ಧರ್ಮಸ್ಥಳದ ಸೌಜನ್ಯ ಪ್ರಕರಣದ ನಿಷ್ಪಕ್ಷಪಾತ, ನ್ಯಾಯಯುತ ಮರುತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳ ತನಿಖೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕೊಂದವರು ಯಾರು? ಆಂದೋಲನ ಒತ್ತಾಯಿಸಿದೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಂದೋಲನದ ಸಂಚಾಲಕರು, ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಕೋರಿ ಆಕೆಯ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು (ಎಸ್.ಎಲ್.ಪಿ.) ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿ, ಈ ಕುರಿತು ತಮ್ಮ ನಿಲುವನ್ನು ಸಲ್ಲಿಸುವಂತೆ ಸಿಬಿಐಗೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ನಿರ್ದೇಶನ ನೀಡಿರುವುದನ್ನು ‘ಕೊಂದವರು ಯಾರು?’ ಆಂದೋಲನವು ಸ್ವಾಗತಿಸುತ್ತದೆ ಎಂದಿದ್ದಾರೆ.
“ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠವು 2026ರ ಮಾರ್ಚ್ 23ರಂದು ನೀಡಿರುವ ಈ ನಿರ್ದೇಶನವು ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ನಡೆಯುತ್ತಿರುವ ದೀರ್ಘಕಾಲದ ಹೋರಾಟಕ್ಕೆ ಸಂದ ಮನ್ನಣೆಯಾಗಿದೆ.
ಸುಪ್ರೀಂಕೋರ್ಟಿನ ನೋಟಿಸಿಗೆ ರಾಜ್ಯ ಸರ್ಕಾರ ಮರುತನಿಖೆಗೆ ಒಪ್ಪಿಕೊಂಡು ಅದನ್ನು ಪ್ರಾಮಾಣಿಕವಾಗಿ ನಡೆಸಬೇಕೆಂದು ನಾವು ಬಲವಾಗಿ ಆಗ್ರಹಿಸುತ್ತೇವೆ. ಈ ಅಪರಾಧ ಕೃತ್ಯದಲ್ಲಿ ಆರೋಪಿತನ ಪಾತ್ರವನ್ನು ಪತ್ತೆಹಚ್ಚದ ತನಿಖಾಧಿಕಾರಿಗಳು ತೀವ್ರ ಲೋಪ ಎಸಗಿದ್ದನ್ನು ಸಿಬಿಐ ವಿಶೇಷ ನ್ಯಾಯಾಲಯವು 2023ರಲ್ಲೇ ಸ್ಪಷ್ಟವಾಗಿ ಗುರುತಿಸಿ ಹೇಳಿದೆ. ಒಂದು ಅಪರಾಧ ಕೃತ್ಯವು ರಾಜ್ಯದ ವಿರುದ್ಧ ನಡೆಯುವ ಅಪರಾಧವಾಗಿದ್ದು, ಅಂತಹ ಕೃತ್ಯಕ್ಕೆ ತುತ್ತಾದ ಸಂತ್ರಸ್ತರ ಪರವಾಗಿ ಸರ್ಕಾರವೇ ನ್ಯಾಯಾಂಗದಲ್ಲಿ ಹೋರಾಟ ನಡೆಸಬೇಕಾದುದು ಅದರ ಕಾನೂನಾತ್ಮಕ ಜವಾಬ್ದಾರಿ ಆಗಿರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿಭಾಯಿಸಬೇಕು ಹಾಗೂ ಯಾವುದೇ ರೀತಿಯಲ್ಲೂ ಸೌಜನ್ಯ ಪ್ರಕರಣದ ನ್ಯಾಯಯುತ ಮತ್ತು ನಿಷ್ಪಕ್ಷಪಾತ ಮರುತನಿಖೆಗೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸುತ್ತೇವೆ.
