ಕ್ರಿ.ಪೂ. 261ರಲ್ಲಿ ನಡೆದ ಭೀಕರ ಕಳಿಂಗ ಯುದ್ಧ ಅಶೋಕನ ಬದುಕನ್ನೇ ಬದಲಿಸಿತು. ಯುದ್ಧದ ಸಾವು-ನೋವುಗಳನ್ನು ಕಂಡು ಮರುಗಿದ ಆತ ಹಿಂಸೆಯನ್ನು ತ್ಯಜಿಸಿ, ಬೌದ್ಧ ಮಾರ್ಗವನ್ನು ಅಪ್ಪಿಕೊಂಡನು. ಕ್ರೌರ್ಯದಿಂದ ಕಾರುಣ್ಯದತ್ತ ಸಾಗಿದ ಅಶೋಕ ಕೇವಲ ಒಂದು ಧರ್ಮವನ್ನು ಪಸರಿಸುವ ಬದಲು, ‘ಧಮ್ಮ’ ಎಂಬ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದನು ಎಂದು ಮೈಸೂರಿನ ಡಿ. ಬನುಮಯ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಎಂ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಶ್ರೀರಂಗಪಟ್ಟಣ ನಗರದಲ್ಲಿ ಸಂಜಯ ಪ್ರಕಾಶನ ಹಾಗೂ ಕೆ. ಶೆಟ್ಟಹಳ್ಳಿಯ ಬುದ್ಧ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ “ಸಾಮ್ರಾಟ ಅಶೋಕ ಚಕ್ರವರ್ತಿ: ಕ್ರೌರ್ಯದಿಂದ ಕಾರುಣ್ಯದೆಡೆಗೆ” ಹಾಗೂ “ದೇವಾನಾಂಪ್ರಿಯ ಪ್ರಿಯದರ್ಶಿ ಅಶೋಕ – ಕನಗನಹಳ್ಳಿ” ಕುರಿತಾದ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿ ಇತಿಹಾಸದ ಹಲವು ಆಸಕ್ತಿದಾಯಕ ಮಗ್ಗುಲುಗಳನ್ನು ಅವರು ಬಿಚ್ಚಿಟ್ಟರು.

ಮೌರ್ಯ ಸಾಮ್ರಾಟ ಅಶೋಕನ ಬದುಕಿನ ಹಾದಿ, ಆತನ ಶಾಸನಗಳು ಹಾಗೂ ಕರ್ನಾಟಕದೊಂದಿಗಿನ ನಂಟಿನ ಕುರಿತಾದ ಹಲವು ಅಚ್ಚರಿಯ ಸಂಗತಿಗಳು ಶ್ರೀರಂಗಪಟ್ಟಣದ ಸಂಜಯ ಪ್ರಕಾಶನದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಅನಾವರಣಗೊಂಡವು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹಾದೇವ ಮಾತನಾಡಿ, “ಅಶೋಕನು ತನ್ನ ಸಂದೇಶಗಳನ್ನು ಜನರಿಗೆ ತಲುಪಿಸಲು ಬಂಡೆಗಳು ಹಾಗೂ ಕಂಬಗಳ ಮೇಲೆ ಶಾಸನಗಳನ್ನು ಕೆತ್ತಿಸಿದ ಬಗೆಯನ್ನು ವಿವರಿಸಿದರು. “ನಮ್ಮ ದೇಶದ ರಾಷ್ಟ್ರೀಯ ಲಾಂಛನವಾದ ‘ನಾಲ್ಕು ಮುಖದ ಸಿಂಹ’ ಸಾರನಾಥದ ಅಶೋಕ ಸ್ತಂಭದಿಂದಲೇ ಮೂಡಿಬಂದಿದೆ. ಅಶೋಕನ ಕಾಲದಲ್ಲಿ ಕರ್ನಾಟಕದ ಮೇಲೂ ಮೌರ್ಯರ ಆಳ್ವಿಕೆ ಇತ್ತು. ರಾಯಚೂರಿನ ಮಸ್ಕಿ, ಚಿತ್ರದುರ್ಗದ ಬ್ರಹ್ಮಗಿರಿ, ಕಲಬುರಗಿಯ ಸನ್ನತಿಯಲ್ಲಿ ಅಶೋಕನ ಶಾಸನಗಳು ದೊರೆತಿವೆ. ಮಸ್ಕಿ ಶಾಸನದಲ್ಲಿ ಮೊದಲ ಬಾರಿಗೆ ‘ಅಶೋಕ’ ಎಂಬ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದೆ” ಎಂದರು.
