ ತರಲಿಲ್ಲ. ಹಲವಾರು ಆಶಾ ಕಾರ್ಯಕರ್ತೆಯರಿಗೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಇದೆ. ಕೆಲವರಿಗೆ ಕುಡುಕ ಗಂಡ, ಕೆಲವರಿಗೆ ಗಂಡನೇ ಇಲ್ಲ. ಮನೆ, ಮಕ್ಕಳು ಸಾಕುವ ಹೊಣೆಗಾರಿಕೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಬದುಕು ನಡೆಸುವುದು ಹೇಗೆ” ಎಂದು ಪ್ರಶ್ನಿಸಿದರು.

“ಇದರ ನಡುವೆ ಆನ್‌ಲೈನ್ ಕೆಲಸಗಳ ಒತ್ತಡವೂ ಹೆಚ್ಚಾಗಿದೆ. ಪ್ರತಿಯೊಂದು ಕೆಲಸವೂ ಮೊಬೈಲ್ ಆಧಾರಿತವಾಗಿದೆ. ಆದರೆ ಸರ್ಕಾರ ಮೊಬೈಲ್ ನೀಡುವುದಿಲ್ಲ. ಹೊಸ ಆ್ಯಪ್‌ಗಳನ್ನು ಮಾಡಿ ನಿತ್ಯವೂ ಮಾಹಿತಿ ಅಪ್ಡೇಟ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಸಿಮ್ ನೀಡಿದ್ದಾರೆ. ಆದರೆ ಅದರ ರೀಚಾರ್ಜ್ ವೆಚ್ಚವನ್ನು ಭರಿಸುವವರು ಯಾರು? ಇತ್ತ ಸಮರ್ಪಕ ಸಂಬಳವೂ ಇಲ್ಲ, ತನ್ನ ಕೆಲಸಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುವುದಿಲ್ಲ ಅಂದರೆ ನಾವು ಹೇಗೆ ಕೆಲಸ ಮಾಡಲು ಸಾಧ್ಯ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಮ್ಮನ್ನು ಡಿ ದರ್ಜೆ ನೌಕರರಂತೆಯೂ ಪರಿಗಣಿಸುತ್ತಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು. ಇಲ್ಲದಿದ್ದರೆ ನಾವು ಮಾಡುತ್ತಿರುವ ಪ್ರಮುಖ ಕೆಲಸಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು. ಆಗ ಅದರ ಪರಿಣಾಮವನ್ನು ಸರ್ಕಾರವೇ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಟಿ. ನರಸೀಪುರ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಣಿಲಾ ಮಾತನಾಡಿ, “ಆಶಾ ಕಾರ್ಯಕರ್ತೆಯರ ಮೇಲೆ ದಿನೇದಿನೆ ವಿವಿಧ ರೀತಿಯ ಹೆಚ್ಚುವರಿ ಕೆಲಸಗಳನ್ನು ಹೊರಿಸಲಾಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ದುಸ್ತರವಾಗುತ್ತಿದೆ. ಒಂದು ಕಡೆ ಸರಿಯಾದ ಸಮಯಕ್ಕೆ ಹಣ ದೊರೆಯದೇ ಇರುವುದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಹಾಗೂ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದೇ ಸವಾಲಾಗಿ ಪರಿಣಮಿಸಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಆಶಾ ಕಾರ್ಯಕರ್ತೆಯರು ನಿವೃತ್ತಿಯಾದ ಸಂದರ್ಭದಲ್ಲಿ ₹5 ಲಕ್ಷ ಇಡಿಗಂಟು ನೀಡಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ರಜೆ ಜತೆಗೆ ಪ್ರೋತ್ಸಾಹ ಧನ ಹಾಗೂ ಗೌರವ ಧನವನ್ನು ನೀಡುವ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.

“ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ ಸರ್ಕಾರ ಮತ್ತು ಸಂಬಂಧಿತ ಇಲಾಖೆ ಯಾವುದೇ ಸ್ಪಂದನೆ ನೀಡಿಲ್ಲ. ಈಗಲಾದರೂ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ, ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು” ಎಂದು ಮನವಿ ಮಾಡಿದರು.

ಕೃಷ್ಣರಾಜನಗರ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕೋಮಲ ಮಾತನಾಡಿ, “ಆಶಾ ಕಾರ್ಯಕರ್ತೆಯರಿಗೆ ಬರಬೇಕಿರುವ ಪ್ರೋತ್ಸಾಹ ಧನ ಹಾಗೂ ಗೌರವ ಧನ ಹಲವು ತಿಂಗಳಿಂದ ಬಾಕಿಯಾಗಿದೆ. ಈ ಹಿನ್ನೆಲೆ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಡಿಹೆಚ್ಓ ಅವರಿಗೆ ಮನವಿ ಸಲ್ಲಿಸಿದ್ದೇವೆ. ಮೇ 15ರೊಳಗೆ ಬಾಕಿ ಇರುವ ಇನ್ಸೆಂಟಿವ್ ಸೇರಿದಂತೆ ಎಲ್ಲ ಪಾವತಿಗಳನ್ನು ಬಿಡುಗಡೆ ಮಾಡುವುದಾಗಿ ಡಿಹೆಚ್ಓ ಭರವಸೆ ನೀಡಿದ್ದಾರೆ” ಎಂದು ಹೇಳಿದರು.