ಧರ್ಮಸ್ಥಳದ ಸುತ್ತಲಿನಲ್ಲಿ ನಡೆದಿರುವ ಅಸಹಜ ಸಾವು ಮತ್ತಿತರ ಅಪರಾಧ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರವೇ ನೇಮಿಸಿದ ಎಸ್ಐಟಿ ತನಿಖೆಯಿಂದ ಸೌಜನ್ಯ ಪ್ರಕರಣವನ್ನು ಹೊರಗಿಟ್ಟ ಕಾರಣ, ಈಗ ಸುಪ್ರೀಂಕೋರ್ಟ್ ಮೂಲಕ ತೆರೆದುಕೊಳ್ಳಬಹುದಾದ ಮರುತನಿಖೆಯ ಅವಕಾಶ ಯಾವುದೇ ಕಾರಣಕ್ಕೂ ತಪ್ಪಿಹೋಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಈ ವಿಚಾರದಲ್ಲಿ ಸತ್ಯ ಮತ್ತು ನ್ಯಾಯವನ್ನು ಎತ್ತಿಹಿಡಿದು, ನೊಂದವರಿಗೆ ನಮ್ಮ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಉಳಿಸುವಂತಹ ಸಂವಿಧಾನಬದ್ಧ ಹೊಣೆಗಾರಿಕೆ ತನ್ನದಾಗಿದೆ ಎಂಬುದನ್ನು ಸರ್ಕಾರ ಹಾಗೂ ಅದರ ಪೊಲೀಸ್ ಮತ್ತಿತರ ಯಂತ್ರಾಂಗಗಳು ಅರಿತುಕೊಳ್ಳಬೇಕು.
ಧರ್ಮಸ್ಥಳದ ಸುತ್ತಲಿನಲ್ಲಿ ಸಂಭವಿಸಿದ್ದ 74 ಅಸಹಜ ಸಾವುಗಳ ತನಿಖೆಯ ಬಗ್ಗೆ ಪೂರ್ಣ ಮಾಹಿತಿ ಸಲ್ಲಿಸುವಂತೆ 2026 ಮಾರ್ಚ್ 18ರಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವುದೂ ಸಹ ಕಾನೂನು ಹೋರಾಟದ ಬಗೆಗಿನ ಜನರ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಸೌಜನ್ಯಳ ತಾಯಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳಲ್ಲಿ ಅನುಕ್ರಮವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ವಿಶೇಷ ಅರ್ಜಿಯನ್ನು ಸಲ್ಲಿಸಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಅಭಿಯಾನವು ಸಂಪೂರ್ಣ ಬೆಂಬಲ ನೀಡುತ್ತದೆ.
ಧರ್ಮಸ್ಥಳದ ಆಸುಪಾಸಿನಲ್ಲಿ ದಶಕಗಳಿಂದ ಸಂಭವಿಸಿರುವ ಅಸಹಜ ಸಾವುಗಳು, ದಬ್ಬಾಳಿಕೆ, ನಾಪತ್ತೆ, ಅತ್ಯಾಚಾರ-ಕೊಲೆಗಳು, ಹಿಂಸೆಗಳಿಂದ ಇಡೀ ರಾಜ್ಯವೇ ತಲ್ಲಣಿಸಿದ್ದು, ಈ ಎಲ್ಲವುಗಳಲ್ಲಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಅವರನ್ನು ಕಾನೂನಿನ ಶಿಕ್ಷೆಗೆ ಒಳಪಡಿಸಬೇಕೆಂದು ಮಹಿಳಾ ಸಂಘಟನೆಗಳು ಹಾಗೂ ಎಲ್ಲ ಪ್ರಗತಿಪರ ಸಂಘಟನೆಗಳು ಹೋರಾಡುತ್ತಲೇ ಬಂದಿವೆ. ಅದರ ಮುಂದುವರಿದ ಭಾಗವೇ ‘ಕೊಂದವರು ಯಾರು?’ ಆಂದೋಲನ. ದಶಕಗಳಿಂದಲೂ ಹೋರಾಡುತ್ತಿರುವ ಸಂತ್ರಸ್ತ್ರರ ಕುಟುಂಬಗಳೊಂದಿಗೆ ನಿಲ್ಲುತ್ತ, SITಯಿಂದ ಸಮಗ್ರ, ನ್ಯಾಯಯುತ ತನಿಖೆ ನಡೆಯಬೇಕೆಂದು ಒತ್ತಾಯಿಸುತ್ತ, ಅಪರಾಧಿಗಳಿಗೆ ನೆಲದ ಕಾನೂನಿನ್ವಯ ಶಿಕ್ಷೆಯಾಗುವಂತೆ ಹೋರಾಟ ನಡೆಸುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಘಟನೆಯ ಆಗ್ರಹ
- ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಂದಿರುವ ಸೌಜನ್ಯ ಪ್ರಕರಣದ ಮರುತನಿಖೆ ಅರ್ಜಿ ವಿಚಾರದಲ್ಲಿ ರಾಜ್ಯ ಸರ್ಕಾರವು ಮರುತನಿಖೆಗೆ ಬದ್ಧವಾಗಿ ನಡೆದುಕೊಳ್ಳಬೇಕು; ಯಾವ ಕಾರಣಕ್ಕೂ ಮರುತನಿಖೆಯನ್ನು ವಿರೋಧಿಸಬಾರದು.