ಕಲಬುರಗಿ ಬಳಿಯ ಕನಗನಹಳ್ಳಿ ಸ್ತೂಪದಲ್ಲಿ ಸುಣ್ಣದಕಲ್ಲಿನ (ಸಿಮೆಂಟ್ ತಯಾರಿಕೆಗೆ ಬಳಸುವ ಮೃದುವಾದ ಶಿಲೆ) ಮೇಲೆ ಕೆತ್ತಲಾಗಿರುವ ಅಶೋಕ, ಆತನ ಪತ್ನಿ, ಮಗಳು ಹಾಗೂ ಆತನಿಗೆ ಛತ್ರಿ ಹಿಡಿದಿರುವವರ ಶಿಲ್ಪಗಳ ಕುರಿತು ಅವರು ಮಾಹಿತಿ ನೀಡಿದರು. ಈ ಆಧಾರಗಳೇ ಸಾಮ್ರಾಟ ಅಶೋಕನು ಕನಗನಹಳ್ಳಿ ಹಾಗೂ ಸನ್ನತಿಗೆ ಭೇಟಿ ನೀಡಿದ್ದಕ್ಕೆ ಪ್ರಮುಖ ಸಾಕ್ಷಿಯಾಗಿವೆ ಎಂದರು.
“ವೈದಿಕ ಪರಂಪರೆಯ ದೇವಸ್ಥಾನವೊಂದು ಬೌದ್ಧ ಶಾಸನವನ್ನು ಬಳಸಿಕೊಂಡಿರುವ ಬಗೆ ಅತ್ಯಂತ ಅಚ್ಚರಿಯದ್ದಾಗಿದೆ. ಸನ್ನತಿಯಲ್ಲಿರುವ ಚಂದ್ರಲಾಂಬಾ ದೇವಸ್ಥಾನದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅಶೋಕನ ಶಾಸನವನ್ನೇ ಬಳಸಿಕೊಳ್ಳಲಾಗಿದೆ. ಶಾಸನದ ನಟ್ಟ ನಡುವೆ ರಂಧ್ರ ಕೊ
ರೆದು, ಅದನ್ನು ಕೆಳಗಡೆ ಇಟ್ಟು, ಅದರ ಮೇಲೆಯೇ ದೇವಿಯ ಮೂರ್ತಿಯನ್ನು ಕೂರಿಸಲಾಗಿದೆ. ಇಂದಿಗೂ ಈ ತಾಣಗಳಿಗೆ ತೆರಳಿ ಈ ಐತಿಹಾಸಿಕ ಕುರುಹುಗಳನ್ನು ಕಣ್ಣಾರೆ ಕಾಣಬಹುದು” ಎಂದು ಬೆರಗಿನ ಸಂಗತಿಯನ್ನು ಹಂಚಿಕೊಂಡರು.

ಇದನ್ನೂ ಓದಿ: ಶ್ರೀರಂಗಪಟ್ಟಣ | ಪ್ರೀತಿ-ಸ್ನೇಹವೇ ನಿಜವಾದ ದೇವರು: ಸಾಹಿತಿ ಪ್ರೊ. ತುಕಾರಾಂ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಗಾಂಧಿವಾದಿ ಡಾ. ಬಿ ಸುಜಯ ಕುಮಾರ್ ವಹಿಸಿದ್ದರು. ಸಂಜಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಬುದ್ಧ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಸಿ ಎಸ್ ವೆಂಕಟೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಇಲ್ಯಾಸ್ ಅಹಮದ್, ಐಕ್ಯ ಅಲಯನ್ಸ್ ಸಂಸ್ಥೆಯ ಎನ್ ಸರಸ್ವತಿ, ಮಹಿಳಾ ಸಾಂತ್ವನ ಸಂಸ್ಥೆಯ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಸಾಹಿತಿ ಸಾ. ವೆ. ರ. ಸ್ವಾಮಿ, ಗಂಜಾಂ ಆಯುಬ್, ಕ್ಯಾತನಹಳ್ಳಿ ಚಂದ್ರಣ್ಣ, ವಕೀಲ ಪುಟ್ಟಸ್ವಾಮಿ, ಎಸ್ ಆರ್ ಸಿದ್ದೇಶ್, ಚಿಕ್ಕ ತಮ್ಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.