ರಾಜ್ಯ ಸರ್ಕಾರ ಆಶಾ ನಿಧಿ ತಂತ್ರಾಂಶದಲ್ಲಿ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನಕ್ಕೆ ಸಂಬಂಧಿಸಿದ 9 ಮಾಡ್ಯೂಲ್‌ಗಳನ್ನು ನಿಷ್ಕ್ರಿಯಗೊಳಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು, “ನಾವು ಕೇವಲ ಗೌರವ ಧನ ಮತ್ತು ಪ್ರೋತ್ಸಾಹ ಧನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ನಮಗೆ ಯಾವುದೇ ರೀತಿಯ ಶಾಶ್ವತ ಸಂಬಳ ಅಥವಾ ಭದ್ರತೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಏಕಾಏಕಿ ಆದೇಶ ಹೊರಡಿಸಿ ಮಾಡ್ಯೂಲ್‌ಗಳನ್ನು ರದ್ದುಪಡಿಸುವುದು ನ್ಯಾಯಸಮ್ಮತವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಆಶಾ ಕಾರ್ಯಕರ್ತೆಯರು ದಿನನಿತ್ಯ ಜನರ ಆರೋಗ್ಯ ಸೇವೆಗಾಗಿ ದುಡಿಯುತ್ತಿದ್ದಾರೆ. ಇಷ್ಟೆಲ್ಲ ಕೆಲಸ ಮಾಡಿದರೂ ಅಲ್ಪ ಪ್ರಮಾಣದ ಹಣ ಮಾತ್ರ ಸಿಗುತ್ತದೆ. ಅದನ್ನೂ ಕಿತ್ತುಕೊಳ್ಳುವ ಪ್ರವೃತ್ತಿ ಸರ್ಕಾರದಿಂದ ನಡೆಯುತ್ತಿರುವುದು ಬೇಸರದ ಸಂಗತಿ” ಎಂದು ಆರೋಪಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?ಅರಣ್ಯ ಇಲಾಖೆಯ ವಸಾಹತುಶಾಹಿ ವಿರುದ್ಧ ನಾಗರಹೊಳೆ ಆದಿವಾಸಿಗಳ ಹಕ್ಕು ಹೋರಾಟ

ಒಟ್ಟಾರೆ, ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಅಪಾರ ಮತ್ತು ಅಮೂಲ್ಯವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಅಳಿಸಲಾಗದಂತದ್ದು. ಆದ್ದರಿಂದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮಾಜ ಗೌರವಿಸಬೇಕು, ಸರ್ಕಾರ ಅವರಿಗೆ ಸೂಕ್ತ ಸಂಭಾವನೆ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. ಜನರ ಆರೋಗ್ಯ ಕಾಪಾಡುವ ಈ ನಿಸ್ವಾರ್ಥ ಸೇವಕಿಯರು ನಿಜಕ್ಕೂ ಭಾರತದ ಆರೋಗ್ಯ ಕ್ಷೇತ್ರದ ಆಧಾರ ಸ್ತಂಭಗಳೇ ಆಗಿದ್ದಾರೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ, ನಾಲ್ವರಿಗೆ ಗಾಯ

ಮಂಗಳೂರಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿಯ ತಡೆಗೋಡೆ ಕುಸಿದು...

ಯಾದಗಿರಿ | ಯಕ್ಷಿಂತಿ ಗ್ರಾಮಕ್ಕೆ ಮೂಲಸೌಲಭ್ಯ ನೀಡಿ: ಪ್ರಜಾಸೇವಾ ಅಭಿಯಾನದಲ್ಲಿ ಗ್ರಾಮಸ್ಥರ ಮನವಿ

ವಡಗೇರಾ ತಾಲ್ಲೂಕಿನ ಹಯ್ಯಾಳ ಬಿ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ...

ಯಾದಗಿರಿ | ಜನಜಾಗೃತಿ ಸಮಾವೇಶ: ಮಲ್ಲಣ್ಣ ದಾಸನಕೇರಿ ಅಧ್ಯಕ್ಷರಾಗಿ ನೇಮಕ

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಿರುವ ಮಾದಿಗರ ಜನಜಾಗೃತಿ...

ಯಾದಗಿರಿ | ಪ್ರಜಾಸೇವಾ ಅಭಿಯಾನ: ದೂರುಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಖಡಕ್ ಸೂಚನೆ

ಶಹಾಪುರ ಹಾಗೂ ಗೋಗಿ ಹೋಬಳಿ ವ್ಯಾಪ್ತಿಯ ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾದ ದೂರುಗಳ...