- ಕರ್ನಾಟಕ ಹೈಕೋರ್ಟ್‌ನ ಆದೇಶದಂತೆ 74 ಅಸಹಜ ಸಾವುಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಬೇಕು ಹಾಗೂ ಸಾರ್ವಜನಿಕ ಪರಿಶೀಲನೆಗೆ ಒದಗಿಸಬೇಕು.
- ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು ತನ್ನ 2023ರ ತೀರ್ಪಿನಲ್ಲಿ ಹೇಳಿದಂತಹ ʼತಪ್ಪಿತಸ್ಥ ಅಧಿಕಾರಿಗಳುʼ ಯಾರು ಎಂಬುದನ್ನು ಅಕ್ವಿಟಲ್ ಸಮಿತಿ ತಕ್ಷಣವೇ ಗುರುತಿಸಿ ಸರ್ಕಾರಕ್ಕೆ ಸಲ್ಲಿಸಬೇಕು; ಸಾಕ್ಷ್ಯನಾಶ ಮಾಡಿದವರ ಮತ್ತು ಪ್ರಕರಣವನ್ನು ದಿಕ್ಕುತಪ್ಪಿಸಿದವರ ವಿರುದ್ಧ ಸರ್ಕಾರ ಕಾನೂನುರೀತ್ಯಾ ಕಠಿಣ ಕ್ರಮ ಜರುಗಿಸಬೇಕು.
- ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರ ಮತ್ತು ಯುವತಿಯರ ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ತನಿಖೆಯನ್ನು ಕೈಗೊಂಡಿರುವ ಬಗ್ಗೆ ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು 31.10.2025ರಂದು ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ಕೋರಿದ್ದರು. ಸದರಿ ವರದಿಯನ್ನು ಕೂಡಲೇ ಸಾರ್ವಜನಿಕಗೊಳಿಸಬೇಕು.

*ಗೌರಮ್ಮ, ಜನವಾದಿ ಮಹಿಳಾ ಸಂಘಟನೆ
*ಮಮತಾ ಯಜಮಾನ್, ನಾವೆದ್ದುನಿಲ್ಲದಿದ್ದರೆ
*ಜ್ಯೋತಿ, ಎನ್‌ಎಫ್‌ಐಡ್ಬ್ಲು
*ಮಲ್ಲಿಗೆ, ಮಹಿಳಾ ಮುನ್ನಡೆ
*ಪೂರ್ಣಾ ಆರ್. ವಕೀಲರು,
*ಶೈಲಾ, ಜನವಾದಿ ಮಹಿಳಾ ಸಂಘಟನೆ
ಪತ್ರಿಕಾಗೋಷ್ಠಿಯಲ್ಲಿ ಕೊಂದವರು ಯಾರು? ಆಂದೋಲನದ ಪರವಾಗಿ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ,
ನಾವೆದ್ದುನಿಲ್ಲದಿದ್ದರೆ ಮಮತಾ ಯಜಮಾನ್, ಎನ್‌ಎಫ್‌ಐಡಬ್ಲ್ಯು ಜ್ಯೋತಿ, ಮಹಿಳಾ ಮುನ್ನಡೆ ಮಲ್ಲಿಗೆ, ವಕೀಲರಾದ ಪೂರ್ಣಾ ಆರ್, ಜನವಾದಿ ಮಹಿಳಾ ಸಂಘಟನೆ ಶೈಲಾ ಉಪಸ್ಥಿತರಿದ್ದರು.




